Advertisement

ಪೌರತ್ವ ತಿದ್ದುಪಡಿ ಕಾನೂನಿಗೆ ವಿರೋಧ

04:04 PM Dec 25, 2019 | Suhan S |

ದೊಡ್ಡಬಳ್ಳಾಪುರ : ಪೌರತ್ವ ತಿದ್ದುಪಡಿ ಕಾನೂನು-2019 ಹಾಗೂ ರಾಷ್ಟ್ರೀಯ ಪೌರತ್ವ ದಾಖಲಾತಿ (ಎನ್‌ಆರ್‌ಸಿ)ಯನ್ನು ವಿರೋಧಿಸಿ ಮುಸ್ಲಿಂ ಯೂಥ್‌ ಅಸೋಸಿಯೇಷನ್‌ (ವಕ್ಫ್) ಮತ್ತು ಸಮಾನ ಮನಸ್ಕರ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

Advertisement

ತಹಶೀಲ್ದಾರ್‌ಗೆ ಮನವಿ : ನಗರದ ಇಸ್ಲಾಂಪುರದ ಮೆಕ್ಕಾ ಮಸೀದಿಯಿಂದ ತಾಲೂಕು ಕಚೇರಿವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ತಹಶೀಲ್ದಾರ್‌ ಟಿ.ಎಸ್‌.ಶಿವರಾಜ್‌ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪೊಲೀಸರಿಗೆ ಹೂ ವಿತರಣೆ: ಪ್ರತಿಭಟನೆಯಲ್ಲಿ ಸಾವಿರಾರು ಮುಸ್ಲಿಂ ಸಮುದಾಯದ ಮುಖಂಡರು ರಾಷ್ಟ್ರ ದ್ವಜವನ್ನು ಹಿಡಿದು ಭಾರತ್‌ ಮಾತಾಕಿ ಜೈ ಘೊಷಣೆ ಕೂಗುತ್ತಾ, ಪೌರತ್ವ ಕಾನೂನು ಜಾರಿಗೊಳಿಸದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.ಈ ವೇಳೆ ಭದ್ರತೆಗೆ ನೇಮಕವಾಗಿದ್ದ ಪೊಲೀಸರಿಗೆ ಹೂಗುಚ್ಚ ನೀಡಿದ್ದು ವಿಶೇಷವಾಗಿತ್ತು.ಪ್ರತಿಭಟನೆ ಹಿನ್ನಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್‌ಪಿ ಟಿ.ರಂಗಪ್ಪ ನೇತತ್ವದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಆತಂಕ ಮನೆ ಮಾಡಿದೆ: ತಾಲೂಕು ಕಚೇರಿಯ ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಮುಸ್ಲಿಂ ಯೂಥ್‌ ಅಸೋಸಿಯೇಷನ್‌ ಮಾಜಿ ಅಧ್ಯಕ್ಷ ಮೊಹಮ್ಮದ್‌ ಅಝ್ಂ ಪಾಷಾ, ಸಿಎಎಯಿಂದ ಅಲ್ಪಸಂಖ್ಯಾತರಲ್ಲಿ ಆತಂಕ ಮನೆಮಾಡಿದ್ದು, ಇದು ಪ್ರಜಾಪ್ರಭುತ್ವದ ವಿರೋಧಿಯಾಗಿದೆ.ಪೌರತ್ವ ಕಾನೂನು ಗೊಂದಲದ ಕುರಿತಂತೆ ಸೋಮವಾರ ಪೊಲೀಸ್‌ ಠಾಣೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್‌ ಅವರು ಪೌರತ್ವ ಕಾನೂನು ಜಾರಿಯಿಂದ ಯಾವುದೇ ತೊಂದರೆ ಇಲ್ಲವಾಗಿದ್ದು.ಈ ಕಾನೂನು ಕುರಿತು ಮಾಹಿತಿ ನೀಡಲು ಕಲ್ಯಾಣ ಮಂಟಪದಲ್ಲಿ ವೇದಿಕೆ ಕಲ್ಪಿಸುವ ಭರವಸೆ ನೀಡಿದ್ದು, ನಮಗೆ ಪೊಲೀಸರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ ಎಂದರು.

ಪ್ರೊ.ಅಬ್ದಲ್‌ ರವೂಫ್‌ ಮಾತನಾಡಿ,ದೇಶದ ಅಭಿವೃದ್ದಿ,ಆರ್ಥಿಕತೆ ಗಮನ ಹರಿಸಬೇಕಾದ ಕೇಂದ್ರ ಸರ್ಕಾರ ಮುಸ್ಲಿಂ ಶೋಷಣೆಗೆ ಮುಂದಾಗಿರುವುದು ಸರಿಯಲ್ಲ,ಈ ಕಾನೂನುನಿಂದ ಮುಸ್ಲಿಂ ಜನಾಂಗಕ್ಕಲ್ಲದೆ ಹಿಂದೂಗಳಿಗೆ ತೊಂದರೆ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

Advertisement

ಖಂಡನೀಯ: ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ,ದೇಶದ ಆರ್ಥಿಕ ಸ್ಥಿತಿ ಆತಂಕದಲ್ಲಿದೆ ಶೇ.50ರಷ್ಟು ಕಾರ್ಖಾನೆಗಳು ಬಾಗಿಲು ಬಡಿದಿದ್ದು ನಿರುದ್ಯೋಗ ಸಮಸ್ಯೆ ದೇಶದಲ್ಲಿ ತಾಂಡವವಾಡುತ್ತಿದೆ, ಇದೆಲವನ್ನೂ ಮರೆಮಾಚಲು ಕೇಂದ್ರ ಸರ್ಕಾರ ಧರ್ಮ, ಧರ್ಮಗಳನ್ನು ಒಡೆಯಲು ಮುಂದಾಗಿರುವುದು ಖಂಡನೀಯ. ಪೌರತ್ವ ಕಾನೂನು ಹಿಂಪಡೆಯುವವರೆಗೆ ದೇಶದಲ್ಲಿ ಶಾಂತಿಯುತ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.

ಈ ವೇಳೆ ಬಿಎಸ್‌ಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಪುರುಷೋತಮ್‌,ಸಿಪಿಐಎಂ ಪಕ್ಷದ ಚಂದ್ರತೇಜಸ್ವಿ, ಹಾಗೂ ಶ್ರೀನಗರ ಬಷೀರ್‌ ಮಾತನಾಡಿದರು. ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್‌,ನಗರಸಭೆ ಮಾಜಿ ಸದಸ್ಯ ಫಯಾಝ್,ಮನ್ಸೂರ್‌ ,ಬಿ.ನಯಾಜ್‌ ಖಾನ್‌,ಅಲ್ದಾಫ್‌ ಸೇರಿದಂತೆ ಸಾವಿರಾರು ಮಂದಿ ಮುಸ್ಲಿಮರು ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next