ಬಳ್ಳಾರಿ: ಅಡುಗೆ ಅನಿಲ ಬೆಲೆಯನ್ನು ಪುನಃ 50 ರೂ. ಹೆಚ್ಚಿಸಿರುವ ಕೇಂದ್ರ ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿ ನಗರದ ಹಳೆ ಬಸ್ ನಿಲ್ದಾಣದ ಎದುರು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು ಸಿಲಿಂಡರ್‌ನ್ನು ಹೊತ್ತು ಶನಿವಾರ ಪ್ರತಿಭಟನೆ ನಡೆಸಿದರು.
ನಿಲ್ದಾಣದ ಎದುರು ಜಮಾಯಿಸಿದ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಕೇಂದ್ರ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿದರು. ಜನಗಳ ಜೇಬು ಲೂಟಿ ಮಾಡುವ ಮೋದಿ ಸರ್ಕಾರಕ್ಕೆ ಧಿಕ್ಕಾರ, ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿಗೆ ಧಿಕ್ಕಾರ, ಗಾಯದ ಮೇಲೆ ಬರೆ ಎಳೆಯುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ, ಅಂಬಾನಿ, ಅದಾನಿಗಳ ಏಜೆಂಟ್ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಮುಂತಾದ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದ ಮೋದಿ ಸರ್ಕಾರ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಮತ್ತೂಮ್ಮೆ 50 ರೂ. ಹೆಚ್ಚಳ ಮಾಡಿದೆ. ಇತ್ತೀಚೆಗಷ್ಟೆ ಮಾರ್ಚ್ ತಿಂಗಳಲ್ಲಿ ರೂ. 50 ಹೆಚ್ಚಳ ಮಾಡಿತ್ತು. ಒಟ್ಟಾರೆ ಈಗ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 1000 ರೂ. ದಾಟಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಸಹ ಕ್ರಮವಾಗಿ ರೂ 250, ರೂ. 102 ಇತ್ತೀಚೆಗಷ್ಟೆ ಹೆಚ್ಚಳ ಮಾಡಿತ್ತು. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಮೋದಿ ಸರ್ಕಾರ ಮೇಲಿಂದ ಮೇಲೆ ಬರೆ ಹಾಕುತ್ತಲೆ ಇದೆ. ಕೋವಿಡ್ ಮಹಾಮಾರಿಯಿಂದ ಬದುಕು ಕಳೆದುಕೊಂಡ ಸಾಮಾನ್ಯ ಜನರನ್ನು ಬೀದಿಗೆ ಬರುವಂತೆ ಮಾಡಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸುವುದಾಗಿ ಚುನಾವಣೆ ವೇಳೆ ಉದ್ದುದ್ದ ಭಾಷಣ ಮಾಡಿದ್ದ ಮೋದಿಯವರು ಈಗೇನು ಮಾಡುತ್ತಿದ್ದಾರೆ? ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ಕಳೆದ 7 ವರ್ಷಗಳಲ್ಲಿ ಕಾರ್ಪೊರೇಟ್ ಮಾಲೀಕರ ರೂ. 10.7 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಶೇ.33ರಷ್ಟಿದ್ದ ಕಾರ್ಪೋರೇಟ್ ತೆರಿಗೆಯನ್ನು ಶೇ.22ಕ್ಕೆ ಇಳಿಸಿದೆ. ಅಂಬಾನಿ, ಅದಾನಿ ಏಷಿಯಾದಲ್ಲೇ ಅತಿ ಶ್ರೀಮಂತರ ಪಟ್ಟಿಯಲ್ಲಿ ಮೊದಲೆರೆಡು ಸ್ಥಾನದಲ್ಲಿ ಮಿಂಚುತ್ತಿದ್ದಾರೆ. ಕೋವಿಡ್ ವೇಳೆಯಲ್ಲಿ ಜನ ತತ್ತರಿಸುತ್ತಿರುವಾಗ ಅಂಬಾನಿ ಆಸ್ತಿ 3-4 ಪಟ್ಟು ಹೆಚ್ಚಾಗಿದೆ. ಮೋದಿ ಸರ್ಕಾರ ಸಂಪೂರ್ಣವಾಗಿ ಜನ ವಿರೋಧಿ ಹಾಗೂ ಕಾರ್ಪೋರೇಟ್ ಮಾಲೀಕರ ಪರವಾಗಿದೆ ಎಂದು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಎಸ್‌ಯುಸಿಐ(ಸಿ) ಜಿಲ್ಲಾ ಸಮಿತಿ ಸದಸ್ಯರಾದ ಸೋಮಶೇಖರ್‌ಗೌಡ, ಎ.ದೇವದಾಸ್, ಗೋವಿಂದ, ಶಾಂತಾ, ಜಗದೀಶ್, ಈಶ್ವರಿ, ವಿಜಯಲಕ್ಷ್ಮೀ, ರಾಜಾ, ರವಿಕಿರಣ್, ಕಾರ್ಯಕರ್ತರು, ನಾಗರಿಕರು ಇದ್ದರು.