Advertisement
ಆಸ್ಪತ್ರೆಗಳ ಗೇಟಿನ ಬಳಿಯೇ ‘ಸೇವೆ ಲಭ್ಯವಿರುವುದಿಲ್ಲ’ ಎಂಬುದಾಗಿ ಬ್ಯಾನರ್ ಅಳವಡಿಸಿದ್ದು, ಸೆಕ್ಯುರಿಟಿಗಳು ಕೂಡ ಸೇವೆ ಇಲ್ಲ ಎಂದು ಗೇಟ್‌ನಿಂದಲೇ ರೋಗಿಗಳನ್ನು ವಾಪಸ್ ಕಳುಹಿಸುತ್ತಿದ್ದರು. ಇದರಿಂದ ಅಗತ್ಯ ಚಿಕಿತ್ಸೆಗಾಗಿ ಬಂದ ಹಲವು ರೋಗಿಗಳು ಬರಿಗೈಯಲ್ಲೇ ಹಿಂದಿರುಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೊರರೋಗಿ ವಿಭಾಗ, ತುರ್ತು ಚಿಕಿತ್ಸೆ ಸಹಿತ ಎಲ್ಲ ರೀತಿಯ ಸೇವೆಗಳನ್ನೂ ಸ್ಥಗಿತಗೊಳಿಸಲಾಗಿತ್ತು.
Related Articles
ಒಮೇಗಾ ಆಸ್ಪತ್ರೆಗೆ ಔಷಧಕ್ಕಾಗಿ ಬಂದಿದ್ದ ಕೋಟೆಕಾರ್‌ನ ಮಾಲತಿ ಅವರು ಹೇಳುವ ಪ್ರಕಾರ, ‘ಆಸ್ಪತ್ರೆಗಳನ್ನೇ ಬಂದ್ ಮಾಡಿ ವೈದ್ಯರು ಮುಷ್ಕರ ನಡೆಸುವುದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತದೆ. ಸರಕಾರ ಮಾಡಿದ ತಪ್ಪಿಗೆ ಜನಸಾಮಾನ್ಯರಿಗೆ ಶಿಕ್ಷೆ ನೀಡುವುದು ಸರಿಯಲ್ಲ. ಅಗತ್ಯ ಚಿಕಿತ್ಸೆಗೆ ಮಂಗಳೂರಿಗೆ ಬಂದರೆ ಇಲ್ಲಿನ ಯಾವ ಆಸ್ಪತ್ರೆಗಳೂ ಚಿಕಿತ್ಸೆ ನೀಡದಿರುವುದು ತೊಂದರೆಯಾಗಿದೆ.ಮುಷ್ಕರದ ಬಗ್ಗೆ ಮಾಹಿತಿ ಇದ್ದರೂ, ಹೊರರೋಗಿ ಸೇವೆಗಳು ಇರಬಹುದು ಎಂದುಕೊಂಡಿದ್ದೆ’ ಎನ್ನುತ್ತಾರೆ.
Advertisement
ಡಿಸಿಗೆ ಮನವಿ ಮುಷ್ಕರದ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಸಭಾಂಗಣದಲ್ಲಿ ಸಭೆ ನಡೆಸಲಾಯಿತು. ಶಾಖೆಯ ಅಧ್ಯಕ್ಷ ಡಾ| ರಾಘ ವೇಂದ್ರ ಭಟ್, ಕಾರ್ಯದರ್ಶಿ ಡಾ| ಯೋಗೀಶ್ ಬಂಗೇರ, ಖಜಾಂಚಿ ಡಾ| ಜಿ. ಕೆ. ಭಟ್ ಮತ್ತಿತರರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಮಂದಿ ವೈದ್ಯರು ಸಭೆಯಲ್ಲಿ ಪಾಲ್ಗೊಂಡರು. ಬಳಿಕ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.