Advertisement

ಅನುದಾನ ಕೊರತೆಯಿಂದ ಸಂಕಷ್ಟದಲ್ಲಿ ಸರ್ಕಾರಿ ಶಾಲೆ

02:47 PM Aug 03, 2022 | Team Udayavani |

ಕಲಬುರಗಿ: ರಾಜ್ಯ ಸರ್ಕಾರ 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ನಿರ್ಧಾರ ಕೆಳವರ್ಗದ ಮತ್ತು ದಲಿತರ ಮಕ್ಕಳ ಶಿಕ್ಷಣದ ಮೇಲಿನ ದಾಳಿಯಾಗಿದೆ. ಕೂಡಲೇ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿ ಮಂಗಳವಾರ ಜಿಲ್ಲಾ ಕೊಳೆಗೇರಿ ನಿವಾಸಿಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ಮಾಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿ ಮುಖಾಂತರ ಮನವಿ ಸಲ್ಲಿಸಿ, ಹಿಂದೆಯೂ ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ 2011ರಲ್ಲಿ ಪ್ರೊ| ಗೋವಿಂದ ಅವರ ವರದಿಯನ್ನಾಧರಿಸಿ 12,000 ಶಾಲೆಗಳನ್ನು ಮುಚ್ಚಲು ಚಿಂತನೆ ಮಾಡಲಾಗಿತ್ತು. ಆದರೆ, ಗಂಗಾವತಿಯಲ್ಲಿ ನಡೆದ ಕಸಾಪ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳಿಗೆ ನಮ್ಮ ವಿರೋಧದ ಬಿಸಿ ಮುಟ್ಟಿಸಿದ ಬಳಿಕ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು. ಆದರೆ, ಈಗ ಪುನಃ 13,800 ಶಾಲೆಗಳನ್ನು ಮುಚ್ಚಲು ಹೊರಟಿರುವ ನಿರ್ಧಾರ ಆಘಾತಕಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಇಬ್ಬಗೆಯ ನೀತಿಯಿಂದ ಸರ್ಕಾರಿ ಶಾಲೆಗಳು ಮಕ್ಕಳನ್ನು ಸೆಳೆಯುವಲ್ಲಿ ವಿಫಲವಾಗಿದೆ. ಅನುದಾನದ ಕೊರತೆ ಮಧ್ಯೆ ಸರ್ಕಾರಿ ಶಾಲೆಗಳು ಉಸಿರುಗಟ್ಟುತ್ತಿದೆ. ಇನ್ನೊಂದೆಡೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣಕ್ಕೆ ಭಾರಿ ಉತ್ತೇಜನ ದೊರೆಯುತ್ತಿದೆ. ಇದರಿಂದ ಸಹಜವಾಗಿಯೇ ಪಾಲಕರು ಮತ್ತು ಮಕ್ಕಳು ಆ ನಿಟ್ಟಿನಲ್ಲಿ ಸೆಳೆಯುತ್ತಿದ್ದಾರೆ. ಇಂತಹ ಸಣ್ಣ ವಿಚಾರಗಳು ಸರ್ಕಾರಕ್ಕೆ ಅರ್ಥವಾಗದೇ ಇರೋದಿಲ್ಲ. 35ಸಾವಿರ ಹುದ್ದೆಗಳು ಖಾಲಿ ಇವೆ. 4767 ಏಕೋಪಾಧ್ಯಯ ಶಾಲೆಗಳಿವೆ. ಸರ್ಕಾರದ ಅನೇಕ ಕೆಲಸಗಳನ್ನು ಶಿಕ್ಷಕರೇ ಮಾಡಬೇಕಿದೆ. ಇಷ್ಟೆಲ್ಲ ಇದ್ದಾಗಲೂ ಸುಖಾಸುಮ್ಮನೆ ನಾಟಕವಾಡಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬಾಬು ದಂಡಿನಕರ್‌, ಅಲ್ಲಮಪ್ರಭು ನಿಂಬರ್ಗಾ, ವಿಕಾಸ್‌ ಸಾವರಿಕರ್‌, ಗಣೇಶ ಕಾಂಬಳೆ, ಭಾಗಮ್ಮ ಬನಸೋಡೆ, ಯಮನಪ್ಪ ಪ್ರಸಾದ, ಬ್ರಹ್ಮಾನಂದ ಮಿಂಚಾ, ಶೇಖರ ಸಿಂಗ್‌, ಅನಿಲ ಚಕ್ರಾ, ಮಲ್ಲಿಕಾರ್ಜುನ ಕಾಂಬಳೆ, ಶಾಮರಾವ್‌ ಸಿಂಧೆ, ಬಸವರಾಜ ಧಾಡಿ, ಕರಣಕುಮಾರ ಬಂದರವಾಡ, ಕವಿತಾ ಇನಾಂದಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next