ಚಾಮರಾಜನಗರ: ರೈತ ದಸರಾವನ್ನು ಅದ್ದೂರಿಯಾಗಿ ಮಾಡುವ ಬದಲು ರೈತರ ಸಮಸ್ಯೆಯನ್ನು ಬಗೆಹರಿಸಿ ಇಲ್ಲವೇ ದಸರಾಗೆ ನಮ್ಮ ವಿರೋಧವಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರುಪ್ರಕಾಶ್ ದಸರಾ ಸಮಿತಿಯನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ನಡೆದ ರೈತ ಸಂಘದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ರೈತರಿಗೆ ಸಮಸ್ಯೆಗಳ ಸರಮಾಲೆಯಿದೆ. ಸಾಲಬಾಧೆಯಿಂದ ಅನೇಕ ರೈತರು ರಾಜ್ಯಾದ್ಯಂತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಜಿಲ್ಲೆಯಲ್ಲಿ ಅದ್ದೂರಿಯಾಗಿ ರೈತ ದಸರಾ ಮಾಡುವ ಅವಶ್ಯಕತೆಯಿಲ್ಲ. ಅದೇ ಹಣವನ್ನು ಸದುಪಯೋಗ ಮಾಡಬಹುದು ಇಲ್ಲ ಮಾಡಲೇ ಬೇಕೆಂದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ರೈತರ ಸಮಸ್ಯೆಯನ್ನು ಇತ್ಯರ್ಥಪಡಿಸಿ ನಂತರ ರೈತ ದಸರಾ ಮಾಡುವಂತೆ ಒತ್ತಾಯಿಸಿದರು.
ಶುಲ್ಕ ವಸೂಲಿಗೆ ತಡೆ ನೀಡಬೇಕು: ಸುಳ್ವಾಡಿ ವಿಷಪ್ರಸಾದ ದುರಂತದಲ್ಲಿ ನೊಂದವರ ಕುಟುಂಬಕ್ಕೆ ಯಾವುದೇ ಪರಿಹಾರ ನೀಡದಿರುವುದು. ಹನೂರು ತಾಲೂಕಿನ ಗುಂಡಾಲ್ ರಾಮಗುಡ್ಡ ಹಾಗೂ ಹುಬ್ಬೆಹುಣಸೆ ಜಲಾಶಯದ 124 ಕೋಟಿಯ ಏತ ನೀರಾವರಿ ಯೋಜನೆಗೆ ಅನುಮೋದನೆ ಸಿಕ್ಕಿದ್ದು ಕಾಮಗಾರಿ ಆರಂಭ ವಿಳಂಬವಾಗಿದೆ, ರೈತರಿಗೆ ಇದುವರೆಗೆ ಬೆಳೆವಿಮೆ ಬಂದಿರುವುದಿಲ್ಲ ಇದರ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ, ಗ್ರಾಮೀಣ ಭಾಗವಾದ ಚಾಮರಾಜನಗರ ಜಿಲ್ಲೆಯಲ್ಲಿ ಅತ್ಯಧಿಕ ಸಂಚಾರಿ ನಿಯಮ ಉಲ್ಲಂಘನೆ ಶುಲ್ಕ ವಸೂಲಿಗೆ ತಡೆನೀಡಬೇಕು ಎಂದು ಆಗ್ರಹಿಸಿದರು.
ಎಡಿಸಿ ಮೇಲೆ ಕ್ರಮಕ್ಕೆ ಆಗ್ರಹ: ರೈತ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಗುರುಪ್ರಸಾದ್ ಮಾತನಾಡಿ, ರೈತರನ್ನು ಗೂಂಡಾಗಳು ಎಂದಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್ ಅವರ ಮೇಲೆ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಸರ್ಕಾರಿ ವಾಹನವನ್ನು ಎಲ್ಲಾ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳು ಸ್ವಂತಕ್ಕೆ ಬಳಸಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಂತಹವರ ವಿರುದ್ದ ಕ್ರಮಕೈಗೊಳ್ಳಬೇಕು. ರೈತರ ಮೇಲಿನ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿ ಸರ್ಕಾರ ಘೋಷಿಸಿದರು ಸೂಕ್ತ ಕ್ರಮ ವಹಿಸದೆ ರೈತರು ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಹೊಸಕೆರೆಗಳನ್ನು ನಿರ್ಮಾಣ ಮಾಡಲು ಅದಷ್ಟು ಬೇಗ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಅದ್ದೂರಿ ದಸರಾ ಆಚರಣೆ ಬೇಡ: ಕೃಷಿ ಇಲಾಖೆಯಲ್ಲಿ ರಿಯಾಯತಿ ದರದಲ್ಲಿ ನೀಡುತ್ತಿರುವ ಉಪಕರಣಗಳು, ಔಷಧಿಗಳ ಗುಣಮಟ್ಟ ಸರಿಪಡಿಸಬೇಕು, ನೆರೆ ಪರಿಹಾರ ನೀಡದೆ ಸರ್ಕಾರಕ್ಕೆ ಅದ್ದೂರಿ ದಸರಾ ಮಾಡುವ ನೈತಿಕತೆಯಿಲ್ಲ. ಅಂಗನವಾಡಿ ಹಾಗೂ ಶಾಲಾ ಬಿಸಿಯೂಟಕ್ಕೆ ಸರಬರಾಜಾಗುವ ಆಹಾರದ ಗುಣಮಟ್ಟ ಸರಿಪಡಿಸಬೇಕು. ಈ ಬೇಡಿಕೆಗಳನ್ನು ಈಡೇರಿಸುವುದಾಗಿ ಜಿಲ್ಲಾಧಿಕಾರಿಗಳು ಹಿಂದಿನ ಸಭೆಯಲ್ಲಿ ತಿಳಿಸಿದರು ಕೂಡ ಯಾವುದೇ ಕ್ರಮಕೈಗೊಂಡಿಲ್ಲ. ಆದರಿಂದ ನಮ್ಮ ಸಂಘ ರೈತ ದಸರಾಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ಸೂಕ್ತ ಪರಿಹಾರ ನೀಡದೆ ಜಿಲ್ಲಾಡಳಿತ ಮುಂದುವರೆದರೆ ತೀವ್ರತರವಾದ ಪ್ರತಿಭಟನೆ ನಡೆಸುವುದಾಗಿ ರೈತ ಸಂಘ ನಿರ್ಧರಿಸಿದೆ ಎಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವರಿ ಸಚಿವರಿಗೆ ಎಚ್ಚರಿಕೆ ಈ ಸಭೆ ಮೂಲಕ ನೀಡಲಾಗಿದೆ ಎಂದರು.
ದುಂಡುಮಾದಶೆಟ್ಟಿ, ಪೃಥ್ವಿ, ಕಿರಣಕಾಗಲವಾಡಿ, ಮಹೇಶ್, ನವೀನ್‌ಕಾಡಹಳ್ಳಿ, ಮಾಡ್ರಳ್ಳಿ ಮಹಾ ದೇವಪ್ಪ, ಅಂಬಳೆಶಿವಕುಮಾರ್ ಇದ್ದರು.