Advertisement
ಇಲ್ಲಿನ ಬಿಜಿಎಸ್ ಅಂಧರ ಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ಟ್ರಸ್ಟ್ ಹಾಗೂ ಕೆ.ಎಸ್.ಭಗವಾನ್ ಅವರು ರಚಿಸಿರುವ ಕೆಂಗಲ್ ಭಾಷಣಗಳು ಗ್ರಂಥ ಬಿಡುಗಡೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕೆ.ಎಸ್.ಭಗವಾನ್ ಅವರು ಗ್ರಂಥದ ಬಗ್ಗೆ ಮಾತನಾಡಲು ಆಹ್ವಾನಿಸಲಾಗಿತ್ತು. ಅವರ ಆಗಮನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.
Related Articles
Advertisement
ಭಗವಾನ್ ಅವರನ್ನು ಆಹ್ವಾನಿಸಿರುವುದಕ್ಕೆ ಸಾರ್ವಜನಿಕರ ಕ್ಷಮೆಯಾಚಿಸಿ ಎಂದು ಪಟ್ಟು ಹಿಡಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಮಾಜಿ ಶಾಸಕ ಕೆ.ರಾಜು ಮಾಡಿಕೊಂಡ ಮನವಿಗೂ ಪ್ರತಿಭಟನಾಕಾರರು ಮಣಿಯಲಿಲ್ಲ. ಇನ್ನೊಂದೆಡೆ ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ.ಶಿವನಂಜಯ್ಯ ಅವರು ಕ್ಷಮೆಯಾಚನೆಗೆ ನಿರಾಕರಿಸಿದರು. ಭಗವಾನ್ ಅವರು ಕಾರ್ಯಕ್ರಮಕ್ಕೆ ಬರಲಿಲ್ಲ. ಹೀಗಾಗಿ ಕ್ಷಮೆಯಾಚಿಸುವುದು ಅಪ್ರಸ್ತುತ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರು, ತಾವು ಕಾರ್ಯಕ್ರಮದ ವಿರೋಧಿಗಳಲ್ಲ. ಮಠಗಳು ಹಿಂದೂ ಧರ್ಮದ ಕಿರೀಟ ಇದ್ದಂತೆ. ಹಿಂದೂ ಧರ್ಮವನ್ನು ಅವಹೇಳನ ಮಾಡುವ ವ್ಯಕ್ತಿಗಳನ್ನು ಮಠದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಆಹ್ವಾನಿಸಬಾರದು ಎಂದು ಕ್ಷಮೆಯಾಚನೆಗೆ ಪಟ್ಟು ಹಿಡಿದರು. ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಕೆಂಗಲ್ ಹನುಮಂತಯ್ಯ ಉತ್ತಮ ಆಡಳಿತಗಾರರಾಮನಗರ: ಕೆಂಗಲ್ ಹನುಮಂತಯ್ಯ ಅವರು ದಕ್ಷತೆ, ಪ್ರಾಮಾಣಿಕತೆ ಮತ್ತು ಕಠಿಣ ನಿರ್ಧಾರಗಳನ್ನು ತೆಗದುಕೊಳ್ಳುತ್ತಿದ್ದ ಉತ್ತಮ ಆಡಳಿತಗಾರ ಎಂದು ಎಂಎಲ್‌ಸಿ ಸಿ.ಎಂ.ಲಿಂಗಪ್ಪ ಸ್ಮರಿಸಿದರು. ಬಿಜಿಎಸ್ ಅಂಧರ ಶಾಲೆಯ ಸಭಾಂಗಣದಲ್ಲಿ ದಿ. ಸಿಎಂ ಕೆಂಗಲ್ ಹನುಮಂತಯ್ಯ 111ನೇ ಜಯಂತಿ, ಕೆಂಗಲ್ ಹನುಮಂತಯ್ಯ ಸಾಮಾಜಿಕ ಹಾಗೂ ಸಾಂಸ್ಕತಿಕ ಟ್ರಸ್ಟ್ ಉದ್ಘಾಟನೆ ಮತ್ತು ರಾಜರ್ಷಿ ಕೆಂಗಲ್ ಭಾಷಣಗಳು ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಇಂದು ರಾಜ್ಯದ ಆಡಳಿತದ ಶಕ್ತಿ ಕೇಂದ್ರವಾಗಿರುವ ಬೆಂಗಳೂರಿನ ವಿಧಾನಸೌಧವನ್ನು ನಿರ್ಮಿಸಿ ಇಡೀ ವಿಶ್ವವೇ ಬೆಂಗಳೂರು ಕಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ. ಆದರೆ, ತಾವೇ ಕಾರಣರಾದ ವಿಧಾನಸೌಧದಲ್ಲಿ ಒಂದು ದಿನವೂ ಆಡಳಿತ ನಡೆಸಲು ಅವರಿಗೆ ಆಗಲಿಲ್ಲ ಎಂದು ವಿಷಾದಿಸಿದರು. ಸಚಿವ ಸ್ಥಾನಕ್ಕೆ ರಾಜೀನಾಮೆ: ಕೆಂಗಲರು ಕೇಂದ್ರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ರೈಲು ಅಪಘಾತ ಉಂಟಾಯಿತು. ಅದರ ಹೊಣೆ ಹೊತ್ತು ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇಂತಹ ರಾಜಕರಣಗಳು ಅಪರೂಪ ಎಂದರು. ಕೆಂಗಲ್ ಆದರ್ಶ ರಾಜಕಾರಣಿ: ಮಾಜಿ ಶಾಸಕ ಕೆ. ರಾಜು ಮಾತನಾಡಿ, ಅನ್ಯಾಯ, ಅಕ್ರಮ ಮಾಡುವವರು ಅಧಿಕಾರ ಹಿಡಿದಿರುವ ಈ ದಿನಗಳಲ್ಲಿ ಕೆಂಗಲ್ ಹನುಮಂತಯ್ಯರಂತಹ ರಾಜಕಾರಣಿಗಳು ನಮಗೆ ಆದರ್ಶವಾಗಬೇಕಿದೆ ಎಂದರು. ಲೇಖಕರನ್ನು ಕರೆಯುವುದು ವಾಡಿಕೆ: ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ.ಶಿವನಂಜಯ್ಯ ಮಾತನಾಡಿ, ಕೆಂಗಲ್ ಹನುಮಂತಯ್ಯ ಅವರ ಇಂಗ್ಲಿಷ್ ಭಾಷಣಗಳನ್ನು ಕೆ.ಎಸ್.ಭಗವಾನ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇದು ಕೆಂಗಲ್ ಅವರ ಸ್ಮರಣೆಯ ಕಾರ್ಯಕ್ರಮ. ಮೇಲಾಗಿ ಕೃತಿ ಬಿಡುಗಡೆಯಾಗುತ್ತಿದ್ದು, ಅದರ ಲೇಖಕರನ್ನು ಸಭೆಗೆ ಕರೆಯುವುದು ವಾಡಿಕೆ. ಸುಖಾಸುಮ್ಮನೆ ಹಿಂದೂ ಪರ ಸಂಘಟನೆಗಳು ಗದ್ದಲವೆಬ್ಬಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭ ರಾಜರ್ಷಿ ಕೆಂಗಲ್ ನೆನಪುಗಳು ಕೃತಿಯನ್ನು ಬಿಡುಗಡೆ ಮಾಡಲಾಯಿತು. ಜಿಪಂ ಅಧ್ಯಕ್ಷ ಎಂ.ಎನ್ ನಾಗರಾಜು ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಪಂ ಅಧ್ಯಕ್ಷ ಗಾಣಕಲ್ ನಟರಾಜು. ನಗರಸಭೆ ಅಧ್ಯಕ್ಷೆ ರತ್ನಮ್ಮ ಪಾಪಣ್ಣ, ಸಾಹಿತಿ ಸು.ಚಿ. ಗಂಗಾಧರ, ಟ್ರಸ್ಟ್ ಕಾರ್ಯದರ್ಶಿ ಚೂಡಲಿಂಗೇಶ್ವರಯ್ಯ, ಸಹ ಕಾರ್ಯದರ್ಶಿ ಎಂ. ರೇವಣ್ಣ, ಉಪಾಧ್ಯಕ್ಷ ಚೂಡಯ್ಯ, ಖಜಾಂಚಿ ಎಂ.ಟಿ.ಶ್ರೀನಿವಾಸಯ್ಯ, ಪ್ರಕಾಶಕ ಎಚ್.ಎಂ. ಬೋರಯ್ಯ ಹಾಜರಿದ್ದರು.