Advertisement

ಭೂಸ್ವಾಧೀನಕ್ಕೆ ವಿರೋಧ

01:42 PM May 22, 2019 | Suhan S |

ಬೆಂಗಳೂರು: ರಸ್ತೆ ಅಗಲೀಕರಣಕ್ಕೆ ಸರ್ಕಾರಿ ಆಯುರ್ವೇದ ಕಾಲೇಜಿನ ಮುಕ್ಕಾಲು ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲು ಬಿಬಿಎಂಪಿ ಮುಂದಾಗಿದ್ದು ಇದಕ್ಕೆ ತೀವ್ರ ಅಪಸ್ವರ ಎದ್ದಿದೆ.

Advertisement

ಈ ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ಕಾಲೇಜು ಜಾಗ ಮಾತ್ರವಲ್ಲದೇ, ಆಸ್ಪತ್ರೆಯಲ್ಲಿನ ರೋಗಿಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿದ್ದ 15ಕ್ಕೂ ಹೆಚ್ಚು ಔಷಧೀಯ ಮರಗಳು ಬಲಿಯಾಗುತ್ತಿವೆ. ಇನ್ನು ರಸ್ತೆ ಅಗಲೀಕರಣದಿಂದ ವಾಹನಗಳು ಆಸ್ಪತ್ರೆಯ ವಿಶೇಷ ವಾರ್ಡ್‌ ಪಕ್ಕದಲ್ಲಿಯೇ ಹಾದುಹೋಗುವುದರಿಂದ ಆಸ್ಪತ್ರೆಯ ರೋಗಿಗಳಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಹೀಗಾಗಿ, ರಸ್ತೆ ಅಗಲೀಕರಣ ಹಾಗೂ ಆಸ್ಪತ್ರೆ ಭೂಮಿ ಸ್ವಾಧೀನಕ್ಕೆ ಆಯುರ್ವೇದ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಮೆಜೆಸ್ಟಿಕ್‌ ಹಿಂಭಾಗದ ಸುಬೇದಾರ್‌ ಛತ್ರಂ ರಸ್ತೆಯಲ್ಲಿ ಮೂವಿಲ್ಯಾಂಡ್‌ ಚಿತ್ರಮಂದಿರ ಮುಂಭಾಗದಿಂದ ಧನ್ವಂತರಿ ರಸ್ತೆಗೆ ಸಂಪರ್ಕ ಕಲಿಸುವ ಚಿಕ್ಕ ಮಾರ್ಗವೊಂದು ಈಗಾಗಲೇ ಇದೆ. ಆ ಮಾರ್ಗದಲ್ಲಿ ಜನಜಂಗುಳಿ ಜಾಸ್ತಿ ಇದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಆ ಮಾರ್ಗದ ಅಗಲೀಕರಣಕ್ಕೆ ಬಿಬಿಎಂಪಿ ಮುಂದಾಗಿದೆ. ಮಾರ್ಗದ ಒಂದು ಬದಿ ಆಯುರ್ವೇದ ಆಸ್ಪತ್ರೆಯ ಕಾಂಪೌಡ್‌ ಇದ್ದು, ಮತ್ತೂಂದು ಬದಿ ವಾಣಿಜ್ಯ ಮಳಿಗೆಗಳೇ ತುಂಬಿರುವ ಕಟ್ಟಡಗಳಿವೆ. ಆದರೆ, ಬಿಬಿಎಂಪಿ ವಾಣಿಜ್ಯ ಮಳಿಗೆಗಳ ಜಾಗವನ್ನು ಬಿಟ್ಟು ನಗರದಲ್ಲಿರುವ ಏಕೈಕ ಸರ್ಕಾರಿ ಆಯುರ್ವೇದ ಕಾಲೇಜು ಕಡೆಯ 13 ಅಡಿ ಜಾಗವನ್ನೇ ಸ್ವಾಧೀನಕ್ಕೆ ಪಡೆಯಲು ಮುಂದಾಗಿವುದು ಎಷ್ಟು ಸರಿ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ.

ಈ ಕುರಿತು ಸಮನ್ವಯ ಸಮಿತಿ ಸಭೆಯಲ್ಲಿ ಸರ್ಕಾರ ಒಪ್ಪಿಗೆ ಪಡೆದಿರುವ ಬಿಬಿಎಂಪಿ ಆರೋಗ್ಯ ಇಲಾಖೆಗೆ ಭೂಮಿ ಸ್ವಾಧೀನಕ್ಕೆ ಪಡೆಯಲು ಮುಂದಾಗಿದೆ. ಭೂಸ್ವಾಧೀನ ಕುರಿತ ಪತ್ರ ಸೋಮವಾರ ಕಾಲೇಜು ಆಡಳಿತ ಮಂಡಳಿಗೆ ಲಭ್ಯವಾಗಿದೆ. ಇನ್ನು ಭೂಸ್ವಾಧೀನ ವಿಚಾರ ತಿಳಿದ ಕಾಲೇಜು ವಿದ್ಯಾರ್ಥಿಗಳು ಸಾಕಷ್ಟು ಬೇಸರಗೊಂಡಿದ್ದು, ಭೂಸ್ವಾಧೀನಕ್ಕೆ ಅವಕಾಶ ನೀಡದೇ ಕಾಲೇಜು ಉಳಿಸಿಕೊಳ್ಳಲು ಹೋರಾಟಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.

ಸಿಸಿಐಎಂ ನಿಯಮ ಉಲ್ಲಂಘನೆ: ಸಿಸಿಐಎಂ (ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್‌ ಮೆಡಿಸಿನ್‌) ನಿಮಯದ ಪ್ರಕಾರ ಆಯುರ್ವೇದ ಕಾಲೇಜು ಇಂತಿಷ್ಟು ಜಾಗ ಹೊಂದಿರಬೇಕು ಎಂಬ ನಿಯಮವಿದೆ. ಸದ್ಯ ಆಸ್ಪತ್ರೆಯು 5.3 ಹೆಕ್ಟೆರ್‌ ಜಾಗವಿದ್ದು, ನಿಯಮ ಪಾಲಿಸುತ್ತಿದೆ. ಈಗ ಬಿಬಿಎಂಪಿ ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನ ಪಡಿಸಿಕೊಂಡರೆ ಆಸ್ಪತ್ರೆ ಜಾಗ ಸುಮಾರು 4.6 ಹೆಕ್ಟೇರ್‌ಗೆ ಬರಲಿದೆ. ಈ ಮೂಲಕ ಕಾಲೇಜು ಸಿಸಿಐಎಂ ನಿಯಮ ಉಲ್ಲಂಘಿಸಿದಂತಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಕಾಲೇಜಿನ ಅಭಿವೃದ್ಧಿಗೆ ಯೋಜನೆಗೆ ತೊಡಕಾಗಲಿದೆ. ಈ ಕುರಿತು ಎರಡು ತಿಂಗಳ ಹಿಂದೆ ಪ್ರಸ್ತಾವನೆ ಬಂದಾಗ ವಿದ್ಯಾರ್ಥಿಗಳು, ಆಸ್ಪತ್ರೆ, ವೈದ್ಯರು ಹಾಗೂ ನೌಕರರು ಒಟ್ಟಾಗಿ ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದೆವು. ಆದರೂ, ಈಗ ಸ್ವಾಧೀನಕ್ಕೆ ಮುಂದಾಗಿರುವುದು ಬೇಸರವಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಆಸ್ಪತ್ರೆ ವೈದ್ಯರು ತಿಳಿಸಿದರು.

Advertisement

ಅಭಿವೃದ್ಧಿ ಬಿಟ್ಟು ಭೂಸ್ವಾಧೀನ ಏಕೆ?: ಸದ್ಯ ನಗರದ ಕೇಂದ್ರ ಭಾಗದಲ್ಲಿರುವ ಈ ಸರ್ಕಾರಿ ಆಯುರ್ವೇದ ಕಾಲೇಜಿಗೆ 50 ವರ್ಷಗಳ ಇತಿಹಾಸವಿದೆ. ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಸಾಕಷ್ಟು ಜನ ಇಲ್ಲಿಗೆ ಚಿಕಿತ್ಸೆಗೆಂದು ಬರುತ್ತಾರೆ. ನಿತ್ಯ ಸಾವಿರಕ್ಕೂ ಹೆಚ್ಚು ಹೊರರೋಗಿಗಳು ಚಿಕಿತ್ಸೆಗೆಂದು ಬರುತ್ತಿದ್ದು, ಒಳರೋಗಿಗಳ ವಿಭಾಗದಲ್ಲಿ ಸುಮಾರು 400 ಹಾಸಿಗೆ ಇದ್ದರೂ, ಯಾವಾಗಲೂ ತುಂಬಿರುತ್ತದೆ. ಉಳಿದಂತೆ ಕಾಲೇಜಿನಲ್ಲಿ ಸದ್ಯ 600ಕ್ಕೂ ಹೆಚ್ಚು ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಸಮಸ್ಯೆ ಇದ್ದು, ಅದಕ್ಕೆ ಜಾಗದ ಕೊರತೆ ಎದುರಿಸಲಾಗುತ್ತಿದೆ. ಈ ವೇಳೆ ಆಸ್ಪತ್ರೆಯನ್ನು ಅಭಿವೃದ್ಧಿ ಪಡೆಸುವುದಕ್ಕೆ ಮುಂದಾಗಬೇಕಾದ ಸರ್ಕಾರ ಭೂಸ್ವಾಧೀನ ಮಾಡುವುದು ಸರಿಯಲ್ಲ ಎಂಬುದು ವಿದ್ಯಾರ್ಥಿಗಳ ಕೂಗಾಗಿದೆ.

ಔಷಧೀಯ ಸಸ್ಯಗಳು ನಾಶವಾಗುವ ಆತಂಕ:

ಸದ್ಯ ಸ್ವಾಧೀನವಾಗುವ ಜಾಗದಲ್ಲಿ ಕಾಂಚನಾರ, ಅಶೋಕ, ಅಶ್ವತ್ಥ, ಎರಂಡಾ, ಅಗ್ನಿಮಂಥ, ಬೇವು ಸೇರಿದಂತೆ 15ಕ್ಕೂ ಹೆಚ್ಚು ಆಯುರ್ವೇದ ಮರಗಳಿವೆ. ನಿತ್ಯ ರೋಗಿಗಳ ಪಂಚಕರ್ಮ ಚಿಕಿತ್ಸೆಗೆ ಬೇಕಾಗುವ ಗಿಡಮೂಲಿಕೆಯನ್ನು ಇಲ್ಲಿ ಬೆಳೆಸಿದ ಸಸ್ಯಗಳಿಂದಲೇ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ, ಇಲ್ಲೊಂದು ಔಷಧೀಯ ಸಸಿ ಉದ್ಯಾನ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಲ್ಲದೇ ಬಡರೋಗಿ ಗಳಿಗೆ ಇಲ್ಲಿನ ಗಿಡ ಮೂಲಿಕೆಗಳು ಉಚಿತವಾಗಿ ಲಭ್ಯವಾಗುತ್ತಿದ್ದವು. ಈಗ ಭೂಸ್ವಾಧೀನವಾದರೆ ಗಿಡಮೂಲಿಕೆ ನಾಶವಾಗಲಿದೆ ಎಂದು ಸ್ನಾತಕೋತ್ತರ ವಿದ್ಯಾರ್ಥಿನಿ ರಂಜಿನಿ ತಿಳಿಸಿದರು.
● ಜಯಪ್ರಕಾಶ್‌ ಬಿರಾದಾರ್‌
Advertisement

Udayavani is now on Telegram. Click here to join our channel and stay updated with the latest news.

Next