ಕುಮಟಾ: ದಿವಗಿ ಗ್ರಾಪಂ ವ್ಯಾಪ್ತಿಯ ತಂಡ್ರಕುಳಿಯಲ್ಲಿ ಚತುಷ್ಪಥ ಕಾಮಗಾರಿಗಾಗಿ ಶುಕ್ರವಾರ ಬಂಡೆ ಒಡೆಯಲು ಅವೈಜ್ಞಾನಿಕವಾಗಿ ಬಾಂಬ್ ಸಿಡಿಸಿರುವುದನ್ನು ವಿರೋಧಿಸಿ ಸ್ಥಳೀಯರು ಕೆಲಗಂಟೆಗಳ ಕಾಲ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ತಂಡ್ರಕುಳಿಯಲ್ಲಿ ಚತುಷ್ಪಥ ಕಾಮಗಾರಿಗಾಗಿ ಮಧ್ಯಾಹ್ನ ಅವೈಜ್ಞಾನಿಕವಾಗಿ ಸಿಡಿಮದ್ದನ್ನು ಸ್ಫೊಧೀಟಿಸಿದ್ದರಿಂದ ಮನೆ, ಶಾಲೆ, ಅಂಗನವಾಡಿಗಳ ಮೇಲೆ ಭಾರೀ ಗಾತ್ರದ ಕಲ್ಲುಗಳ ಸುರಿಮಳೆಯಾಗಿ ಸ್ಥಳೀಯರು ಜೀವಭಯದಿಂದ ಮನೆ ಬಿಟ್ಟಿದ್ದಾರೆ. ಸಿಡಿದ ಕಲ್ಲುಗಳು ಸೂರನ್ನು ಒಡೆದುಕೊಂಡು ಒಳಗೆ ಬಿದ್ದರೂ ಅದೃಷ್ಟವಶಾತ್ ಯಾರಿಗೂ ಜೀವಾಪಾಯವಾಗಿಲ್ಲ. ರಾಘವೇಂದ್ರ ಅಪ್ಪಯ್ಯ ಅಂಬಿಗ ಎಂಬುವವರ ಮನೆಯ ಕೋಣೆಯೊಳಗೆ ಮಕ್ಕಳು ಮಲಗಿದ್ದ ಹಾಸಿಗೆ ಪಕ್ಕವೇ ದೊಡ್ಡ ಕಲ್ಲು ಬಿದ್ದಿದ್ದು, ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ. ಶಾಲೆಯ ಹಂಚುಗಳನ್ನು ಪುಡಿಗಟ್ಟಿ ಒಳಗೆ ಕಲ್ಲುಗಳು ಬಿದ್ದಿದ್ದು, ಒಂದೊಮ್ಮೆ ಕೊಠಡಿಯಲ್ಲಿ ಮಕ್ಕಳು ಇದ್ದಿದ್ದರೆ ಏನಾಗಬಹುದಿತ್ತು ಎಂದು ಜನ ಪ್ರಶ್ನಿಸಿದ್ದಾರೆ.
ತಕ್ಷಣ ಸಂಘಟಿತರಾದ ಗ್ರಾಮಸ್ಥರು ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐಆರ್‌ಬಿಯವರು ಅವೈಜ್ಞಾನಿಕವಾಗಿ ಬಾಂಬ್ ಸಿಡಿಸುವುದನ್ನು ವಿರೋಧಿಸಿ ಪ್ರತಿಭಟಿಸಿದರು. 2 ತಾಸುಗಳಾದರೂ ಐಆರ್‌ಬಿ ಅಥವಾ ಸರ್ಕಾರದ ಯಾವ ಅಧಿಕಾರಿಯೂ ಸ್ಥಳಕ್ಕೆ ಬಾರದೇ ಇರುವುದು ಜನರ ಆಕ್ರೋಶ ಹೆಚ್ಚಲು ಕಾರಣವಾಯಿತು. ನಂತರ ಸ್ಥಳೀಯರು ಹೆದ್ದಾರಿ ತಡೆ ನಡೆಸಿ ನ್ಯಾಯಕ್ಕಾಗಿ ಘೋಷಣೆ ಕೂಗಲಾರಂಭಿಸಿದರು. ಸಿಪಿಐ ಸಂತೋಷ ಶೆಟ್ಟಿ, ತಹಶೀಲ್ದಾರ್ ಪಿ.ಕೆ. ದೇಶಪಾಂಡೆ, ಪಿಎಸೈ ಈಸಿ ಸಂಪತ್ ಸ್ಥಳಕ್ಕೆ ಆಗಮಿಸಿ ಘಟನೆಯ ಮಾಹಿತಿ ಪಡೆದರು. ಬಾಂಬ್ ಸ್ಫೊಧೀಟದಿಂದ ನೂರಾರು ಮೀಟರು ದೂರಕ್ಕೆ ಸಿಡಿದ ದೊಡ್ಡ ಕಲ್ಲುಗಳು ಉಂಟು ಮಾಡಿದ ಹಾನಿಯನ್ನು ಕಂಡು ದಂಗಾದರು.
ದಿವಗಿ ಪಂಚಾಯಿತಿ ಮಾಜಿ ಸದಸ್ಯ ಆರ್.ಕೆ. ಅಂಬಿಗ ಮಾತನಾಡಿ, ಚತುಷ್ಪಥ ಕಾಮಗಾರಿಯಿಂದ ತಂಡ್ರಕುಳಿಯಲ್ಲಿ ವರ್ಷದ ಹಿಂದೆ ಮೂರು ಜೀವಗಳ ಹಾನಿಯಾಗಿದೆ. ಪರಿಹಾರ ಕೊಡುತ್ತೇವೆ ಊರುಬಿಡಿ ಎಂದ ಸರ್ಕಾರ ಈವರೆಗೆ ನಯಾಪೈಸೆ ಜನರಿಗೆ ಕೊಟ್ಟಿಲ್ಲ. ದಿಕ್ಕಿಲ್ಲದ ಜನ ಪುನಃ ತಂಡ್ರಕುಳಿಯಲ್ಲೇ ಗೂಡುಕಟ್ಟಿಕೊಂಡು ಬದುಕು ನಡೆಸುತ್ತಿದ್ದಾರೆ. ಸ್ಥಳೀಯರಿಗೆ ಹೇಳದೇ ಕೇಳದೇ ಅವೈಜ್ಞಾನಿಕವಾಗಿ ಬಾಂಬ್ ನ್ಪೊಧೀಟಿಸಿದ್ದಾರೆ. ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆ ಐಆರ್‌ಬಿ ಕಂಪನಿಯದ್ದಾಗಿದೆ. ನಮಗೆ ಭರವಸೆ ಕೊಟ್ಟಂತೆ ಅಧಿಕಾರಿಗಳು ನಡೆದುಕೊಳ್ಳಬೇಕು. ಇಲ್ಲವಾದರೆ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದರು.
ಅಂಬಿಗ ಸಮಾಜದ ಕಾರ್ಯದರ್ಶಿ ಗಣೇಶ ಅಂಬಿಗ ಮಾತನಾಡಿ, ಅಧಿಕಾರಿಗಳು ತಂಡ್ರಕುಳಿಯ ಜನತೆಗೆ ಪರಿಹಾರದ ಬಗ್ಗೆ ಕೊಟ್ಟ ಭರವಸೆಯನ್ನು ಮೊದಲು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಚರ್ಚಿಸಿದ ತಹಶೀಲ್ದಾರ ದೇಶಪಾಂಡೆಯವರು ಈ ಕೂಡಲೇ ಇಲ್ಲಿನ ರಸ್ತೆ ಕಾಮಗಾರಿ ಸ್ಥಗಿತಗೊಳಿಸಲಾಗುವುದು. ಲೋಕಸಭೆ ಚುನಾವಣೆ ಫಲಿತಾಂಶದ ನಂತರ ದಿನಾಂಕ ನಿಗದಿ ಪಡಿಸಿ ಉಪವಿಭಾಗಾಧಿಕಾರಿಗಳ ಸಮಕ್ಷಮ ಸ್ಥಳೀಯರ ಸಭೆ ನಡೆಸಿ ಮುಂದಿನ ತೀರ್ಮಾನಕ್ಕೆ ಬರಲಾಗುವುದು ಎಂದರು.