ಹೈದರಾಬಾದ್: ತೆಲಂಗಾಣದಲ್ಲಿ ಡಿ.7ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಇವಿಎಂಗಳ ಮೇಲೆ ಗುಲಾಬಿ ಬಣ್ಣದ ಸ್ಲಿಪ್‌ಗ್ಳನ್ನು ಬಳಕೆ ಮಾಡುವುದು ಬೇಡ. ಅದು ಆಡಳಿತಾ ರೂಢ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಬಣ್ಣ ಎಂದು ಕಾಂಗ್ರೆಸ್ ತಕರಾರು ತೆಗೆದಿದೆ. 90 ಲಕ್ಷ ಇವಿಎಂಗಳಿಗಾಗಿ 90 ಲಕ್ಷ ಮತಪತ್ರಗಳನ್ನು ಮುದ್ರಿಸಲು ಚುನಾವಣಾ ಆಯೋಗ ಆದೇಶ ನೀಡಿತ್ತು. ಆ ಕೆಲಸ ಈಗ ಪೂರ್ತಿಯಾಗಿ, ಇವಿಎಂಗಳ ಮೇಲೆ ಅಂಟಿಸಲಾಗಿದೆ.
ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವುದಕ್ಕೆ ಈ ಕ್ರಮ ಅಡ್ಡಿಯಾಗಿದೆ. ಇದರಿಂದಾಗಿ ಟಿಆರ್‌ಎಸ್‌ಗೆ ಅನುಕೂಲವಾಗಲಿದೆ ಎಂದು ಕಾಂಗ್ರೆಸ್ ನಾಯಕ ದಾಸೋಜು ಶ್ರವಣ ವಾದಿಸಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಮತದಾರನೂ ಟಿಆರ್‌ಎಸ್ ಅಭ್ಯರ್ಥಿಗೇ ಮತ ಹಾಕಬೇಕು ಎಂಬ ಭಾವನೆ ಹೊಂದಲಿದ್ದಾನೆ ಎಂದು ಪ್ರತಿಪಾದಿಸಿದ್ದಾರೆ. ಮಹಿಳೆಯರಿಗಾಗಿ ಗುಲಾಬಿ ಬಣ್ಣದ ಬೂತ್‌ಗಳ ನಿರ್ಮಾಣಕ್ಕೆ ಮುಂದಾಯಿತು. ಅದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದಾಗ ಪ್ರಸ್ತಾಪ ಹಿಂಪಡೆಯಿತು ಎಂದು ಹೇಳಿದ್ದಾರೆ.
ಇದೇ ವೇಳೆ ತೆಲಂಗಾಣ ಚುನಾವಣೆಗಾಗಿ ಕಾಂಗ್ರೆಸ್ 65 ಮಂದಿ ಇರುವ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ಉತ್ತಮ ಕುಮಾರ್ ರೆಡ್ಡಿ ಹುಝೂರ್‌ನಗರದಿಂದ, ಅವರ ಪತ್ನಿ ಪದ್ಮಾವತಿ ರೆಡ್ಡಿ ಕೊಡಾಡ್‌ನಿಂದ, ಕೆ.ಜನಾ ರೆಡ್ಡಿ ನಾಗಾರ್ಜುನ ಸಾಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಬಾರದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೂಚಿಸಿದ್ದರೂ, ಅದನ್ನು ಪಾಲಿಸಲಾಗಿಲ್ಲ.
ಇದೇ ವೇಳೆ ಛತ್ತೀಸ್‌ಗಢದ ಮಹಾ ಸಮುಂದ್, ಬಲೋಡಾಬಜಾರ್‌ಗಳಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಕಪ್ಪು ಹಣ ಹೊಂದಿರುವ ಕಳ್ಳರಿಗೆ ಅದನ್ನು ಸಕ್ರಮಗೊಳಿ ಸುವಲ್ಲಿ ನೆರವಾಗಿದ್ದಾರೆ ಎಂದು ದೂರಿದ್ದಾರೆ. ರಫೇಲ್ ಯುದ್ಧ ವಿಮಾನ ಡೀಲ್ ಅನ್ನು ರಿಲಯನ್ಸ್ ಡಿಫೆನ್ಸ್‌ಗೆ ನೀಡುವ ಮೂಲಕ ಅನಿಲ್ ಅಂಬಾನಿಗೆ ನೆರವಾಗಿದ್ದಾರೆ ಎಂದರು. ಜನಸಮಾನ್ಯರ ಬಳಿ ಇದ್ದ 500 ರೂ., 1 ಸಾವಿರ ರೂ. ನೋಟುಗಳನ್ನು ಕಿತುಕೊಂಡು ನೀರವ್ ಮೋದಿ, ವಿಜಯ ಮಲ್ಯರಿಗೆ ನೀಡಲಾಗಿದೆ ಎಂದು ರಾಹುಲ್ ಲೇವಡಿ ಮಾಡಿದರು.