ತಿ.ನರಸೀಪುರ: ಶಿಥಿಲಗೊಂಡ ಮನೆಗಳ ದುರಸ್ತಿ, ಮನೆ ನಿರ್ಮಾಣ ಮಾಡದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ವಿಧಿಸಿರುವ ನಿರ್ಬಂಧ ತೆರವುಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಸೋಮನಾಥಪುರ ಗ್ರಾಮಸ್ಥರು ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
ತಾಲೂಕಿನ ಸೋಮನಾಥಪುರದಲ್ಲಿರುವ ಐತಿಹಾಸಿಕ ಚನ್ನಕೇಶವ ದೇವಾಲಯದ ಮುಂದೆ ಜಮಾವಣೆಗೊಂಡ ಗ್ರಾಮಸ್ಥರು, ಕೇಂದ್ರ ಸರ್ಕಾರದ ಸ್ಮಾರಕ ಸಂರಕ್ಷಣೆ ಕಾಯ್ದೆಯಂತೆ ಪುರಾತತ್ವ ಸರ್ವೇಕ್ಷಣಾಲಯ ನಿರ್ಬಂಧ ವಿಧಿಸಿದ್ದರಿಂದ ಗ್ರಾಮದಲ್ಲಿ ಕುಸಿಯುವ ಸ್ಥಿತಿಯಲ್ಲಿರುವ ಮನೆ ದುರಸ್ತಿ ಮಾಡಲಾಗದೆ ಬಿರುಕುಬಿಟ್ಟ ಮನೆಗಳಲ್ಲಿ ಬದುಕುತ್ತಿದ್ದೇವೆ ಎಂದು ಪುರಾತತ್ವ ಸರ್ವೇಕ್ಷಣಾಲಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಘೋಷಣೆ ಕೂಗುತ್ತಾ ಧರಣಿ ಪ್ರಾರಂಭಿಸಿದರು.
ಹೋರಾಟ ಎಚ್ಚರಿಕೆ: ಹಳ್ಳಿ ಜನರ ಬದುಕಿನ ಮೇಲೆ ಬರೆ ಎಳೆಯುವ ಅವೈಜ್ಞಾನಿಕ ನಿರ್ಬಂಧದ ಪರಿಣಾಮ ಗ್ರಾಮದ ಮೂಲ ನಿವಾಸಿಗಳಾದ ನಾವ್ಯಾರೂ ಮನೆಯನ್ನೂ ಕಟ್ಟಂಗಿಲ್ಲ. ವಸತಿ ಮನೆ ಮಂಜೂರಾದರೂ ಜಿಪಿಎಸ್ ಮಾಡಿ ಮಂಜೂರಾತಿ ಹಣ ಬಿಡುಗಡೆ ಮಾಡುತ್ತಿಲ್ಲ. ಮನೆ ಕಟ್ಟಲಾಗದೆ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಮನೆ ನಿರ್ಮಾಣಕ್ಕೆ ಅವಕಾಶ ಕೊಡದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಬದುಕಲು ಬಿಡಿ: ಗ್ರಾಪಂ ಸದಸ್ಯ ಸುರೇಶ್ ಮಾತನಾಡಿ, ಈ ಕುರಿತು ಎರಡು ವರ್ಷಗಳ ಹಿಂದೆಯೇ ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಿರ್ಬಂಧ ಮಿತಿ ಹೊರಗೆ ಕೂಡ ಮನೆ ಕಟ್ಟಲು ಅಧಿಕಾರಿಗಳು ಬಿಡುತ್ತಿಲ್ಲ. ಗ್ರಾಮದ ಮೂಲ ನಿವಾಸಿಗಳಾದ ನಮ್ಮ ಜೀವನವನ್ನೇ ಕಿತ್ತುಕೊಳ್ಳುವ ಸ್ಮಾರಕ ಮನಗೆ ಬೇಕಿಲ್ಲ. ಕೂಡಲೇ ಚನ್ನಕೇಶವ ದೇವಾಲಯವನ್ನು ಸ್ಥಳಾಂತರಿಸಿ, ನಮ್ಮನ್ನು ಬದುಕಲು ಬಿಡಿ. ಇಲ್ಲವೆ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಿ.
ಜಂಟಿ ಸರ್ವೆಗೆ ಸೂಚನೆ: ಪ್ರತಿಭಟನೆ ಸುದ್ಧಿ ತಿಳಿದ ಶಾಸಕ ಅಶ್ವಿನ್‌ಕುಮಾರ್ ಗ್ರಾಮಕ್ಕೆ ಭೇಟಿ ನೀಡಿ ಶಿಥಿಲ ಮನೆಗಳನ್ನು ಪರಿಶೀಲಿಸಿದ ಬಳಿಕ ಪ್ರತಿಭಟನಾನಿರತರ ಅಹವಾಲು ಸ್ವೀಕರಿಸಿ, ಇಂದಿನಿಂದಲೇ ತಾಲೂಕು ಆಡಳಿತ ಹಾಗೂ ಪುರಾತತ್ವ ಸರ್ವೇಕ್ಷಣಾಲಯ ಜಂಟಿಯಾಗಿ ಸರ್ವೆ ಕಾರ್ಯವನ್ನು ಆರಂಭಿಸಬೇಕು. ನೂರು ಮೀಟರ್ ಪರಿಮಿತಿಯಿಂದ ಹೊರಗಿರುವ ಜಾಗದಲ್ಲಿ ಮನೆ ನಿರ್ಮಾಣ ಮತ್ತು ದುರಸ್ತಿಗೆ ಅನುಮತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಶೀಲ್ದಾರ್ ಕೆ.ರಾಜು, ತಾಪಂ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಡಿ.ಎಸ್.ಪ್ರೇಮ್‌ಕುಮಾರ್, ಪಿಡಿಒ ಬಸವಯ್ಯ, ಟಿಒಟಿ ನಾಗರಾಜು, ಪುರಾತತ್ವ ಸರ್ವೇಕ್ಷಣಾಲಯ ಎಇ ಚಂದ್ರಕಾಂತ್, ಸಂರಕ್ಷಣಾ ಸಹಾಯಕರಾದ ಸುನೀಲ್, ಗಿರೀಶ್ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಗ್ರಾಪಂ ಅಧ್ಯಕ್ಷ ಮಂಜೇಶ್‌ಗೌಡ, ಮಾಜಿ ಅಧ್ಯಕ್ಷ ಮಹದೇವಯ್ಯ, ಮಾಜಿ ಉಪಾಧ್ಯಕ್ಷ ಕೃಷ್ಣಮೂರ್ತಿ, ಸದಸ್ಯರಾದ ಸುರೇಶ್, ಪ್ರೀತಂ, ಹರೀಶ್ ಇತರರಿದ್ದರು.