Advertisement

ನಗರಸಭೆ ನೂತನ ಕಟ್ಟಡ ಉದ್ಘಾಟನೆಗೆ ವಿರೋಧ

02:10 PM Jul 27, 2019 | Team Udayavani |

ಹಾವೇರಿ: ನೂತನವಾಗಿಐದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಹಾವೇರಿ ನಗರಸಭೆ ಕಟ್ಟಡವನ್ನು ನಗರಸಭೆ ಸದಸ್ಯರಿಗೆ ಗೊತ್ತಿಲ್ಲದಂತೆ ತರಾತುರಿಯಲ್ಲಿ ಉದ್ಘಾಟಿಸಿದ್ದರಿಂದ ಸದಸ್ಯರು ಕಪ್ಪು ಪಟ್ಟಿ ಧರಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಕಟ್ಟಡ ಉದ್ಘಾಟಿಸಿದ ಶಾಸಕ ನೆಹರು ಓಲೇಕಾರ ಹಾಗೂ ಅಧಿಕಾರಿಗಳ ಕ್ರಮ ಖಂಡಿಸಿದ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದರೂ ಸದಸ್ಯರ ಪದಗ್ರಹಣ ಇನ್ನೂ ಆಗಿಲ್ಲ, ಅಧಿಕಾರ ಸ್ವೀಕಾರ ಬಳಿಕ ನಗರಸಭೆ ಕಟ್ಟಡ ಉದ್ಘಾಟನೆ ಮಾಡುವಂತೆ ಸದಸ್ಯರು ಹಿಂದಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದು, ಶುಕ್ರವಾರ ಸದಸ್ಯರಿಗೆ ಮಾಹಿತಿ ನೀಡದೇ ಏಕಾಏಕಿ ಕಟ್ಟಡ ಉದ್ಘಾಟನೆ ಸಮಾರಂಭ ಆಯೋಜಿಸಲಾಗಿದೆ ಎಂದು ಸದಸ್ಯರು ಆರೋಪಿಸಿದರು.

ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ನಗರಸಭೆ ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇಲ್ಲದ ಸಮಯದಲ್ಲಿ ಕಟ್ಟಡ ಉದ್ಘಾಟಿಸಿರುವುದು ಬೇಸರದ ಸಂಗತಿ. ಅಲ್ಲದೇ ಕಟ್ಟಡ ಉದ್ಘಾಟನೆ ಕುರಿತು ಇಂದು ಮಧ್ಯಾಹ್ನ ಆಮಂತ್ರಣ ಪತ್ರಿಕೆ ತಲುಪಿಸಿ ಅಧಿಕಾರಿಗಳು ಸದಸ್ಯರಿಗೆ ಅಗೌರವ ತೋರಿದ್ದಾರೆ. ಐದು ಕೋಟಿ ರೂ. ವೆಚ್ಚದ ಕಟ್ಟಡವನ್ನು ಸಚಿವರನ್ನು ಕರೆಸಿ ಉದ್ಘಾಟಿಸಬೇಕಿತ್ತು. ಈ ಕಟ್ಟಡ ನಿರ್ಮಾಣಕ್ಕೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಸೇರಿದಂತೆ ಅನೇಕರು ಶ್ರಮಿಸಿದ್ದರು. ಅವರಿಗೆಲ್ಲ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯವಾಗಿತ್ತು ಎಂದರು.

ಪ್ರತಿಭಟನೆಯಲ್ಲಿ ಐ.ಯು. ಪಠಾಣ, ಗಣೇಶ ಬಿಷ್ಟಣ್ಣನವರ, ಮಲ್ಲಿಕಾರ್ಜುನ ಸಾತೇನಹಳ್ಳಿ, ರವಿ ದೊಡ್ಡಮನಿ, ವೆಂಕಟೇಶ ಬಿಜಾಪುರ, ದಾದಾಪೀರ ಚೂಡಿಗಾರ, ಉಮೇಶ ಕುರುಬರ ಸೇರಿದಂತೆ ನಗರಸಭೆ ಸದಸ್ಯರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next