Advertisement

ನೂತನ ಶಿಕ್ಷಣ ನೀತಿಗೆ ವಿರೋಧ

02:46 PM Aug 09, 2019 | Suhan S |

ಚಿಕ್ಕಬಳ್ಳಾಪುರ: ಕೇಂದ್ರದ ನೂತನ ಶಿಕ್ಷಣ ನೀತಿ ಸಂಪೂರ್ಣವಾಗಿ ಖಾಸಗೀಕರಣ ಹಾಗೂ ಕೋಮುವಾದೀಕರಣದಿಂದ ಕೂಡಿದ್ದು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ ಗುರುವಾರ ಜಿಲ್ಲಾ ಕೇಂದ್ರದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್ಐ) ಕಾರ್ಯಕರ್ತರು ಕೇಂದ್ರದ ನೂತನ ಶಿಕ್ಷಣ ನೀತಿಯ ಕರಡು ಪ್ರತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನಾ ನಡೆಸಿ ಕೆಲಕಾಲ ರಸ್ತೆ ತಡೆ ನಡೆಸಿದ ಎಸ್‌ಎಫ್ಐ ಕಾರ್ಯಕರ್ತರು, ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯ ಧೋರಣೆಗಳ ವಿರುದ್ಧ ಧಿಕ್ಕಾರ ಕೂಗಿದರು.

ಅಸಮಾನತೆ ಸೃಷ್ಟಿಸಲು ಯತ್ನ: ಕೇಂದ್ರ ಸರ್ಕಾರ ಬಂಡವಾಳಶಾಹಿಗಳಿಗೆ ಪೂರಕವಾಗಿ ದೇಶದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಹೊರಟಿದೆ. ಕೇಂದ್ರದ ಹೊಸ ಶಿಕ್ಷಣ ನೀತಿ ಸಾರ್ವತ್ರಿಕ ಶಿಕ್ಷಣ ನೀತಿಗೆ ವಿರುದ್ಧವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಕೂಡ ಅಸಮಾನತೆ ಸೃಷ್ಟಿಸಲು ಕೇಂದ್ರ ಹೊರಟಿದೆ ಎಂದು ಪ್ರತಿಭಟನಕಾರರು ಕಿಡಿಕಾರಿದರು.

ಬಡವರು, ಮಧ್ಯಮ ವರ್ಗಕ್ಕೆ ಕಷ್ಟ: ಎಸ್‌ಎಫ್ಐ ರಾಜ್ಯಾಧ್ಯಕ್ಷ ವಿ.ಅಂಬರೀಶ್‌ ಮಾತನಾಡಿ, ಕೇಂದ್ರ ಸರ್ಕಾರವು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಿರುವ ರಾಷ್ಟ್ರೀಯ ಶಿಕ್ಷಣ ನೀತಿ -2019 ದೇಶದ ಮುಂದಿನ 20 ವರ್ಷಗಳ ದೇಶದ ಶಿಕ್ಷಣ ನೀತಿಯ ಸ್ವರೂಪವನ್ನು ನಿರ್ಧರಿಸುವ ಒಂದು ಮಹತ್ವದ ಶೈಕ್ಷಣಿಕ ವರದಿಯಾಗಿದೆ.

ಆದರೆ ಕೇಂದ್ರದ ಹೊಸ ಶಿಕ್ಷಣ ನೀತಿ ಖಾಸಗೀಕರಣಕ್ಕೆ ಪೂರಕವಾಗಿರುವುದರಿಂದ ಭವಿಷ್ಯದ ದಿನಗಳಲ್ಲಿ ಶಿಕ್ಷಣ ಬಡವರಿಗೆ, ಮಧ್ಯಮ ವರ್ಗದ ರೈತಾಪಿ ಕೂಲಿ ಕಾರ್ಮಿಕರ ಮಕ್ಕಳಿಗೆ ಇನ್ನಷ್ಟು ದುಬಾರಿಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

Advertisement

ಬಹುರಾಷ್ಟ್ರೀಯ ಕಂಪನಿಗಳಿಗೆ ಪೂರಕ: ಕೊಠಾರಿ ಆಯೋಗದ ಪ್ರಕಾರ ದೇಶದ ಒಟ್ಟು ಜಿಡಿಪಿಯಲ್ಲಿ ಶೇ. 6ರಷ್ಟು ಶಿಕ್ಷಣಕ್ಕೆ ಮೀಸಲಿಡಬೇಕು. ಆದರೆ ಇದುವರೆಗೂ ಆ ಕೆಲಸವನ್ನು ಯಾವ ಸರ್ಕಾರ ಕೂಡ ಮಾಡಲಿಲ್ಲ. ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಿಗಬೇಕಾದ ಆದ್ಯತೆ, ಹಣಕಾಸು ಬೆಂಬಲ ಸಿಗದೇ ಉಳ್ಳವರಿಗೆ ಮಾತ್ರ ಶಿಕ್ಷಣ ಎನ್ನುವಂತಾಗಿದೆ. ಇದೀಗ ಹೊಸ ಶಿಕ್ಷಣ ನೀತಿ ಕೂಡ ಬಹುರಾಷ್ಟ್ರೀಯ ಕಂಪನಿಗಳಿಗೆ ಪೂರಕವಾದ ಶಿಕ್ಷಣ ವ್ಯವಸ್ಥೆಯನ್ನು ಪೋಷಿಸಲು ಕೇಂದ್ರ ಸರ್ಕಾರ ಹೊರಟಿದೆ ಎಂದು ವಿ.ಅಂಬರೀಶ್‌ ಕಿಡಿಕಾರಿದರು.

ಹುದ್ದೆ ಭರ್ತಿಗೆ ಆಗ್ರಹ: ಎಸ್‌ಎಫ್ಐ ರಾಜ್ಯ ಸಮಿತಿ ಸದಸ್ಯ ಎ.ಸೋಮಶೇಖರ್‌ ಮಾತನಾಡಿ, ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಶಿಕ್ಷಣ ನೀತಿಯಲ್ಲಿ ಕೇಂದ್ರಿಯ ಶಿಕ್ಷಣ ಸಲಹಾ ಮಂಡಳಿಯನ್ನು ರದ್ದುಗೊಳಿಸಿ ರಾಷ್ಟ್ರೀಯ ಶಿಕ್ಷಣ ಆಯೋಗ ರಚನೆಗೆ ಮುಂದಾಗಿರುವುದು ಸರಿಯಲ್ಲ ಎಂದರು.

ಸ್ವಯಂ ಸೇವೆಯ ಆಧಾರದಲ್ಲಿ ಬೋಧನೆಗೆ ಅವಕಾಶ ನೀಡುವ ಅಂಶವನ್ನು ಕರಡುನಿಂದ ಕೈ ಬಿಡಬೇಕೆಂದ ಅವರು, ಕೇಂದ್ರ ಸರ್ಕಾರ ಪ್ರತಿ ವರ್ಷ ಮಂಡಿಸುವ ಬಜೆಟ್‌ನಲ್ಲಿ ಶೇ.10 ರಷ್ಟು ಅನುದಾನ ಮೀಸಲಿಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು.

ಕೇಂದ್ರ ಸರ್ಕಾರ ಕೂಡಲೇ ಗುಣಾತ್ಮಕ ಶಿಕ್ಷಣ ಸಾಧಿಸಲು ದೇಶದಲ್ಲಿ ಮಂಜೂರಾಗಿರುವ ಖಾಲಿ ಇರುವ ಎಲ್ಲಾ ಹಂತಗಳ ಎಲ್ಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

ವಿದ್ಯಾರ್ಥಿ ಮುಖಂಡರಾದ ರಮೇಶ್‌, ಪಲ್ಲವಿ, ಸುಧಾ, ಸುಕನ್ಯ, ಸರೋಜಾ, ಶ್ರೀದೇವಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next