Advertisement

ಆಸ್ತಿ ಕರ ಹೆಚ್ಚಳಕ್ಕೆ ವಿರೋಧ

09:35 AM Jun 13, 2020 | Suhan S |

ಹುಬ್ಬಳ್ಳಿ: ಮಹಾನಗರ ಪಾಲಿಕೆ ಆಸ್ತಿಕರ ಹೆಚ್ಚಿಸಿರುವುದನ್ನು ವಿರೋಧಿಸಿ ಆಮ್‌ ಆದ್ಮಿ ಪಾರ್ಟಿ ಮುಖಂಡರು ಶುಕ್ರವಾರ ಪಾಲಿಕೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

Advertisement

ಕೋವಿಡ್‌-19 ಸಂಕಷ್ಟದ ಪರಿಸ್ಥಿತಿಯಲ್ಲಿ ಸರಕಾರ ಕರ ಹೆಚ್ಚಿಸಿರುವುದು ಸರಿಯಾದ ಕ್ರಮವಲ್ಲ. ಈ ನಿರ್ಧಾರ ಹಿಂಪಡೆಯುವಂತೆ ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮೂಲಕ ಒತ್ತಾಯಿಸಲಾಗಿತ್ತು. ಆದರೆ ಜನರ ಸಂಕಷ್ಟ ಅರಿಯುವಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಸರಕಾರದ ಖಜಾನೆ ತುಂಬಿಸಿಕೊಳ್ಳಲು ಜನರ ಮೇಲೆ ಹೆಚ್ಚುವರಿ ತೆರಿಗೆ ಹೆಚ್ಚಿಸಿದ್ದು, ಇದೊಂದು ಜನ ವಿರೋಧಿ ಕ್ರಮ. ಬಿಜೆಪಿ ಸರಕಾರ ಘೋಷಿಸಿರುವ 20 ಸಾವಿರ ಕೋಟಿ ರೂ. ಪ್ಯಾಕೇಜ್‌ ಇಲ್ಲಿನ ಜನರಿಗೆ ತಲುಪಿಲ್ಲ. ಕೇವಲ ಆಶ್ವಾಸನೆಗಳ ಮೂಲಕ ಜನರನ್ನು ವಂಚಿಸುವ ಕೆಲಸವನ್ನು ಬಿಜೆಪಿ ಸರಕಾರದಿಂದ ನಡೆಯುತ್ತಿದೆ. ಕೂಡಲೇ ತೆರಿಗೆ ಹೆಚ್ಚಳ ವಾಪಸ್‌ ಪಡೆಯಬೇಕು, ವಿಶೇಷ ಪ್ಯಾಕೇಜ್‌ ಜನರಿಗೆ ತಲುಪಬೇಕೆಂದು ಒತ್ತಾಯಿಸಿ ಸರಕಾರಗಳ ವಿರುದ್ಧ ಘೋಷಣೆ ಕೂಗಿದರು.

ಆಪ್‌ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಮಾತನಾಡಿ, ತೆರಿಗೆ ಹೆಚ್ಚಳದಿಂದ ಪಾಲಿಕೆಗೆ ಸುಮಾರು 12 ಕೋಟಿ ರೂ. ಹೆಚ್ಚಳವಾಗಲಿದೆ. ಆದರೆ ಇದು ಜನಸಾಮಾನ್ಯರಿಗೆ ಹೊರೆಯಾಗಲಿದೆ ಎನ್ನುವ ಕಾಳಜಿ ಸರಕಾರಕ್ಕಿಲ್ಲ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ತೆರಿಗೆ ಕಡಿಮೆ ಮಾಡದಿದ್ದರೆ ಜನಾಂದೋಲನ ರೂಪಿಸಿ ಬೃಹತ್‌ ಹೋರಾಟ ನಡೆಸಲಾಗುವುದು ಎಂದರು.

ಮುಖಂಡ ವಿಕಾಸ ಸೊಪ್ಪಿನ ಮಾತನಾಡಿ, ಲಾಕ್‌ ಡೌನ್‌ ಸಂದರ್ಭದಲ್ಲಿ ಜನರು ಹೋರಾಟಕ್ಕೆ ಬರಲ್ಲ ಎನ್ನುವ ಕಾರಣಕ್ಕೆ ಹಲವು ಜನ ವಿರೋಧಿ ಕ್ರಮ ಹೇರುವ ಕೆಲಸ ಸರಕಾರಗಳಿಂದ ನಡೆಯುತ್ತಿವೆ. ಕೂಡಲೇ ತೆರಿಗೆ ಹೆಚ್ಚಳ ಕ್ರಮವನ್ನು ಸರಕಾರ ವಾಪಸ್‌ ಪಡೆಯಬೇಕೆಂದು ಒತ್ತಾಯಿಸಿದರು. ಮುಖಂಡರಾದ ಶಶಿಕುಮಾರ ಸುಳ್ಳದ, ವಿವೇಕಾನಂದ ಸಾಲಿನ್ಸ್‌, ಶಿವಲಿಂಗಪ್ಪ ಜಡೆಣ್ಣವರ, ವಿಜಯ ಸಾಯಿ, ತ್ಯಾಗರಾಜ ಅಲ್ಲಂಪಟ್ಟಿ, ಅನಂತಕುಮಾರ ಭಾರತೀಯ, ಲಕ್ಷ್ಮಣ ರಾಠೊಡ, ಪ್ರತಿಭಾ ದಿವಾಕರ, ಹರಿಕೃಷ್ಣ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next