ದೊಡ್ಡಬಳ್ಳಾಪುರ: ವಿಶ್ವ ವ್ಯಾಪಾರ ಒಪ್ಪಂದದ ದುಷ್ಪರಿಣಾಮದಿಂದ ಇನ್ನೂ ಹೊರಬರದ ರೈತರಿಗೆ ಆರ್‌ಸಿಇಪಿ ಮುಕ್ತ ವ್ಯಾಪಾರ ಒಪ್ಪಂದ ಗಾಯದ ಮೇಲೆ ಬರೆ ಹಾಕಿದಂತಾಗಿದ್ದು, ರೈತರ ಹಿತಾಸಕ್ತಿಗೆ ಮಾರಕವಾಗಲಿದೆ. ಈ ನಿಟ್ಟಿನಲ್ಲಿ ಆರ್‌ಸಿಇಪಿ ಒಪ್ಪಂದವನ್ನು ವಿರೋಧಿಸಿ ಅ.31 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷೆ ಕೆ.ಸುಲೋಚನಮ್ಮ ವೆಂಕಟರೆಡ್ಡಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ ಮಾಡಿದರೆ ರೈತರು ಬದುಕು ಮತ್ತಷ್ಟು ದುಸ್ತರವಾಗಲಿದೆ.ಎಂದು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಎಚ್ಚರಿಸಿದ್ದರು. ಆದರೆ ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಿ.ವಿ.ನರಸಿಂಹರಾವ್ ಅವರು ಗ್ಯಾಟ್ ಒಪ್ಪಂದಕ್ಕೆ ಸಹಿ ಮಾಡಿದ್ದರ ಪರಿಣಾಮವೇ ದೇಶದಲ್ಲಿ ರೈತರ ಆತ್ಯಹತ್ಯೆಗಳು ಹೆಚ್ಚಾಗಲು ಕಾರಣ.
ಈಗ ಇದೇ ತಪ್ಪನ್ನು ಮತ್ತೂಮ್ಮೆ ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಮಾಡಲು ಹೊರಟಿದೆ. ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಸ್ವಾಮಿನಾಥನ್ ವರದಿಯನ್ನು ಅನುಷ್ಠಾನಕ್ಕೆ ತರುವ ಭರವಸೆ ನೀಡಿದ್ದರು. ಆದರೆ ಈಗ ಸ್ವಾಮಿನಾಥನ್ ಅವರ ವರದಿ ಬಗ್ಗೆ ಮಾತನಾಡುವುದನ್ನೇ ಮರೆತಿದ್ದಾರೆ ಎಂದು ದೂರಿದರು.
ಆರ್‌ಸಿಇ ಪಿಒಪ್ಪಂದದಲ್ಲಿ ಕೃಷಿ, ಹೈನುಗಾರಿಕೆ,ಜವಳಿ ಕ್ಷೇತ್ರವನ್ನು ಹೊರಗಿಡಬೇಕು. ಇಡೀ ದೇಶ ಇಂದು ಮುಕ್ತ ಮಾರುಕಟ್ಟೆ ನೀತಿಯಿಂದಾಗಿ ನಲುಗಿ ಹೋಗಿದೆ. ಹಾಂಕಾಂಗ್‌ನಲ್ಲಿ ನಡೆಯುವ ಆರ್‌ಸಿಇಪಿ ಸಭೆಯಲ್ಲಿ ವಾಣಿಜ್ಯ ಸಚಿವರು ಒಪ್ಪಂದವನ್ನು ಧಿಕ್ಕರಿಸಬೇಕು. ಇಡೀ ದೇಶದಲ್ಲಿ ಒಪ್ಪಂದವನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಕೇಂದ್ರದ ವಾಣಿಜ್ಯ ಸಚಿವರು, ಜನರ ಪ್ರತಿಭಟನೆಗೆ ಗೌರವ ನೀಡಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯ ರೈತ ಸಂಘದ ಮುಖಂಡ ಸಿದ್ದಾರ್ಥ ಮಾತನಾಡಿ,ಲೋಕಸಭೆಯಲ್ಲಿ ಚರ್ಚಿಸದೇ ದೇಶಕ್ಕೆ ಮಾರಕವಾಗಿರುವ ಒಪ್ಪಂದಕ್ಕೆ ಸಹಿ ಹಾಕುವುದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ ಎಂದರು. ರೈತ ಸಂಘದ ಮಹಿಳಾ ಮುಖಂಡರಾದ ಉಮಾದೇವಿ ಮಾತನಾಡಿ, ಆರ್ಸಿಇಪಿ ಒಪ್ಪಂದಕ್ಕೆ ಸಹಿ ಹಾಕಿದರೆ ಹೈನಾಗಾರಿಕೆ ಸಂಪೂರ್ಣವಾಗಿ ನಾಶವಾಗುವುದಲ್ಲದೆ. ದೇಶದ ಬಹುತೇಕ ಮಹಿಳೆಯರು ನಂಬಿರುವುದೇ ಮಹಿಳೆಯರು. ಹೈನುಗಾರಿಕೆ ಉದ್ಯಮ ನಾಶವಾದರೆ ರೈತ ಮಹಿಳೆಯರ ಆತ್ಮಹತ್ಯೆಗಳು ಆರಂಭವಾಗಲಿವೆ ಎಂದರು.
ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎನ್.ಆರ್.ಪ್ರಸನ್ನ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮೇಗೌಡ, ಕಾರ್ಯದರ್ಶಿ ಶಿವರಾಜ್,ದೇವನಹಳ್ಳಿ ತಾಲೂಕು ಕಾರ್ಯದರ್ಶಿ ರಮೇಶ್, ಮುಖಂಡರಾದ ನಾರಾಯಣಸ್ವಾಮಿ, ಶಿರವಾರ ರವಿ, ಮುನಿನಾರಾಯಣಪ್ಪ, ಜಿಂಕೆಬಚ್ಚೆಹಳ್ಳಿ ಸತೀಶ್, ಮಹಾದೇವ್, ನಾರಾಯಣಸ್ವಾಮಿ, ಹರೀಶ್, ಸತೀಶ್, ಯಲ್ಲಪ್ಪ,ರಾಮ್ ಕುಮಾರ್, ಮುರುಳಿ ಇದ್ದರು.