Advertisement

ಪ್ರವೇಶ ಶುಲ್ಕ ಹೆಚ್ಚಳಕ್ಕೆ ವಿರೋಧ

12:47 PM Aug 23, 2017 | Team Udayavani |

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಪ್ರವೇಶ ಶುಲ್ಕ ಹೆಚ್ಚಳಕ್ಕೆ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಕವಿವಿ ಕುಲಪತಿಗಳ ನೇತೃತ್ವದಲ್ಲಿ ಉಪ ಸಮಿತಿ ರಚಿಸಲಾಗಿದೆ. 

Advertisement

ಮಂಗಳವಾರ ಈ ಸಂಬಂಧ ಕುಲಪತಿ ಪ್ರೊ| ಪಿ.ಬಿ.ಗಾಯಿ ಅವರು ತುರ್ತು ಸಿಂಡಿಕೇಟ್‌ ಸಭೆ ಕರೆದು ಸುದೀರ್ಘ‌ ಚರ್ಚೆ ನಡೆಸಿದರು. ಸಭೆಯಲ್ಲಿ ರಾಜ್ಯದ ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳಿಗೆ ವಿಧಿಸಿದ ಶುಲ್ಕ ಕುರಿತು ಪರಿಶೀಲನೆ ಮಾಡಲಾಯಿತು.

ಸಭೆಯಲ್ಲಿ ಪಾಲ್ಗೊಂಡ ಎಲ್ಲ ಸಿಂಡಿಕೇಟ್‌ ಸದಸ್ಯರು, ವಿದ್ಯಾರ್ಥಿಗಳು ಶುಲ್ಕ ಹೆಚ್ಚಳ ಕುರಿತು ಗಮನ ಸೆಳೆದಿದ್ದಾರೆ. ಹೀಗಾಗಿ ಈ ಕುರಿತು ಶೀಘ್ರ ಕ್ರಮದ ಅಗತ್ಯವಿದೆ. ಕೂಡಲೇ ಉಪ ಸಮಿತಿಯೊಂದನ್ನು ರಚಿಸುವಂತೆ ಸಲಹೆ ನೀಡಿದರು. 

ಈ ಸಲಹೆ ಅನ್ವಯ ಕುಲಪತಿಗಳು 4 ಜನ ಸಿಂಡಿಕೇಟ್‌ ಸದಸ್ಯರು, ವಿದ್ಯಾರ್ಥಿ ಮುಖಂಡರು, ಪ್ರಾಧ್ಯಾಪಕರನ್ನು ಒಳಗೊಂಡ ಉಪ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿ ನೀಡುವ ವರದಿಯನ್ನು ಆಧರಿಸಿ ಶುಲ್ಕ ಹೆಚ್ಚಳ ಹಿಂಪಡೆಯುವ ಅಥವಾ ಈಗಿರುವ ಶುಲ್ಕದ ವಿಧಾನವನ್ನೇ ಮುಂದುವರಿಸುವ ಕುರಿತು ಕವಿವಿ ನಿರ್ಧಾರ ಕೈಗೊಳ್ಳಲಿದೆ. 

ಸ್ಟಡಿ ಸೆಂಟರ್‌ನಿಂದಅಂಕಪಟ್ಟಿ ಖರೀದಿಸಬೇಡಿ
ಧಾರವಾಡ:
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಅನಧಿಕೃತ ಸ್ಟಡಿ ಸೆಂಟರ್‌ಗಳಿಂದ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರ ಪಡೆದಲ್ಲಿ ಅದಕ್ಕೆ ಅವರೇ ಹೊಣೆಗಾರರು ಎಂದು ಕವಿವಿ ಎಚ್ಚರಿಕೆ ನೀಡಿದೆ. 

Advertisement

ಈ ಕುರಿತು ಕವಿವಿ ಮೌಲ್ಯಮಾಪನ ಕುಲಸಚಿವರು ಪ್ರಕಟಣೆ ನೀಡಿದ್ದು, ಕೆಲ ಸಂಘ-ಸಂಸ್ಥೆಗಳು ಕವಿವಿ ಹೆಸರಿನಲ್ಲಿ ಖೊಟ್ಟಿ ಅಂಕಪಟ್ಟಿ/ಪದವಿ ಪ್ರಮಾಣ ಪತ್ರಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದು ಕವಿವಿ ಗಮನಕ್ಕೆ ಬಂದಿದೆ. ಈ ಕೃತ್ಯ ಮಾಡುತ್ತಿರುವ ಸಂಸ್ಥೆ ಅಥವಾ ವ್ಯಕ್ತಿಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಕವಿವಿ ಮುಂದಾಗಿದೆ.

ಈ ಪ್ರಮಾಣ ಪತ್ರಗಳ ಆಧಾರದ ಮೇಲೆ ಯಾವುದೇ ರೀತಿಯ ಹುದ್ದೆ-ಅವಕಾಶ ಪಡೆದಿರುವುದು ಶಿಕ್ಷಾರ್ಹ ಅಪರಾಧವೂ ಆಗಿದೆ. ಹೀಗಾಗಿ ಖೊಟ್ಟಿ ಅಂಕಪಟ್ಟಿ/ಪದವಿ ಪ್ರಮಾಣ ಪತ್ರ ಒದಗಿಸುತ್ತಿರುವವರ ವಿರುದ್ಧ ಹಾಗೂ ಪಡೆದವರ ವಿರುದ್ಧವೂ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಂದು ಕವಿವಿ ಮೌಲ್ಯಮಾಪನ ಕುಲಸಚಿವರ ಪ್ರಕಟಣೆ ಸ್ಪಷ್ಟಪಡಿಸಿದೆ.  

Advertisement

Udayavani is now on Telegram. Click here to join our channel and stay updated with the latest news.

Next