Advertisement

ಒಲಿಂಪಿಕ್ಸ್‌ಗೆ ಜಪಾನ್‌ನಲ್ಲೇ ವಿರೋಧ

10:08 AM Mar 18, 2020 | sudhir |

ಒಂದು ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ನಡೆಸುವುದೆಂದರೆ ಸುಲಭದ ಮಾತಲ್ಲ. ಕೂಟದ ಖರ್ಚು, ವ್ಯಯವಾಗುವ ಮಾನವಶಕ್ತಿ, ಬೇಕಾಗುವ ತಯಾರಿ, ಮುಂಜಾಗ್ರತೆ… ಇವೆಲ್ಲ ಒಲಿಂಪಿಕ್ಸ್‌ ಸಂಘಟಿಸುವ ರಾಷ್ಟ್ರದ ಹೊಣೆಗಾರಿಕೆ. ಇದನ್ನೆಲ್ಲ ಮಾಡಿ ಮುಗಿಸುವಾಗ ಆತಿಥೇಯ ದೇಶ ಹೈರಾಣಾಗಿರುತ್ತದೆ. ಸಾಮಾನ್ಯ ದೇಶಗಳಿಗೆ ಈ ಕೂಟ ನಡೆಸುವುದು ಕನಸಿನ ಮಾತೇ ಸರಿ. ಇಂಥ ಹೊತ್ತಿನಲ್ಲಿ ಕೊರೊನಾದಂಥ ಮಹಾಮಾರಿ ಬಂದಪ್ಪಳಿಸಿ ಕೂಟವೇ ರದ್ದಾಗುವ ಪರಿಸ್ಥಿತಿ ಎದುರಾದರೆ? ಒಂದು ಲೆಕ್ಕಾಚಾರದ ಪ್ರಕಾರ ಟೋಕಿಯೊ ಒಲಿಂಪಿಕ್ಸ್‌ ರದ್ದಾದರೆ ಜಪಾನ್‌ 50 ಸಾವಿರ ಕೋಟಿ ರೂ. ನಷ್ಟ ಅನುಭವಿಸಲಿದೆ!

Advertisement

ಟೋಕಿಯೊ: ಕೊರೊನಾ ಕಾಟದಿಂದಾಗಿ ಈ ವರ್ಷ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ನಡೆಸಬೇಕೇ ಅಥವಾ ಬೇಡವೇ ಎಂಬ ಚರ್ಚೆ ನಡೆಯುತ್ತಿರುವಾಗಲೇ ಈ ಪ್ರತಿಷ್ಠಿತ ಕ್ರೀಡಾಕೂಟದ ಆತಿಥ್ಯ ವಹಿಸಿಕೊಂಡಿರುವ ಜಪಾನಿನಲ್ಲೇ ಇದಕ್ಕೆ ವಿರೋಧ ವ್ಯಕ್ತವಾಗಿರುವುದು ಹೊಸ ಬೆಳವಣಿಗೆ. ಹಟದಿಂದ ಕ್ರೀಡಾಕೂಟ ನಡೆಸುವುದು ಬೇಡ ಎಂಬುದು ಅನೇಕರ ಅಭಿಪ್ರಾಯವಾಗಿದೆ.
ಟಿವಿ ವಾಹಿನಿಯೊಂದು ಒಲಿಂಪಿಕ್ಸ್‌ ಬೇಕೇ-ಬೇಡವೇ ಎಂಬ ಸಮೀಕ್ಷೆ ನಡೆಸಿದಾಗ ಹೆಚ್ಚಿನವರು ಒಲಿಂಪಿಕ್ಸ್‌ ನಡೆಸಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟ್ರಂಪ್‌ ನಿಲುವಿಗೆ ಸಹಮತ
90ರ ಹರೆಯದ ನಿವೃತ್ತ ಸರಕಾರಿ ಉದ್ಯೋಗಿ ಮಸಾವೊಸುಗವ ಪ್ರಕಾರ, ಜನರ ಆರೋಗ್ಯದ ದೃಷ್ಟಿಯಿಂದ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಒಂದು ವರ್ಷದ ಮಟ್ಟಿಗೆ ಮುಂದೂಡುವುದು ಸಮುಚಿತ ಕ್ರಮವಾಗಬಹುದು. ಈ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿಲುವಿಗೆ ಸಹಮತವಿದೆ. ಈಗ ವಿಶ್ವಾದ್ಯಂತ ಇರುವ ಆತಂಕವನ್ನು ನೋಡಿ… ಯಾರಾದರೂ ಈ ಪರಿಸ್ಥಿತಿಯಲ್ಲಿ ಆಡಲು ಬಂದಾರೆಯೇ ಎಂದು ಪ್ರಶ್ನಿಸುತ್ತಾರೆ ಸುಗವ ಅವರು.
ಕೊರೊನಾ ಹಾವಳಿ ಜೂನ್‌-ಜುಲೈ ವೇಳೆ ನಿಯಂತ್ರಣಕ್ಕೆ ಬಾರದಿದ್ದರೆ ಒಲಿಂಪಿಕ್ಸ್‌ ಕೂಟವನ್ನು ಮುಂದೂಡುವುದೇ ಒಳ್ಳೆಯದು. ನಾವು ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಎನ್ನುತ್ತಾರೆ ವಕೀಲ ಮ್ಯಾನ್‌ಫ್ರೆಡ್‌ ಒಟ್ಟೊ.

ಟಿವಿ ವಾಹಿನಿಗಳ ಸಮೀಕ್ಷೆ
ಎನ್‌ಎಚ್‌ಕೆ ಟಿವಿ ವಾಹಿನಿಯ ಜತೆಗೆ ಎಎಫ್ಪಿಯೂ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿದೆ. ಶೇ. 45 ಮಂದಿ ಒಲಿಂಪಿಕ್ಸ್‌ ಕೂಟ ನಡೆಸುವುದನ್ನು ವಿರೋಧಿಸಿದ್ದಾರೆ. ಇದೇ ವೇಳೆ ಶೇ. 40 ಮಂದಿ ನಡೆಸಬಹುದು ಎಂದು ಹೇಳಿದ್ದಾರೆ. ಅನಂತರ “ಕೊÂಡೊ’ ಸುದ್ದಿ ಸಂಸ್ಥೆ ಸೋಮವಾರ ಇದೇ ಮಾದರಿಯ ಸಮೀಕ್ಷೆ ನಡೆಸಿದಾಗ 1000 ಜನರಲ್ಲಿ ಶೇ. 69.9ರಷ್ಟು ಮಂದಿ ಟೋಕಿಯೊದಲ್ಲಿ ಈ ವರ್ಷ ಒಲಿಂಪಿಕ್ಸ್‌ ನಡೆಯುವ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಸಾರ್ವಜನಿಕ ಅಭಿಪ್ರಾಯ ವೈರಸ್‌ ಹಾವಳಿಯ ನಡುವೆ ಕ್ರೀಡಾಕೂಟ ನಡೆಸುವುದು ಬೇಡ ಎಂಬುದರ ಪರವಾಗಿದೆ. ಆದರೆ ಜಪಾನಿನ ಅಧ್ಯಕ್ಷ ಶಿಂಜೊ ಅಬೆ ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯ ಮುಖ್ಯಸ್ಥ ಥಾಮಸ್‌ ಬಾಕ್‌ ಒಲಿಂಪಿಕ್ಸ್‌ ತಯಾರಿಯನ್ನು ಮುಂದುವರಿಸಲು ಒತ್ತಾಯಿಸುತ್ತಿದ್ದಾರೆ.
ಜಪಾನ್‌ನಲ್ಲಿ ಕೊರೊನಾ ಹಾವಳಿ ತೀವ್ರವಾಗಿಯೇನೂ ಇಲ್ಲ. ಇಷ್ಟರ ತನಕ 814 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 24 ಮಂದಿ ಸಾವಿಗೀಡಾಗಿದ್ದಾರೆ. ಆದರೆ ಜಪಾನ್‌ ಪ್ರೀಮಿಯರ್‌ ಲೀಗ್‌, ಎನ್‌ಬಿಎ ಬಾಸ್ಕೆಟ್‌ ಬಾಲ್‌ ಚಾಂಪಿಯನ್‌ ಶಿಪ್‌ ಸೇರಿದಂತೆ ಹಲವು ಕ್ರೀಡಾಕೂಟಗಳನ್ನು ರದ್ದುಪಡಿಸಲಾಗಿದೆ. ಹೀಗಿರುವಾಗ ಒಲಿಂಪಿಕ್ಸ್‌ ನಡೆಸಲೇಬೇಕೆಂಬ ಹಟ ಏಕೆ ಎನ್ನುವುದು ಸಾರ್ವಜನಿಕರ ಪ್ರಶ್ನೆ.

Advertisement

ಎದೆ ಬಿರಿಯುತ್ತಿದೆ…
ಒಲಿಂಪಿಕ್ಸ್‌ ರದ್ದಾಗಲಿದೆ ಎಂಬ ಸುದ್ದಿ ಅನೇಕರ ಎದೆ ಬಿರಿಯುವಂತೆ ಮಾಡಿದೆ. ಟೋಕಿಯೊ ಹಾಗೂ ಸುತ್ತಮುತ್ತಲಿನ ನಗರದ ಜನರು ಈಗಾಗಲೇ ಒಲಿಂಪಿಕ್ಸ್‌ ಟಿಕೆಟ್‌ ಕಾದಿರಿಸಿದ್ದಾರೆ. ಅವರೆಲ್ಲ ಈ ವರ್ಷ ಒಲಿಂಪಿಕ್ಸ್‌ ನಡೆಯುವ ಸಾಧ್ಯತೆಯಿಲ್ಲ ಎನ್ನುವ ಸುದ್ದಿ ಕೇಳಿದ ಬಳಿಕ ಬೇಸರದಲ್ಲಿದ್ದಾರೆ.

ಒಲಿಂಪಿಕ್ಸ್‌ ನೋಡಲು ಸಿಗುವುದು ಜೀವನದಲ್ಲಿ ಒಂದೇ ಬಾರಿ. ಅದು ರದ್ದಾಗುವುದೆಂದರೆ ನಮ್ಮ ದುರದೃಷ್ಟವಲ್ಲದೆ ಬೇರೇನೂ ಅಲ್ಲ. ಇಷ್ಟೆಲ್ಲ ತಯಾರಿ ಮಾಡಿದ ಬಳಿಕ ಕ್ರೀಡಾಕೂಟ ರದ್ದಾದರೆ ನಾವು ಮಾಡಿದ ಪ್ರಯತ್ನವೆಲ್ಲ ಮಣ್ಣು ಪಾಲಾಗುತ್ತದೆ ಎನ್ನುತ್ತಾರೆ ಓರ್ವ ಸ್ಥಳೀಯ ವ್ಯಾಪಾರಿ.

ಕಾರ್ಯಕ್ರಮ ರದ್ದು
ಜಪಾನ್‌ ಸರಕಾರ ಒಲಿಂಪಿಕ್ಸ್‌ ನಡೆಸಲೇಬೇಕೆಂಬ ಹಟದಲ್ಲಿದ್ದಲೂ ಈಗಾಗಲೇ ಒಲಿಂಪಿಕ್ಸ್‌ಗೆ ಸಂಬಂಧ ಪಟ್ಟ ಕೆಲವು ಕಾರ್ಯಕ್ರಮಗಳು ರದ್ದಾಗಿವೆ. ಒಲಿಂಪಿಕ್ಸ್‌ ಅರ್ಹತಾ ಪಂದ್ಯಗಳನ್ನು ರದ್ದುಪಡಿಸಲಾಗಿದೆ. ಒಲಿಂಪಿಕ್ಸ್‌ ಜ್ಯೋತಿಯನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲೂ ಬದಲಾವಣೆ ಮಾಡಿಕೊಳ್ಳಲಾಗಿದೆ. ಜ್ಯೋತಿಯನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ನೂರಾರು ಶಾಲಾ ಮಕ್ಕಳನ್ನು ಬಳಸಿಕೊಳ್ಳುವ ಯೋಜನೆ ರೂಪಿಸಲಾಗಿತ್ತು. ಈಗ ಈ ಕಾರ್ಯಕ್ರಮ ರದ್ದಾಗಿದೆ. ಅಂತೆಯೇ ಒಲಿಂಪಿಕ್ಸ್‌ ಜ್ಯೋತಿಯನ್ನು ಸಾರ್ವಜನಿಕ ಪ್ರದರ್ಶನಕ್ಕಿಡುವ 3 ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಗ್ರೀಸ್‌ನಲ್ಲಿ ಒಲಿಂಪಿಕ್ಸ್‌ ಜ್ಯೋತಿಯನ್ನು ಸಂಘಟಕರಿಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನೂ ಕೈಬಿಡಲಾಗಿದೆ.

ಪ್ರವಾಸಿಗರ ಸಾಧ್ಯತೆ ಇಲ್ಲ
ಇಂಟರ್‌ನೆಟ್‌ ಕಂಪೆನಿಯೊಂದರ ಉದ್ಯೋಗಿಯಾಗಿರುವ 27ರ ಹರೆಯದ ಕೋಕಿ ಮಿಯುರ, “ಜಪಾನ್‌ ಕೊರೊನಾ ವಿರುದ್ಧ ಗೆದ್ದರೂ ಕ್ರೀಡಾಕೂಟಕ್ಕೆ ಅನ್ಯ ದೇಶಗಳಿಂದ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆಯಿಲ್ಲ. ಹೀಗಾಗಿ ಸದ್ಯಕ್ಕೆ ಒಲಿಂಪಿಕ್ಸ್‌ ಕೂಟವನ್ನು ತಡೆಹಿಡಿಯುವುದೇ ಉತ್ತಮ. ಕ್ರೀಡಾಕೂಟಕ್ಕಾಗಿ ಜನರ ಪ್ರಾಣವನ್ನು ಬಲಿಕೊಡುವುದು ಸರಿಯಲ್ಲ. ಒಲಿಂಪಿಕ್ಸ್‌ ರದ್ದು ಪಡಿಸುವುದು ಅಸಾಧ್ಯವಾದರೂ ಮುಂದೂಡಬಹುದು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next