ಚಾಮರಾಜನಗರ: ರಾಜ್ಯ ಸರ್ಕಾರ ಪ್ರಾಥಮಿಕ ಶಾಲೆಗಳಲ್ಲೇ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಿರುವುದನ್ನು ವಿರೋಧಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಮೇ 30ರಂದು ಬೆಂಗಳೂರಿನ ವಿಧಾನಸೌಧದ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಜಿಲ್ಲಾ ಸಮಿತಿ ವತಿಯಿಂದ 2000 ಮಂದಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಸಮಿತಿ ಅಧ್ಯಕ್ಷೆ ಕೆ.ಸುಜಾತಾ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೂರ್ವ ಪ್ರಾಥಮಿಕ ತರಗತಿಗಳಾದ ಎಲ್ಕೆಜಿ, ಯುಕೆಜಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಸ್ಥಾಪಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಮನವಿ ನೀಡಿದ್ದರೂ ಸರ್ಕಾರ ಇದಕ್ಕೆ ಕಿವಿಗೊಟ್ಟಿಲ್ಲ. ಈಗ ಪ್ರಾಥಮಿಕ ಶಾಲೆಗಳಲ್ಲೇ ಯುಕೆಜಿ, ಎಲ್ಕೆಜಿ ಶಿಕ್ಷಣ ಪ್ರಾರಂಭಿಸಿದ್ದು ಪೊಷಕರು ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ಕಳುಹಿಸದೇ ಯುಕೆಜಿ, ಎಲ್ಕೆಜಿ ಶಿಕ್ಷಣಕ್ಕೆ ದಾಖಲು ಮಾಡುತ್ತಿದ್ದಾರೆ. ಇದರಿಂದ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಹಾಜರಾತಿ ಕಡಿಮೆಯಾಗಿದೆ ಎಂದರು.
ಅಂಗನವಾಡಿ ಕೇಂದ್ರ ಖಾಲಿ ಖಾಲಿ: ರಾಜ್ಯ ಸರ್ಕಾರ, ಪ್ರಾಥಮಿಕ ಶಾಲೆಯಲ್ಲಿ ಯುಕೆಜಿ, ಎಲ್ಕೆಜಿ ಶಿಕ್ಷಣ ಪ್ರಾರಂಭಿಸಿ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳು ಬಾರದಂತೆ ಮಾಡಿ ಅಂಗನವಾಡಿ ಕೇಂದ್ರಗಳನ್ನು ಕುಗ್ಗಿಸುತ್ತಿದೆ. ಯುಕೆಜಿ, ಎಲ್ಕೆಜಿ ಶಿಕ್ಷಣಕ್ಕೆ ಮಕ್ಕಳು ದಾಖಲಾಗುತ್ತಿರುವುದರಿಂದ ಅಂಗನವಾಡಿ ಕೇಂದ್ರಗಳು ಖಾಲಿ ಖಾಲಿಯಾಗುತ್ತಿದ್ದು, 3 ವರ್ಷದಿಂದ 6 ವರ್ಷದ ಮಕ್ಕಳು ಅಂಗನವಾಡಿಗೆ ದಾಖಲಾಗದೇ ಯುಕೆಜಿ ಎಲ್ಕೆಜಿ ಶಿಕ್ಷಣಕ್ಕೆ ದಾಖಲಾಗುತ್ತಿದ್ದಾರೆಂದರು.
ಸಂಘದಿಂದ ವಿರೋಧ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರನ್ನು ಹಾಗೂ ಶಿಕ್ಷಣ ಇಲಾಖೆ ಸಚಿವರನ್ನು ಕರೆದು ಸಭೆ ನಡೆಸದೇ ಮುಖ್ಯಮಂತ್ರಿಯವರು ಈ ತೀರ್ಮಾನ ಕೈಗೊಂಡಿರುವುದನ್ನು ರಾಜ್ಯ ಅಂಗನವಾಡಿ ನೌಕರರ ಸಂಘ ವಿರೋಧಿಸುತ್ತದೆ ಎಂದು ಹೇಳಿದರು.
ಶಿಶುಪಾಲನಾ ಕೇಂದ್ರವಾಗಿ ಪರಿವರ್ತಿಸಿ: ಅಂಗನವಾಡಿ ಕೇಂದ್ರಗಳಲ್ಲೇ ಯುಕೆಜಿ-ಎಲ್ಕೆಜಿ ಶಿಕ್ಷಣ ಪ್ರಾರಂಭಿಸಿ ಅಂಗನವಾಡಿ ಕೇಂದ್ರಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಿ ಅಂಗನವಾಡಿ ಕೇಂದ್ರದಿಂದಲೇ ಮುಂದಿನ ತರಗತಿಗೆ ವರ್ಗಾವಣೆ ಪತ್ರ ರವಾನಿಸುವ ವ್ಯವಸ್ಥೆ ಮಾಡಬೇಕು. ಶಾಸನ ಬದ್ದವಾಗಿ ಕನಿಷ್ಠ ವೇತನ ನಿಗದಿ ಮಾಡಬೇಕು, ಕೊಥಾರಿ ಕಮಿಷನ್ ವರದಿ ಸಂಪೂರ್ಣವಾಗಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ನೌಕರರ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ನಾಗಮಣಿ, ತಾಲೂಕು ಅಧ್ಯಕ್ಷೆ ರೇವಮ್ಮ, ತಾಲೂಕು ಕಾರ್ಯದರ್ಶಿ ಶಾಹಿದಾ ಬಾನು, ಖಜಾಂಚಿ ಯಶೋದಾ ಇದ್ದರು.