ಯಲ್ಲಾಪುರ: ಪಟ್ಟಣದ ಎಪಿಎಂಸಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದ ಇ-ಅಡ್ವಾನ್ಸ್ ಟೆಂಡರ್ ಪದ್ಧತಿ ಕೈಬಿಟ್ಟು, ಹಿಂದಿನ ಪದ್ಧತಿಯನ್ನೇ ಮುಂದುವರಿಸಲು ಟಿಎಂಎಸ್ ಕಾರ್ಯಾಲಯದಲ್ಲಿ ನಡೆದ ವ್ಯಾಪಾರಸ್ಥರು ಹಾಗೂ ರೈತ ಮುಖಂಡರ ಸಭೆಯಲ್ಲಿ ಒಕ್ಕೊರಲ ತೀರ್ಮಾನ ಕೈಗೊಳ್ಳಲಾಯಿತು.
ಅಧ್ಯಕ್ಷತೆ ವಹಿಸಿದ್ದ ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ರಾಜ್ಯದಲ್ಲಿ ಎಲ್ಲೂ ಅನುಷ್ಠಾನಕ್ಕೆ ಬಾರದ ಕಾಯ್ದೆಯನ್ನು ಯಲ್ಲಾಪುರದಲ್ಲಿ ಪ್ರಾಯೋಗಿಕ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ರೈತರು ಕಷ್ಟದಲ್ಲಿರುವಾಗ ಇಂತಹ ಅಡ್ವಾನ್ಸ್ ಇ ಟೆಂಡರ್ ಬೇಕಿತ್ತೇ ಎಂದು ಪ್ರಶ್ನಿಸಿದರು. ರಾಜ್ಯದ ಬೇರೆ ಮಾರುಕಟ್ಟೆಗಳಲ್ಲಿ ಅನುಷ್ಠಾನ ಆದ ನಂತರ ಇಲ್ಲಿ ಅನುಷ್ಠಾನ ಆಗಲಿ. ಆದರೆ ಯಲ್ಲಾಪುರದಲ್ಲಿ ಮಾತ್ರ ಅನುಷ್ಠಾನ ಬೇಡ. ಹಾಗೆ ಮುಂದುವರಿಸಿದಲ್ಲಿ ತಾಲೂಕಿನ ಎಲ್ಲ ರೈತರು ಸೇರಿ ಎಪಿಎಂಸಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದರು.
ರೈತ ಮುಖಂಡ ಪಿ.ಜಿ. ಭಟ್ಟ ಬರಗದ್ದೆ ಮಾತನಾಡಿ, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ಬೇಸಿಗೆಯಲ್ಲಿ ಮಳೆ ಕೊರತೆಯಿಂದ ಅಡಕೆ ಸಿಂಗಾರ ಒಣಗಿ ಹಾನಿಯಾಗಿದೆ. ಈಗ ಅತಿವೃಷ್ಠಿಯಿಂದ ಅಡಕೆ ಬೆಳೆಗೆ ಕೊಳೆರೋಗ ಅಂಟಿಕೊಂಡು ಇನ್ನಷ್ಟು ಹಾನಿಯಾಗುವ ಮುನ್ಸೂಚನೆ ನೀಡಿದೆ. ಹೀಗಿರುವಾಗ ಇ-ಅಡ್ವಾನ್ಸ್ ಟೆಂಡರ್ ನೆಪದಲ್ಲಿ ವ್ಯಾಪಾರ ಬಂದ್ ಮಾಡುವುದು ಸರಿಯಲ್ಲ. ಮೊದಲಿಂತೆ ವ್ಯಾಪಾರ ವಹಿವಾಟು ನಡೆಯಲಿ ಎಂದರು.
ಅಡಕೆ ವರ್ತಕರ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಮಾತನಾಡಿ, ರಾಜ್ಯದ ಯಾವ ಮಾರುಕಟ್ಟೆಯಲ್ಲೂ ಆರಂಭವಾಗದ ಕಾಯ್ದೆಯನ್ನು ಯಲ್ಲಾಪುರದಲ್ಲಿ ಅನುಷ್ಠಾನಕ್ಕೆ ಮುಂದಾಗಿರುವುದರಿಂದ ವ್ಯಾಪಾರಸ್ಥರು, ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಎಲ್.ಪಿ. ಭಟ್ಟ ಗುಂಡ್ಕಲ್, ಟಿಎಂಎಸ್ ಮುಖ್ಯ ಕಾರ್ಯನಿರ್ವಾಹಕ ಸಿ.ಎಸ್. ಹೆಗಡೆ, ಟಿಎಸ್‌ಎಸ್ ನಿರ್ದೇಶಕ ನರಸಿಂಹ ಭಟ್ಟ ಗುಂಡ್ಕಲ್, ವರ್ತಕರಾದ ಉಮೇಶ ಭಟ್ಟ, ಶ್ರೀಪಾದ ಭಟ್ಟ ಮಣ್ಮನೆ, ಟಿ.ಆರ್. ಹೆಗಡೆ, ಮುಂತಾದವರಿದ್ದರು.