Advertisement

ರಜ್ವಿರೋಡ್‌ ಹೆಸರು ಬದಲಾವಣೆಗೆ ವಿರೋಧ

05:23 PM Sep 09, 2022 | Team Udayavani |

ಆಳಂದ: ಪಟ್ಟಣದ ಕೆಲ ರಸ್ತೆಗಳಿಗೆ ಹೆಸರು ಬದಲಾವಣೆಗೆ ಮುಂದಾದ ಪುರಸಭೆ ನಿರ್ಣಯಕ್ಕೆ ರಜ್ವಿರೋಡ್‌ ವ್ಯಾಪಾರಿಗಳ ಸಂಘ ಹಾಗೂ ಅಸೋಶಿಯನ್‌ ಅಧ್ಯಕ್ಷ ರಫೀಕ್‌ ಇನಾಮಾದಾರ ತೀವ್ರ ವಿರೋಧ ವ್ಯಕ್ತಪಡಿಸಿದರು.

Advertisement

ಪಟ್ಟಣದ ಲಿಂಗಾಯಿತ ಭವನದ ಅಭಿ ಡೈ ಇನ್‌ ಹೋಟೆಲ್‌ ನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಜ್ವಿರೋಡ್‌ ಎನ್ನುವ ಹೆಸರಿಗೆ ಐತಿಹಾಸಿಕ ಪುರಾವೆ ಇದೆ. ಹೆಸರು ಬದಲಾಯಿಸಬೇಕಾದರೆ ಹೊಸ ರಸ್ತೆಗೆ ಹೆಸರು ಸೂಚಿಸಿ ಎಂದು ಮನವಿ ಮಾಡಿದರು.

ಪಟ್ಟಣದ ವಿವಿಧ ರಸ್ತೆಗಳಿಗಳಿಗೆ ಸ್ವಾತಂತ್ರ್ಯ ಸೇನಾನಿಗಳ ಹೆಸರಿನಲ್ಲಿ ನಾಮಕರಣ ಮಾಡುತ್ತಿರುವ ಕ್ರಮವನ್ನು ಸ್ವಾಗತಿಸುತ್ತೇವೆ. ಆದರೆ, ರಜ್ವಿರೋಡ್‌ ರಸ್ತೆ ಹೆಸರನ್ನು ಬದಲಾವಣೆ ಮಾಡಬೇಡಿ, ಅದಕ್ಕೆ ತನ್ನದೇ ಆದ ಇತಿಹಾಸ ಇದೆ. ಮಟಕಿ ರಸ್ತೆಯಲ್ಲಿ ಸಂಗೊಳ್ಳಿ ರಾಯಣ್ಣ ಕ್ರಾಸ್‌ ಹೆಸರು ಬದಲಾಗಬಾರದು ಎಂದು ಪುನರುಚ್ಚರಿಸಿದರು.

ಸೆ. 16ರಂದು ಕರೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡಾವಳಿಯ 4ರಲ್ಲಿ ರಸ್ತೆ ನಾಮಕರಣ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಯಾವ ರಸ್ತೆಗೂ ನಾಮಕರಣ ಕೈಗೊಳ್ಳಲು ವಿರೋಧವಿಲ್ಲ. ಆದರೆ ಬಸ್‌ ನಿಲ್ದಾಣದಿಂದ ಸಿದ್ಧಾರ್ಥ ಚೌಕ್‌ ವರೆಗೆ ಇರುವ ರಸ್ತೆಗೆ ಹೈದ್ರಾಬಾದ್‌ನ ಇಬ್ರಾಹಿಂ ರಜ್ವಿ ಅವರು ಬರಗಾಲದಲ್ಲಿ ಜನರಿಗೆ ಕೆಲಸಕೊಡುವ ಉದ್ದೇಶದಿಂದ ಹೈದ್ರಾಬಾದ್‌ನಲ್ಲಿದ್ದ ತಮ್ಮ ಆಸ್ತಿಯನ್ನು ಮಾರಿ ಈ ರಸ್ತೆ ನಿರ್ಮಿಸಿದ್ದಾರೆ. ಅವರ ಸಮಾಧಿಯೂ ಇಲ್ಲಿನ ದರ್ಗಾದಲ್ಲಿದೆ. ಏಕಾಂತರಾಮಯ್ಯನ ಮಂದಿರ, ಲಾಡ್ಲೆ ಮಶಾಕ್‌ ದರ್ಗಾದಂತ ರಸ್ತೆಗಳು ಐತಿಹಾಸವಾಗಿವೆ. ಆದ್ದರಿಂದ ಈ ಹೆಸರನ್ನು ಯಥಾವತ್ತಾಗಿ ಇಡಬೇಕು ಎಂದು ಆಗ್ರಹಿಸಿದರು.

ಜನರ ಆಸೆಯಂತೆ ಕೆಲಸಗಳಾಗಬೇಕು. ಆದರೆ ಶಾಸಕರ ಆಸೆಯಂತೆ ಕೆಲಸಗಳು ನಡೆಯುತ್ತಿವೆ. ಜಾತಿ, ಧರ್ಮದ ಹೆಸರಿನಲ್ಲಿ ಯಾವುದೇ ಧರ್ಮದ ಯುವಕರು ಬಲಿಯಾಗದೆ ಅಭಿವೃದ್ಧಿಗೆ ಒತ್ತುಕೊಡಬೇಕು. ಪ್ರತಿಯೊಂದು ಆಡಳಿತದಲ್ಲಿ ಶಾಸಕರ ಬದಲು ಅವರ ಪುತ್ರ ಹರ್ಷಾನಂದ ಹಸ್ತಕ್ಷೇಪ ಮಾಡತೊಡಗಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಪುರಸಭೆ ಜೆಡಿಎಸ್‌ ಸದಸ್ಯ ವೈಹೀದ್‌ ಜರ್ದಿ, ಸಂಘದ ಉಪಾಧ್ಯಕ್ಷ ಅಪ್ಪಾಸ್‌ ಅಲಿ ಜರ್ದಿ, ಫೀರೋಜ್‌ ಪಟೇಲ್‌ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next