Advertisement

ಕಾಡಾ ಸಮಿತಿ ನಿರ್ಧಾರಕ್ಕೆ  ವಿರೋಧ

11:57 AM Jul 17, 2021 | Team Udayavani |

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಭದ್ರಾ ನೀರನ್ನು ವಾಣಿವಿಲಾಸ ಸಾಗರಕ್ಕೆ ಹರಿಸಬಾರದುಎನ್ನುವ ಕಾಡಾ ಸಮಿತಿ ನಿರ್ಧಾರವನ್ನು ಜಿಲ್ಲಾ ನೀರಾವರಿ ಹೋರಾಟ ಸಮಿತಿ ವಿರೋಧಿಸಿದ್ದು, ಇದು ಬಯಲುಸೀಮೆ ರೈತರನ್ನು ಘಾಸಿಗೊಳಿಸುವ ತೀರ್ಮಾನವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಮಾತನಾಡಿ, ಈಗಾಗಲೇ ಹಂಚಿಕೆಯಾಗಿರುವ ನೀರಿನ ಸೂತ್ರಕ್ಕೆ ಗುಲಗಂಜಿಯಷ್ಟು ಧಕ್ಕೆಯಾದರೂ ಬಯಲುಸೀಮೆ ಜನರ ಆಕ್ರೋಶ ಇಮ್ಮಡಿಯಾಗುತ್ತದೆ ಎಂದು ಎಚ್ಚರಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯಡಿಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇಡೀ ಯೋಜನೆಯಲ್ಲಿ ಎಲ್ಲಿಯೂ ಗದ್ದೆ ಹೊಡೆಯುವ ಪ್ರಸ್ತಾಪವಿಲ್ಲ. ಕೆರೆ ತುಂಬಿಸುವ, ಹನಿ ನೀರಾವರಿ ಸೌಲಭ್ಯದ ಹಾಗೂ ಕುಡಿಯುವ ನೀರು ಪೂರೈಕೆ ಬದ್ಧತೆಗಳಿವೆ. ಮನುಷ್ಯನಿಗೆ ಅಗತ್ಯವಾಗಿ ಬೇಕಾಗಿರುವ ಮೂಲ ಸೌಲಭ್ಯ ಕಲ್ಪಿಸುವ ಸಾಂವಿಧಾನಿಕ ಆಶಯಗಳನ್ನು ಯೋಜನೆ ಒಳಗೊಂಡಿದೆ ಎಂದರು.

ಭದ್ರಾ ಮೇಲ್ದಂಡೆಗೆ ಭದ್ರಾ ಜಲಾಶಯದಿಂದ 12.50 ಹಾಗೂ ತುಂಗಾ ಜಲಾಶಯದಿಂದ 17.40 ಟಿಎಂಸಿಯಷ್ಟು ನೀರು ಹಂಚಿಕೆಯಾಗಿದೆ. ಯೋಜನೆ ಕಾಮಗಾರಿ ಮುಕ್ತಾಯದ ಹಂತಕ್ಕೆ ಬರುತ್ತಿರುವ ವೇಳೆ ನೀರು ಹಂಚಿಕೆ ಸೂತ್ರಕ್ಕೆ ಕ್ಯಾತೆ ತೆಗೆಯುವುದು ಸರಿಯಾದ ಕ್ರಮವಲ್ಲ. ನೀರನ್ನು ತುಂಗಾದಿಂದಲೇ ತೆಗೆದುಕೊಳ್ಳಿ, ಭದ್ರಾದಿಂದ ಕೊಡಲು ಸಾಧ್ಯವಿಲ್ಲ ಎಂಬ ಹೇಳಿಕೆ ಹಾಗೂ ನಿರ್ಣಯಗಳು ರೈತರ ನಡುವೆ ಸಂಘರ್ಷ ಸೃಷ್ಟಿಸುವ ಪ್ರಯತ್ನಗಳಾಗಿವೆ ಎಂದು ಹೇಳಿದರು.

ಚಿತ್ರದುರ್ಗ ಸೇರಿದಂತೆ ಬಯಲು ಸೀಮೆ ರೈತರು ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸುವನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದರೆ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆ ತಪ್ಪುತ್ತದೆ ಎಂಬಕಾಳಜಿಯಿಂದ ಕೇಂದ್ರದ ಮುಂದೆ ಹಕ್ಕೊತ್ತಾಯಮಂಡಿಸುತ್ತಿದ್ದಾರೆ. ಇಂತಹ ವೇಳೆ ಶಿವಮೊಗ್ಗ ಹಾಗೂದಾವಣಗೆರೆ ಜಿಲ್ಲೆಯ ರೈತರು ನೀರಿಗಾಗಿ ಕ್ಯಾತೆತೆಗೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಹೋರಾಟ ಸಮಿತಿ ಪ್ರಶ್ನಿಸುತ್ತದೆ ಎಂದರು.

Advertisement

ಚಿತ್ರದುರ್ಗ ಜಿಲ್ಲೆ ಕಳೆದ ಒಂದು ನೂರು ವರ್ಷದಲ್ಲಿ ಎಪ್ಪತ್ತು ವರ್ಷಗಳಷ್ಟು ಸುದೀರ್ಘ‌ ಬರ ಅನುಭವಿಸಿದೆ. ಸಾವಿರ ಅಡಿ ಆಳದವರೆಗೆ ಕೊಳವೆ ಬಾವಿ ತೆಗೆದೂನೀರು ಸಿಗುವುದಿಲ್ಲ, ಸಿಕ್ಕಿದರೂ ಫ್ಲೋರೈಡ್‌ ಅಂಶದಿಂದಕೂಡಿರುತ್ತದೆ. ಇಂದಿಗೂ ಈ ಭಾಗದ ಜನ ಇದೇ ನೀರು ಕುಡಿಯುತ್ತಿದ್ದಾರೆ.

ರೈತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿನುಲೇನೂರು ಎಂ.ಶಂಕ್ರಪ್ಪ ಮಾತನಾಡಿ, ನೀರಾವರಿ ವಿಚಾರವಾಗಿ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಜನ ಇಷ್ಟು ದಿನ ಸುಖದ ಊಟ ಮಾಡಿದ್ದಾರೆ.ಬಯಲು ಸೀಮೆ ರೈತರು ಇವರ ಮುಂದೆ ನಮಗೆ ಗಂಜಿಯನ್ನಾದರೂ ಕುಡಿಯಲು ಅವಕಾಶ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಎಲ್ಲಿಯೂ ಕೂಡಾ ಪೂರ್ಣ ಪ್ರಮಾಣದ ಆಕ್ರೋಶ ಹೊರ ಹಾಕದೆ ವಿನಮ್ರವಾಗಿಯೇ ಕೇಳಿದ್ದಾರೆ. ನೀರು ನಿರಾಕರಿಸಿದರೆ ಹೋರಾಟ ಅನಿವಾರ್ಯ ಎಂದರು.

ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಇನ್ನು ಮುಂದೆ ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳು ಸೇರ್ಪಡೆಯಾಗಬೇಕು. ಹಾಗಾಗಿ ಕಾಡಾ ಸಮಿತಿ ವ್ಯಾಪ್ತಿಗೆ ಈ ಮೂರು ಜಿಲ್ಲೆಗಳ ಪ್ರತಿನಿಧಿ

ಗಳ ನೇಮಕ ಮಾಡಬೇಕು ಎಂದು ಸರ್ಕಾರವನ್ನು ಹೋರಾಟ ಸಮಿತಿ ಒತ್ತಾಯಿಸಿದೆ. ಕಾಡಾ ಸಮಿತಿಯಲ್ಲಿ ಈ ಎರಡು ಜಿಲ್ಲೆಗಳವರೇ ಇರುವುದರಿಂದ ನಮ್ಮ ಪರ ಧ್ವನಿ ಎತ್ತುವವರು ಇಲ್ಲವಾಗಿದ್ದಾರೆ. ಕಾಡಾಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸರ್ಕಾರದ ನಿಲುವು ಬದಲಾಗಬೇಕು. ಬಯಲು ಸೀಮೆ ವ್ಯಾಪ್ತಿಗೆ ಸೇರಿದವರನ್ನು ಕಾಡಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಲುಎಲ್ಲ ಪಕ್ಷಗಳು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ನೀರಾವರಿ ಹೋರಾಟ ಸಮಿತಿ ಮನವಿ ಮಾಡುತ್ತದೆ ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ಮುಖಂಡರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಧನಂಜಯ, ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ, ದಯಾನಂದ ಇದ್ದರು.

ಸಂಸದ ಸಿದ್ದೇಶ್ವರ ಹೇಳಿಕೆಗೆ ಅಸಮಾಧಾನ:

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಭದ್ರಾ ನೀರನ್ನು ಬಿಡಲ್ಲ, ಕೊಡಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಭದ್ರಾದಿಂ ದಅವರ ಮತಕ್ಷೇತ್ರ ವ್ಯಾಪ್ತಿಯ ಜಗಳೂರು ತಾಲೂಕಿಗೂ 2.40 ಟಿಎಂಸಿ ನೀರು ಹರಿಯುತ್ತದೆ. ಹಾಗಾದರೆ ಜಗಳೂರು ರೈತರಿಗೆ ಒಂದು ನ್ಯಾಯ, ದಾವಣಗೆರೆ ರೈತರಿಗೆ ಒಂದು ನ್ಯಾಯವಾ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next