ರಾಮನಗರ: ಚನ್ನಮಾನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಪರಿವರ್ತಿಸುವುದು ಬೇಡ ಎಂದು ಗ್ರಾಮಸ್ಥರು ವಿರೋಧ ವ್ಯಕ್ತ ಪಡಿಸಿದ್ದಾರೆ. ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಜಮಾಯಿಸಿದ ಗ್ರಾಮಸ್ಥರು, ಕ್ವಾರಂಟೈನ್ ಕೇಂದ್ರವನ್ನಾಗಿ ಮಾಡಲು ತಾಪಂ ಶಿಪಾರಸು ಮಾಡಿದೆ ಎಂಬ ಮಾಹಿತಿ ಆಧರಿಸಿ ವಿರೋಧಿಸುತ್ತಿರುವುದಾಗಿ ತಿಳಿಸಿದರು.
ತಾಲೂಕು ಪಂಚಾಯಿತಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ವಿಭೂತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಲು ತಾಲೂಕು ಪಂಚಾಯಿತಿ ಶಿಪಾರಸು ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಗ್ರಾಮದ ಮುಖಂಡ ವೆಂಕಟಸ್ವಾಮಿ ಮಾತನಾಡಿ, ಗ್ರಾಮದ ಮಧ್ಯಭಾಗದಲ್ಲಿ ಸರ್ಕಾರಿ ಶಾಲೆ ಇದ್ದು, ಕೇವಲ ನಾಲ್ಕು
ಕೊಠಡಿಗಳು ಮಾತ್ರ ಇವೆ. ಕ್ವಾರಂಟೈನ್ ಕೇಂದ್ರಕ್ಕೆ ವ್ಯವಸ್ಥೆಗೆ ಕಟ್ಟಡ ತಕ್ಕದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಸರ್ಕಾರದ ಕಟ್ಟಡಗಳು ಅನೇಕ ಇವೆ. ಅವುಗಳನ್ನು ಬಿಟ್ಟು ಗ್ರಾಮದ ನಡುವಿರುವ ಸರ್ಕಾರಿ ಶಾಲೆಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸುವುದು ಬೇಡ. ಕೋವಿಡ್ ಸೋಂಕು ಹರಡುತ್ತಿರುವ ರೀತಿಯ ಬಗ್ಗೆ ಗ್ರಾಮಸ್ಥರಲ್ಲಿ ಅರಿವಿರುವ ಕಾರಣದಿಂದಾಗಿಯೇ ವಿರೋಧಿಸುತ್ತಿದ್ದೇವೆ ಎಂದರು.
ಮುಖಗವಸು ಧರಿಸಿದ ಗ್ರಾಮಸ್ಥರು, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಗ್ರಾಮದ ಮುಖಂಡ ಟಿ. ನಾಗೇಶ್, ಸಿ.ಆರ್. ರಾಮಕೃಷ್ಣಯ್ಯ, ಪಿ. ರಾಜು, ಗ್ರಾಪಂ ಸದಸ್ಯ ಸರಸ್ವತಮ್ಮ, ಎ. ಅಂಕಯ್ಯ, ಸಿ. ಮಹೇಶ್, ಸಿ.ಗಂಗರಾಜು, ಎಚ್. ರಾಜು, ರೇವಣ್ಣ, ಡ್ರೈವರ್ ಸುರೇಶ್, ಸಿ .ಚಂದ್ರ ಮಲವಯ್ಯ, ಅರ್ಕೇಶ್, ಮಹಿಳಾ ಮುಖಂಡ ಅನುಸೂಯಮ್ಮ, ವೆಂಕಟಮ್ಮ, ಶಾಂತಮ್ಮ, ರತ್ನಮ್ಮ, ಲಕ್ಷ್ಮೀ ಮುಂತಾದವರಿದ್ದರು.