Advertisement

ಅಕ್ರಮ ಗುಡಿಸಲು ತೆರವಿಗೆ ವಿರೋಧ

04:11 PM Feb 02, 2018 | Team Udayavani |

ಮದ್ದೂರು: ಪಶು ಸಂಗೋಪನಾ ಇಲಾಖೆಗೆ ಸೇರಿದೆ ಎನ್ನಲಾದ ನಿವೇಶನವನ್ನು ಖಾಸಗಿ ವ್ಯಕ್ತಿಯೊಬ್ಬರು ಅಕ್ರಮ ಖಾತೆ ಮಾಡಿಸಿಕೊಂಡು ನಿರ್ಮಿಸಿಕೊಂಡಿದ್ದ ಗುಡಿಸಲನ್ನು ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಲು ಮುಂದಾದಾಗ ವ್ಯಕ್ತಿಯ ಕುಟುಂಬದವರು ವಿರೋಧ ವ್ಯಕ್ತಪಡಿಸಿದ ಘಟನೆ ತಾಲೂಕಿನ ಗೊರವನಹಳ್ಳಿಯಲ್ಲಿ ಬುಧವಾರ ಸಂಜೆ ನಡೆದಿದೆ.

Advertisement

ತಹಶೀಲ್ದಾರ್‌ ಹಾಗೂ ಪೊಲೀಸರ ಕ್ರಮವನ್ನು ವಿರೋಧಿಸಿ ಗುಡಿಸಲು ನಿರ್ಮಿಸಿಕೊಂಡಿದ್ದ ದಾಸೇಗೌಡ ಮತ್ತು ಆತನ ಕುಟುಂಬದವರು ಜಾನುವಾರುಗಳೊಂದಿಗೆ ಗೊರವನಹಳ್ಳಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ವೇಳೆ ಧರಣಿ ನಿರತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ಪೊಲೀಸರು ಜಾನುವಾರುಗಳನ್ನು ಕಚೇರಿ ಆವರಣದಿಂದ ಹೊರದಬ್ಬಿದರು. ಬಳಿಕ ಪ್ರತಿಭಟನಾಕಾರರಿಗೆ ಮೊಕದ್ದಮೆ ಹೂಡುವುದಾಗಿ ಧಮಕಿ ಹಾಕಿದರು.

ಗೊರವನಹಳ್ಳಿ ಗ್ರಾಮದ ಸರ್ವೆ ನಂ.4ರಲ್ಲಿ 7 ಗುಂಟೆ ನಿವೇಶನನ್ನು ಪಶುಸಂಗೋಪನಾ ಆಸ್ಪತ್ರೆ ನಿರ್ಮಿಸಲು ಮಂಜೂರು ಮಾಡಲಾಗಿತ್ತು. ಈ ನಿವೇಶನದಲ್ಲಿ ದಾಸೇಗೌಡ ನಕಲಿ ದಾಖಲೆಗಳನ್ನು ನೀಡಿ ಅಕ್ರಮವಾಗಿ ಗ್ರಾಪಂ ಕಚೇರಿಯಿಂದ ಖಾತೆ ಮಾಡಿಸಿಕೊಂಡಿದ್ದರು ಎಂದು ಹೇಳಲಾಗಿದೆ.

ಈ ವಿಷಯ ತಿಳಿದ ತಹಶೀಲ್ದಾರ್‌ ನಾಗರಾಜು ಸ್ಥಳಕ್ಕೆ ತೆರಳಿ ನಿವೇಶನದಲ್ಲಿ ನಿರ್ಮಿಸಿದ್ದ ಗುಡಿಸಲನ್ನು ಪೊಲೀಸರ ನೆರವಿನೊಂದಿಗೆ ನೆಲಸಮಗೊಳಿಸಿ ನಿವೇಶನವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಈ ವೇಳೆ ದಾಸೇಗೌಡ ದಾಖಲೆಗಳನ್ನು ನೀಡಿ ನಿವೇಶನ ತನ್ನದೆಂದು ವಾದಿಸಿದ್ದರು.

Advertisement

ಬಳಿಕ ಪೊಲೀಸರು ದಾಸೇಗೌಡ ಮತ್ತು ಕುಟುಂಬದವರನ್ನು ಸ್ಥಳದಿಂದ ಹೊರಗೆ ಕಳುಹಿಸಲು ಮುಂದಾದಾಗ ಪೊಲೀಸರು ಮತ್ತು ದಾಸೇಗೌಡ ಕುಟುಂಬದವರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ-ನೂಕಾಟ ನಡೆಯಿತು. ಇದನ್ನು ಲೆಕ್ಕಿಸದ ಕಂದಾಯ ಇಲಾಖೆ ಅಧಿಕಾರಿಗಳು ಗುಡಿಸಲಿನಲ್ಲಿದ್ದ ವಸ್ತುಗಳನ್ನು ಹೊರಗೆಸೆದು ನಿವೇಶನವನ್ನು ವಶಕ್ಕೆ ತೆಗೆದುಕೊಂಡು ಕುಟುಂಬದವರನ್ನು ಹೊರಹಾಕಿದರು.

ತಹಶೀಲ್ದಾರ್‌ ಮತ್ತು ಪೊಲೀಸರ ಕ್ರಮ ಖಂಡಿಸಿ ದಾಸೇಗೌಡ ಮತ್ತು ಆತನ ಕುಟುಂಬದವರು ಗ್ರಾಪಂ ಕಚೇರಿ ಎದುರು ಪ್ರತಿಭಟನೆಗಿಳಿದು ಅಧಿಕಾರಿಗಳ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಮದ್ದೂರು ಠಾಣೆ ಸಬ್‌ಇನ್ಸ್‌ಪೆಕ್ಟರ್‌ ಕುಮಾರ್‌ ಹಾಗೂ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದ ದಾಸೇಗೌಡ ಹಾಗೂ ಕುಟುಂಬದವರಿಗೆ ಅನುಮತಿ ಇಲ್ಲದೆ ಧರಣಿ ನಡೆಸುತ್ತಿರುವ ಬಗ್ಗೆ ಮೊಕದ್ದಮೆ ಹೂಡುವ ಬೆದರಿಕೆ ಹಾಕಿದರು.

ಇದಕ್ಕೆ ಧರಣಿ ನಿರತರು ಮಣಿಯದಿದ್ದಾಗ ಪೊಲೀಸರು ಮೊದಲ ಹಂತವಾಗಿ ಜಾನುವಾರುಗಳನ್ನು ಬಲವಂತವಾಗಿ ಗ್ರಾಪಂ ಕಚೇರಿ ಆವರಣದಿಂದ ಹೊರದಬ್ಬಿದರು. ನಂತರ ಪೊಲೀಸರ ಬೆದರಿಕೆಗೆ ಮಣಿದ ಪ್ರತಿಭಟನಾಕಾರರು ಧರಣಿಯನ್ನು ಅಂತ್ಯಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next