ಕುಮಟಾ: ಶಿವಮೊಗ್ಗ ಜಿಲ್ಲೆ ಶರಾವತಿ ಅಭಯಾರಣ್ಯಕ್ಕೆ ಸೇರ್ಪಡೆಗೊಳಿಸಿರುವ ತಾಲೂಕಿನ ಅರಣ್ಯವಾಸಿಗಳ ಪ್ರದೇಶವನ್ನು ಕೈಬಿಡುವ ಕುರಿತು ಮತ್ತು ಅರಣ್ಯ ಹಕ್ಕು ಕಾಯಿದೆ ಅಡಿ ಸಲ್ಲಿಸಿದ ಅರ್ಜಿಯನ್ನು ಕಾನೂನಿನಲ್ಲಿ ಉಲ್ಲೇಖೀಸಿದಂತೆ ಕ್ಲೇಮಿನ ಪರಿಗಣನೆಗಾಗಿ ನಿರ್ದಿಷ್ಟ ದಾಖಲಾತಿ ಸಾಕ್ಷ್ಯಗಳನ್ನು ಒತ್ತಾಯಿಸದೇ, ಮಂಜೂರಿ ಪ್ರಕ್ರಿಯೆ ಶೀಘ್ರದಲ್ಲಿ ಜರುಗಿಸುವಂತೆ ಅರಣ್ಯಭೂಮಿ ಹಕ್ಕು ಹೋರಾಟಗಾರ ವೇದಿಕೆ ಒತ್ತಾಯಿಸಿದೆ.
ಸುಮಾರು ಎರಡು ಸಾವಿರಕ್ಕೂ ಅಧಿಕ ಅರಣ್ಯ ಅತಿಕ್ರಮಣದಾರರು ಪಟ್ಟಣದ ಮಾಸ್ತಿಕಟ್ಟೆ ದೇವಾಲಯದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಡಳಿತ ಅಭಯಾರಣ್ಯ ವಿಸ್ತರಣೆ ಕುರಿತು ಅಧಿಸೂಚನೆ ಹೊರಡಿಸುವ ಪೂರ್ವದಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಿಲ್ಲ. ಅಲ್ಲದೇ, ಜನ ಜಾಗೃತಿಯನ್ನೂ ಮೂಡಿಸಿಲ್ಲ. ಅರಣ್ಯವ್ಯಾಪ್ತಿಯಲ್ಲಿ ವಾಸ್ತವ್ಯ ಹಾಗೂ ಸಾಗುವಳಿಗಾಗಿ ಅರಣ್ಯಭೂಮಿ ಹಕ್ಕಿಗಾಗಿ ಅರಣ್ಯ ಹಕ್ಕು ಕಾಯಿದೆ ಅಡಿ ಮಂಜೂರಿಗೆ ನೀಡಿದ ಅರ್ಜಿಗಳು ವಿಚಾರಣೆ ಹಂತದಲ್ಲಿರುವಾಗಲೇ, ಈ ಅಧಿಸೂಚನೆ ಹೊರಡಿಸಿರುವುದುಅಲ್ಲಿನ ಅರಣ್ಯ ಸಾಗುವಳಿದಾರರ ಹಕ್ಕಿಗೆ ತೊಂದರೆಯಾಗುತ್ತದೆ.
ಅಧಿಸೂಚನೆಯಲ್ಲಿ ಪ್ರಕಟಿಸಿದಂತೆ ಶಿವಮೊಗ್ಗ ಜಿಲ್ಲೆಯ ಶರಾವತಿ ಅಭಯಾರಣ್ಯಕ್ಕೆ ತಾಲೂಕಿನ ಸೊಪ್ಪಿನಹೊಸಳ್ಳಿ, ಮೇದಿನಿ, ಹೆಕ್ಕಳಿ, ಮೂರ್ಸೆ, ಬಂಗಣಿ, ಮುದ್ದಿನಹೊಸಳ್ಳಿ, ಹುಳ್ಳೂರು ಗ್ರಾಮಗಳ ಪ್ರದೇಶವನ್ನು ಸೇರಿಸಲ್ಪಟ್ಟಿದ್ದರಿಂದ ಸುಮಾರು 1000 ಕ್ಕೂ ಅಧಿಕ ಕುಟುಂಬಗಳು ಅಭಯಾರಣ್ಯ ಯೋಜನೆಯಿಂದ ಸಮಸ್ಯೆ ಉಂಟಾಗುವ ಆತಂಕ ಎದುರಿಸುತ್ತಿದ್ದಾರೆ. ಜನವಿರೋಧಿ ನೀತಿಯಾಗಿರುವ ಈ ಆದೇಶವನ್ನು ಸರ್ಕಾರ ಶೀಘ್ರ ರದ್ದುಪಡಿಸಬೇಕು. ಅರಣ್ಯವಾಸಿ ಮತ್ತು ಜನ ಸಾಮಾನ್ಯರಿಗೆ ಮೂಲ ಹಕ್ಕಿನಿಂದ ವಂಚಿತರಾಗದ ರೀತಿಯಲ್ಲಿ ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಎ.ರವೀಂದ್ರ ನಾಯ್ಕ, ತಾಲೂಕಾಧ್ಯಕ್ಷ ಮಂಜುನಾಥ ತಿಮ್ಮಾ ಮರಾಠಿ, ಸೀತಾರಾಮ ನಾಯ್ಕ ಬೊಗ್ರಿಬೈಲ್, ಜಿಲ್ಲಾ ಸಂಚಾಲಕ ಜಿ.ಎಂ. ಶೆಟ್ಟಿ, ಅಂಕೋಲಾ ತಾಲೂಕಾಧ್ಯಕ್ಷ ರಮಾನಂದ ನಾಯಕ, ಜಿಲ್ಲಾ ಸಂಚಾಲಕ
ದೇವರಾಜ ಗೊಂಡ, ಭಟ್ಕಳದ ರಾಮಾ ಮೊಗೇರ, ಸಾರಾಂಬಿ ಶೇಖ, ಯಾಕೂಬ್ ಬೆಟುಳಿ, ಜಗದೀಶ ಹರಿಕಾಂತ ನುಶಿಕೋಟೆ, ರಾಜು ಮಾಸ್ತಿಹಳ್ಳ, ಮಹೇಂದ್ರ ನಾಯ್ಕ ಕತಗಾಲ, ಸೀತಾರಾಮ ಮರಾಠಿ ಯಾಣ, ಜಾನ್ ಮಿರ್ಜಾನ, ಶಾಂತಾರಾಮ ನಾಯಕ ಬಡಾಳ ಸೇರಿದಂತೆ ಸಾವಿರಾರು ಅರಣ್ಯ ಅತಿಕ್ರಮಣದಾರರು ಇದ್ದರು.