ಕೋಲಾರ: ಕೇಂದ್ರ ಸರ್ಕಾರ 2003 ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದು ಖಾಸಗೀಕರಣಕ್ಕೆಮುಂದಾಗಿರುವಸರ್ಕಾರದ ನೀತಿ ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರು ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ನಗರದ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ ಮುಂದೆ ಜಮಾಗೊಂಡ ನೌಕರರು ಸಾರ್ವಜನಿಕ ವಲಯದಲ್ಲಿ ಶ್ರಮಿಕ ವರ್ಗವಾಗಿರುವ ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣ ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿಯಿಂದ ನೌಕರರು ಬೀದಿ ಪಾಲಾಗಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಎಂ. ವಿ.ಸ್ವಾಮಿ ಮಾತನಾಡಿ, ನೌಕರರ ರಕ್ಷಣೆ ಮತ್ತುಸಂರಕ್ಷಣೆ ಆದ್ಯತೆಯಾಗಿದೆ. ಕಾಯ್ದೆ ಕಾರ್ಮಿಕ ವಿರೋಧಿನೀತಿಯಾಗಿದೆ ಎಂದು ಟೀಕಿಸಿದರು.
ವಂಚನೆಗೆ ಒಳಗಾಗುವ ಸಾಧ್ಯತೆ: ನೌಕರರಸಂಘದ ಜಿಲ್ಲಾ ಅಧ್ಯಕ್ಷ ವಿ.ಎನ್.ಸುಬ್ರಹ್ಮಣಿ ಮಾತನಾಡಿ, ದೇಶದಲ್ಲಿ ಬಿಎಸ್‌ಎನ್‌ಎಲ್ ಖಾಸಗೀಕರಣ ಮಾಡಿರುವುದರಿಂದ ಅನೇಕ ನೌಕರರು ಸ್ವಯಂ ನಿವೃತ್ತಿ ಆಗಿ ಮೂಲೆ ಗುಂಪಾಗಿದ್ದಾರೆ. ಅದೇ ರೀತಿ ವಿದ್ಯುತ್ ಸರಬರಾಜು ಕಂಪನಿಗಳ ಮೇಲೆಯೂ ಖಾಸಗೀಕರಣದ ಪ್ರಯೋಗ ಮಾಡಿರುವುದರಿಂದ ನೌಕರರ ಜೊತೆಗೆ ಸಾರ್ವಜನಿಕರು ವಂಚನೆಗೆ ಒಳಗಾಗುವ ಸಾಧ್ಯತೆಗಳಿವೆ ಎಂದುಆರೋಪಿಸಿದರು.
ಪ್ರತಿಭಟನೆಯಲ್ಲಿ ನೌಕರರ ಸಂಘದ ಉಪಾಧ್ಯಕ್ಷ ವಿ.ಸತೀಶ್, ಸಹ ಕಾರ್ಯದರ್ಶಿ ಎನ್. ವಿಜಯಕುಮಾರ್, ಖಜಾಂಚಿ ಕೆ.ಸಿ.ನಾಗೇಶ್, ಪದಾಧಿಕಾರಿಗಳಾದ ಎಸ್. ಎನ್.ರಮೇಶ್, ಎನ್.ಶ್ರೀನಿವಾಸ್, ಅಂಜಿನಪ್ಪ, ಆನಂದ್‌ಕುಮಾರ್ ಇದ್ದರು.
ಕಾಯ್ದೆ ತಿದ್ದುಪಡಿ ಜಾರಿಯಾದರೆ ವಿದ್ಯುತ್‌ಕ್ಷೇತ್ರಕೆಲವೇ ವ್ಯಕ್ತಿಗಳ ನಿಯಂತ್ರಣಕ್ಕೆ ಒಳಪಡುತ್ತದೆ, ದರ ನಿಗದಿ ವಿಷಯವೂ ಖಾಸಗಿಯವರ ಇಚ್ಛೆ ಅವಲಂಬಿಸುತ್ತದೆ. ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದು,ಖಾಸಗೀಕರಣ ಕೈ ಬಿಡದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ.
–ವಿ.ಎನ್.ಸುಬ್ರಹ್ಮಣಿ, ನೌಕರರ ಸಂಘದ ಜಿಲ್ಲಾ ಅಧ್ಯಕ್ಷ