ಶಹಾಬಾದ: ಖಾಸಗಿ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ ಇಂಟರ್ನೆಟ್ ಪ್ಯಾಕ್, ಮೊಬೈಲ್ ರಿಚಾರ್ಜ್ ದರಗಳಲ್ಲಿ ತೀವ್ರ ಏರಿಕೆಯಾಗಿದ್ದನ್ನು ವಿರೋಧಿಸಿ ಎಐಡಿಎಸ್‌ಒ, ಎಐಡಿವೈಒ ಸಂಘಟನೆಗಳಿಂದ ಗುರುವಾರ ರಾಷ್ಟ್ರವ್ಯಾಪಿ ಟ್ವಿಟ್ಟರ್ ಸ್ಟ್ರಾಮ್ ಚಳವಳಿ ನಡೆಸಲಾಯಿತು.
ಲಾಕ್‌ಡೌನ್ ಸಮಯದಲ್ಲಿ ಮತ್ತು ನಂತರ ಮೊಬೈಲ್ ತಂತ್ರಜ್ಞಾನ, ಇಂಟರ್ನೆಟ್ ಸೇವೆ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಬಹುತೇಕ ಎಲ್ಲ ತರಗತಿಗಳ ವಿದ್ಯಾರ್ಥಿಗಳಿಗೂ ಆನ್ ಲೈನ್ ತರಗತಿಗಳಲ್ಲಿ ಪಾಲ್ಗೊಳ್ಳಲು ಮೊಬೈಲ್ ಇಂಟರ್ನೆಟ್ ಸೇವೆ ಅಗತ್ಯವಾಗಿದೆ.
ಪ್ರತಿಯೊಂದು ಕ್ಷೇತ್ರದಲ್ಲೂ ಡಿಜಿಟಲೀಕರಣದಿಂದ ಮೊಬೈಲ್ ಬಳಕೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ ದರಗಳನ್ನು ತೀವ್ರವಾಗಿ ಹೆಚ್ಚಿಸಿದ್ದು ಜನಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಸಂಘಟನೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಜಿಯೋ, ವೊಡಾಫೋನ್, ಐಡಿಯಾ, ಏರ್‌ಟೆಲ್ ಕಂಪನಿಗಳ ನೆಟ್ ಪ್ಯಾಕ್‌ಗಳು ಮತ್ತು ರಿಚಾರ್ಜ್ ದರಗಳು ಶೇ. 20ರಿಂದ 25ರಷ್ಟು ಹೆಚ್ಚಾಗಿವೆ. ಹೀಗಿದ್ದರೂ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಖಂಡನೀಯವಾಗಿದೆ ಎಂದು ಎಐಡಿವೈಒ ಜಿಲ್ಲಾ ಅಧ್ಯಕ್ಷ ಜಗನ್ನಾಥ ಎಸ್. ಎಚ್ ಅಸಮಾಧಾನ ವ್ಯಕ್ತಪಡಿಸಿದರು.
ಎಐಡಿವೈಒ ಸ್ಥಳೀಯ ಅಧ್ಯಕ್ಷ ರಘು ಪವಾರ, ಎಐಡಿಎಸ್‌ಒ ಅಧ್ಯಕ್ಷ ಕಿರಣ ಮಾನೆ, ಎಐಡಿವೈಒ ಉಪಾಧ್ಯಕ್ಷ ತೇಜಸ್ ಆರ್. ಇಂಬ್ರಾಹಿಂಪುರ, ಶ್ರೀನಿವಾಸ ಡಿ., ಅಜಯ ಎಸ್.ಜಿ, ದೇವರಾಜ, ಸುರೇಶ, ಅಜಯ ಎ.ಜಿ, ತಿರುಪತಿ ಪವಾರ, ಸಿದ್ಧು ಕೆ. ಭಾಗವಹಿಸಿದ್ದರು