Advertisement

ಆದರ್ಶ ಇಂಡಸ್ಟ್ರಿಯಲ್‌ ಕೆಮಿಕಲ್‌ ಕಾರ್ಖಾನೆ ಉತ್ಪನ್ನ ವಿಸ್ತರಣೆ ಯೋಜನೆಗೆ ವಿರೋಧ

11:01 PM Sep 24, 2019 | sudhir |

ಕಾರ್ಕಳ: ಸಾಣೂರು ಗ್ರಾಮದ ಮುರತ್ತಂಗಡಿಯಲ್ಲಿನ ಆದರ್ಶ ಇಂಡಸ್ಟ್ರಿಯಲ್‌ ಕೆಮಿಕಲ್‌ ಕಾರ್ಖಾನೆ ಉತ್ಪನ್ನ ವಿಸ್ತರಣಾ ಯೋಜನೆಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಸಾಣೂರಿನಲ್ಲಿ ನಡೆಯಿತು.
ಸೆ. 24ರಂದು ಸಾಣೂರಿನ ರಾಮಮಂದಿರದಲ್ಲಿ ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ಪರಿಸರ ಅಧಿಕಾರಿ ವಿಜಯಾ ಹೆಗ್ಡೆ ನೇತೃತ್ವದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಏರ್ಪಡಿಸಿದ್ದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಕಾರ್ಖಾನೆ ಉತ್ಪಾದನ ಸಾಮರ್ಥ್ಯವನ್ನು 370 ಟಿಪಿಎಂಯಿಂದ 870 ಟಿಪಿಎಂಗೆ ಏರಿಸುವ ಪ್ರಸ್ತಾವಕ್ಕೆ ಗ್ರಾಮಸ್ಥರು ಭಾರಿ ವಿರೋಧ ವ್ಯಕ್ತಪಡಿಸಿ, ಪರಿಸರದ ಮೇಲೆ ಬೀರುವ ಪರಿಣಾಮದ ಕುರಿತು ವಿವರಿಸಿದರು.

Advertisement

ರಾಸಾಯನಿಕ ತ್ಯಾಜ್ಯದಿಂದಾಗಿ ಈಗಾಗಲೇ ಕಾರ್ಖಾನೆ ಸುತ್ತಮುತ್ತಲಿನ ಕೆರೆ, ಬಾವಿಯ ನೀರು ಕಲುಷಿತಗೊಂಡು ನಿರುಪಯುಕ್ತವಾಗಿದೆ ಎಂದು ವಿಶ್ವನಾಥ ಶೆಟ್ಟಿಗಾರ್‌ ಹೇಳಿದರು. ಸಾಣೂರು ಒಂದು ಸುಂದರವಾದ ಹಳ್ಳಿ ಪ್ರದೇಶ. ಇದೇ ಪರಿಸರದಲ್ಲಿ ಹುಟ್ಟಿ ಬೆಳೆದ ನಾವು ಕಂಪೆನಿಗಾಗಿ ಊರು ಬಿಟ್ಟು ತೆರಳಲು ಸಿದ್ಧರಿಲ್ಲ ಎಂದು ಪ್ರಶಾಂತ್‌ ಅವರು ಆಕ್ರೋಶ ವ್ಯಕ್ತಪಡಿಸಿದರು. ರೋಷನ್‌ ವಾಝ್, ಪ್ರವೀಣ್‌ ಶೆಟ್ಟಿ ಸಾಣೂರು ಹಾಗೂ ಭವಿಶ್‌, ಲಾರೆನ್ಸ್‌ ವಾಝ್, ಗ್ರಾ.ಪಂ. ಸದಸ್ಯ ಪ್ರಕಾಶ್‌ ರಾವ್‌ ಯೋಜನೆ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಕಂಪೆನಿ ಪರವಾಗಿರುವವರ ಮತ್ತು ವಿರೋಧಿಸುವವರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು. ಅಂತಿಮವಾಗಿ ಸಾರ್ವಜನಿಕರೆಲ್ಲರೂ ತಮ್ಮ ತಮ್ಮ ಅಭಿಪ್ರಾಯ ನೀಡಬಹುದು. ಎಲ್ಲರ ಅಭಿಪ್ರಾಯವನ್ನು ಸ್ವೀಕರಿಸಿ, ದಾಖಲಿಸುತ್ತೇವೆ ಎಂದು ಎಡಿಸಿ ಸದಾಶಿವ ಪ್ರಭು ಹಾಗೂ ವಿಜಯಾ ಹೆಗ್ಡೆ ತಿಳಿಸಿದರು. ಅನಂತರ ಸಭೆ ಶಾಂತವಾಯಿತು.

ಐ.ಆರ್‌. ಫೆರ್ನಾಂಡಿಸ್‌, ಶಾರದಾ, ವೆಂಕಟೇಶ್‌ ಕಾಮತ್‌ ಅವರು ಆದರ್ಶ್‌ ಇಂಡಸ್ಟ್ರೀ ಸ್ಥಳೀಯರಿಗೆ ಉದ್ಯೋಗ ನೀಡಿದೆ. ಪರಿಸರಕ್ಕೆ ತೊಂದರೆಯಾಗದಂತೆ ಉದ್ದಿಮೆಯನ್ನು ವಿಸ್ತರಿಸುವುದಕ್ಕೆ ಅಭ್ಯಂತರ ವ್ಯಕ್ತಪಡಿಸಬಾರದು. ವಿರೋಧ ವ್ಯಕ್ತಪಡಿಸಿದಲ್ಲಿ ಉದ್ದಿಮೆದಾರರು ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಹಿಂಜರಿಕೆ ತೋರುವಂತಾಗಲಿದೆ ಎಂದರು.

ಜಿಂಕೆ -ಕರಡಿಯಿಲ್ಲ !
ಪರಿಸರ ಸಲಗೆಗಾರರು ನೀಡಿದ ವರದಿಯಲ್ಲಿ ಉದ್ದಿಮೆಯಿಂದ ಸಾಣೂರು ಪರಿಸರದಲ್ಲಿ ಜಿಂಕೆ-ಕರಡಿ ಸತ್ತಿಲ್ಲ ಎಂದು ತಿಳಿಸಿರುತ್ತಾರೆ. ಸಾಣೂರು ಪರಿಸರದಲ್ಲಿ ಜಿಂಕೆ-ಕರಡಿಯೇ ಇಲ್ಲ. ವರದಿಯಲ್ಲಿ ಇಂತಹ ಹಾಸ್ಯಾಸ್ಪದ ಸಂಗತಿಗಳೇಕಿವೆ ಎಂದು ಸತ್ಯಾರ್ಥಿ ಹೇಳಿದರು. ಲಿಂಗರಾಜು ವರದಿ ಓದಿದರು. ವಿಜಯಾ ಹೆಗ್ಡೆ ಸಭೆ ನಿರ್ವಹಿಸಿದರು.

Advertisement

ವರದಿ ಕುರಿತು ಆಕ್ರೋಶ
ಬೆಂಗಳೂರಿನ ಸಂರಕ್ಷಣ್‌ ಸಂಸ್ಥೆ ಸಿದ್ಧಪಡಿಸಿದ ವರದಿ ಕುರಿತು ಸಭೆಯಲ್ಲಿ ಆಕ್ರೋಶ ಕೇಳಿಬಂದಾಗ ಉತ್ತರಿಸಿದ ವಿಜಯಾ ಹೆಗ್ಡೆ, ಈ ವರದಿ ಪರಿಸರ ಇಲಾಖೆಯಿಂದ ಸಿದ್ಧಪಡಿಸಿದ ವರದಿಯಲ್ಲ. ಸರಕಾರಿದಂದ ಮಾನ್ಯತೆ ಪಡೆದ ಸಂಸ್ಥೆ ತಯಾರಿಸಿದ್ದು ಎಂದು ಸಮಜಾಯಿಷಿ ನೀಡಿದರು. ಬಳಿಕ ಮಾತನಾಡಿದ ಅಪರ ಜಿಲ್ಲಾಧಿಕಾರಿ ನಾವು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಬಂದಿದ್ದೇವೆ. ಕಂಪೆನಿ ಪರವಾಗಿ ಬಂದಿರುವುದಲ್ಲ. ನಿಮ್ಮಿಂದ ಸಂಗ್ರಹಿಸಿದ ಅಭಿಪ್ರಾಯವನ್ನು ಸಂಬಂಧಪಟ್ಟವರಿಗೆ ರವಾನಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next