ಮಂಡ್ಯ: ಡಿಯರ್ ಕಾಮ್ರೆಡ್ ಕನ್ನಡ ಆವೃತ್ತಿ ಇದ್ದರೂ ತೆಲುಗು ಅವತರಣಿಕೆಯಲ್ಲಿ ಚಿತ್ರ ಪ್ರದರ್ಶಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಸೋಮವಾರ ನಗರದ ಸಂಜಯ ಚಿತ್ರಮಂದಿರದ ಬಳಿ ಪ್ರತಿಭಟನೆ ನಡೆಸಿದರು.
ಚಿತ್ರಮಂದಿರದ ಎದುರು ಜಮಾಯಿಸಿದ ರಕ್ಷಣಾ ವೇದಿಕೆ ಕಾರ್ಯಕರ್ತರು ಡಿಯರ್ ಕಾಮ್ರೆಡ್ ಸಿನಿಮಾವನ್ನು ತೆಲುಗು ಅವತರಣಿಕೆ ಬದಲು ಕನ್ನಡ ಅವತರಣಿಕೆಯಲ್ಲಿ ಪ್ರದರ್ಶಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.
ವಿಶ್ವದ ಎಲ್ಲ ಸಿನಿಮಾ, ಜ್ಞಾನ ಎಲ್ಲವೂ ಕನ್ನಡ ಭಾಷೆಯಲ್ಲೇ ಬರಬೇಕು. ಇದರಿಂದ ಕನ್ನಡ ಭಾಷೆ ಬೆಳೆಯುತ್ತದೆ. ಇದರ ಭಾಗವಾಗಿಯೇ ಕನ್ನಡ ಸಿನಿಮಾ ರಂಗದಲ್ಲಿ ಅಘೋಷಿತ ನಿಷೇಧ ಹೇರಿದ್ದ ಡಬ್ಬಿಂಗ್ ಸಿನಿಮಾ ಜಾರಿಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಈ ಹೋರಾಟದ ಭಾಗವಾಗಿಯೇ ಡಿಯರ್ ಕಾಮ್ರೆಡ್ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲಾಗಿದೆ ಎಂದು ವೇದಿಕೆ ಅಧ್ಯಕ್ಷ ಹೆಚ್.ಡಿ.ಜಯರಾಂ ಹೇಳಿದರು.
ಮಂಡ್ಯ ಜಿಲ್ಲೆ ಕರ್ನಾಟಕದಲ್ಲಿ ಶೇ.90ರಷ್ಟು ಕನ್ನಡ ಮಾತನಾಡುವ ಕನ್ನಡಿಗರಿರುವ ಜಿಲ್ಲೆಯಾಗಿದೆ. ನಂದಾ ಚಿತ್ರಮಂದಿರದಲ್ಲಿ ಡಿಯರ್ ಕಾಮ್ರೆಡ್ ಸಿನಿಮಾದ ಕನ್ನಡ ಅವತರಣಿಕೆ ಪ್ರದರ್ಶಿತವಾಗುತ್ತಿದೆ. ಹೀಗಿರುವಾಗ ಸಂಜಯ ಚಿತ್ರಮಂದಿರದಲ್ಲಿ ಅದೇ ಸಿನಿಮಾದ ತೆಲುಗು ಅವತರಣಿಕೆ ಪ್ರದರ್ಶಿಸುವ ಅನಿವಾರ್ಯತೆ ಏನಿದೆ. ಪರಭಾಷಾ ಚಿತ್ರಗಳಿಂದ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗದಂತ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ತಕ್ಷಣದಿಂದ ತೆಲುಗು ಬದಲಿಗೆ ಕನ್ನಡ ಆವೃತ್ತಿಯನ್ನೇ ಪ್ರದರ್ಶಿಸುವಂತೆ ಒತ್ತಾಯಿಸಿದರು.
ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವ ಎಲ್ಲ ಪರಭಾಷಾ ಚಿತ್ರಗಳು ಕನ್ನಡದಲ್ಲೇ ಡಬ್ ಆಗಿ ಪ್ರದರ್ಶನಗೊಳ್ಳಬೇಕು. ತಪ್ಪಿದಲ್ಲಿ ಪ್ರದರ್ಶನ ತಡೆಹಿಡಿಯಲಾಗುವುದು ಎಂದು ಈ ಮೂಲಕ ಎಚ್ಚರಿಸಲಾಯಿತು. ಚಿತ್ರಮಂದಿರದ ವ್ಯವಸ್ಥಾಪಕ ಕುಶಾಲ್ ಗೌಡ ಮನವಿ ಸ್ವೀಕರಿಸಿ ಇಂದು ಸಂಜೆಯಿಂದಲೇ ಕನ್ನಡ ಆವೃತ್ತಿಯಲ್ಲಿ ಸಿನಿಮಾ ಪ್ರದರ್ಶನ ಮಾಡುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಸಂಪತ್ ಕುಮಾರ್, ಕಾವೇರಿ ಕಣಿವೆ ರೈತ ಒಕ್ಕೂಟದ ಜಿ.ಬಿ.ನವೀನ್‌ಕುಮಾರ್, ಎಂ,ಬಿ,ನಾಗಣ್ಣಗೌಡ, ಗಿರೀಗೌಡ, ಚಿತ್ರ ನಿರ್ದೇಶಕ ರವಿಕೀರ್ತಿ, ವಿಶ್ವಾಸ್ ಇತರರಿದ್ದರು.