ರೋಣ: ಪಟ್ಟಣದ ಬಸನಗೌಡ ಗಿರಡ್ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣಕ್ಕೆ ಸ್ಥಳಾಂತರಗೊಂಡಿದ್ದನ್ನು ವಿರೋಧಿಸಿ ಪಟ್ಟಣದ ಮಿನಿ ವಿಧಾನಸೌಧ ಎದುರು ಹಳೆ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು ಹಾಗೂ ರೋಣ ಪಟ್ಟಣದ ಸುತ್ತಮುತ್ತಲಿನ ಜನರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಹಳೆ ವಿದ್ಯಾರ್ಥಿ ಅನಿಲ ನವಲಗುಂದ ಮಾತನಾಡಿ, ಗ್ರಾಮೀಣ ಪ್ರದೇಶ ಬಡ ಮಕ್ಕಳ ಪದವಿ ಶಿಕ್ಷಣಕ್ಕೆ ಅನುಕೂಲವಾಗಲೆಂದು ಸ್ಥಾಪಿಸಲಾದ ಪದವಿ ಕಾಲೇಜನ್ನು ಏಕಾಏಕಿ ಬೇರೆಡೆ ಸ್ಥಳಾಂತರ ಮಾಡಿದ್ದು ತೀವ್ರ ಬೇಸರ ತಂದಿದೆ. ಕಾಲೇಜು ಸ್ಥಳಾಂತರವಾಗಿರುವುದನ್ನು ವಿರೋಧಿಸುವುದರೊಂದಿಗೆ ಮರಳಿ ಮರು ಮಂಜೂರಾತಿಗಾಗಿ ಈಗಾಗಲೇ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ. ಆದರೂ ಯಾವುದೆ ಕ್ರಮ ಕೈಗೊಂಡಿಲ್ಲ. ಈಗಾಗಲೇ ಪ್ರವೇಶ ಅವಧಿ ಆರಂಭಗೊಂಡಿದ್ದು, ರೋಣಕ್ಕೆ ಮರಳಿ ಕಾಲೇಜು ಬಂದೇ ಬರುತ್ತದೆ ಎಂದು ಅನೇಕ ಬಡ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಕಾಯ್ದು ಕುಳಿತಿದ್ದಾರೆ. ಕೂಡಲೇ ಸ್ಥಳಾಂತರಗೊಂಡ ಕಾಲೇಜು ಮರು ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಗಳ ಸಾಥ್: ಧರಣಿಗೆ ಕರವೇ ಸಂಘಟನೆ, ರೈತ ಮಹಿಳಾ ಸಂಘ, ದಲಿತ ಸಂಘರ್ಷ ಸಮಿತಿ, ಮಾದಿಗ ದಂಡೋರ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಪಾಲ್ಗೊಂಡಿದ್ದವು.
ಧರಣಿ ಸ್ಥಳಕ್ಕೆ ತಹಶೀಲ್ದಾರ್ ಶರಣಮ್ಮ ಕಾರಿ ತೆರಳಿ, ಕಾಲೇಜು ಸ್ಥಳಾಂತರ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಈ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಸೋಮವಾರದೊಳಗಾಗಿ ಸಕಾರಾತ್ಮಕ ಸೂಚನೆ ಬರುವ ನಿರೀಕ್ಷೆಯಿದೆ. ಆದ್ದರಿಂದ ದಯವಿಟ್ಟು ಧರಣಿಯಿಂದ ಹಿಂದೆ ಸರಿಯುವಂತೆ ವಿನಂತಿಸಿದರು.
ಕರವೇ ಜಿಲ್ಲಾಧ್ಯಕ್ಷ ಹನಮಂತ ಅಬ್ಬಿಗೇರಿ, ಮಲ್ಲಯ್ಯ ಮಹಾಪುರುಷಮಠ, ಬಾವಸಾಬ ಬೆಟಗೇರಿ, ನಿಂಗಪ್ಪ ಹೊನ್ನಾಪುರ, ಎಸ್.ಆರ್. ಬ್ಯಾಳಿ ಸೇರಿದಂತೆ ಇದ್ದರು.