Advertisement

ಸೇನಾಪುರದಲ್ಲಿ “ಡಂಪಿಂಗ್‌ ಯಾರ್ಡ್‌’ಗೆ ವಿರೋಧ

08:27 PM Oct 01, 2020 | mahesh |

ಕುಂದಾಪುರ: ಸೇನಾಪುರ ಗ್ರಾಮದ ದಲಿತ ಕುಟುಂಬಗಳೇ ಹೆಚ್ಚಾಗಿ ರುವ ಅಂಬೇಡ್ಕರ್‌ ನಗರದ ಒಂದು ಎಕರೆ ಪ್ರದೇಶವಿರುವ ಸರಕಾರಿ ಜಾಗದಲ್ಲಿ ಡಂಪಿಂಗ್‌ ಯಾರ್ಡ್‌ ತೆರೆಯಲು ತೆರಮರೆಯ ಸಿದ್ಧತೆಗಳು ನಡೆಯುತ್ತಿದೆ. ಆದರೆ ಇದಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಯಾವುದೇ ಕಾರಣಕ್ಕೂ ಬೇರೆ ಗ್ರಾಮಗಳ ಕಸ ವಿಲೇವಾರಿ ಮಾಡಲು ಇಲ್ಲಿ ಡಂಪಿಂಗ್‌ ಯಾರ್ಡ್‌ ಮಾಡುವುದು ಬೇಡ ಎನ್ನುವ ಕೂಗು ಇಲ್ಲಿನ ಜನರದ್ದಾಗಿದೆ.

Advertisement

ನಾಡ ಗ್ರಾ.ಪಂ.ನಿಂದ ಇತ್ತೀಚೆಗಷ್ಟೇ ಬೇರ್ಪಟ್ಟು ಈಗ ಹೊಸಾಡು ಪಂಚಾಯತ್‌ಗೆ ಸೇರ್ಪಡೆಗೊಂಡ ಸೇನಾಪುರ ಗ್ರಾಮದ ರೈಲು ನಿಲ್ದಾಣ ಸಮೀಪದ ಅಂಬೇಡ್ಕರ್‌ ನಗರದಲ್ಲಿ 3 ಗ್ರಾ.ಪಂ. ವ್ಯಾಪ್ತಿಯ ಸೇನಾಪುರ ಮಾತ್ರವಲ್ಲದೆ ನಾಡ, ಬಡಾಕೆರೆ, ಹಡವು, ಆಲೂರು, ಹಕ್ಲಾಡಿ ಗ್ರಾಮಗಳ ಕಸ ವಿಲೇವಾರಿ ಮಾಡಲು “ಡಂಪಿಂಗ್‌ ಯಾರ್ಡ್‌’ ತೆರೆಯಲು ಸಿದ್ಧತೆಗಳು ನಡೆಯುತ್ತಿದೆ. ಈಗಾಗಲೇ ಸರ್ವೇ ನಂಬರ್‌ 156 ರಲ್ಲಿ ಜಾಗ ಗುರುತಿಸಿ, ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎನ್ನುವ ಮಾಹಿತಿಯಿದೆ.

ಯಾರು ಹೊಣೆ?
ಸೇನಾಪುರ ಗ್ರಾಮದಲ್ಲಿ ಉತ್ಪತ್ತಿಯಾಗುವ ಕಸ ವಿಲೇವಾರಿ ಮಾಡುವ ಸಲುವಾಗಿ ಇಲ್ಲಿನ ಅಂಬೇಡ್ಕರ್‌ ನಗರದಲ್ಲಿ ಡಂಪಿಂಗ್‌ ಯಾರ್ಡ್‌ ತೆರೆದರೆ ನಮ್ಮ ತಕರಾರಿಲ್ಲ. ಆದರೆ ನಮ್ಮ ಗ್ರಾಮ ಹೊರತುಪಡಿಸಿ ಇತರೆ ಗ್ರಾಮಗಳ ಕಸವನ್ನು ಇಲ್ಲಿ ವಿಲೇವಾರಿ ಮಾಡುವುದು ಎಷ್ಟು ಸರಿ. ಕಸ ಸಮರ್ಪಕ ವಿಲೇವಾರಿಯಾಗದೆ ಗಬ್ಬು ವಾಸನೆ ಬಂದರೆ ಇಡೀ ಊರಿಗೆ ಕೆಟ್ಟ ಹೆಸರು ಬರಬಹುದು. ಪರಿಸರಕ್ಕೂ ಸಾಕಷ್ಟು ಹಾನಿಯಾಗಬಹುದು. ಇಲ್ಲಿನ ಕುಡಿಯುವ ನೀರಿನ ವ್ಯವಸ್ಥೆಗೂ ಸಮಸ್ಯೆಯಾಗಬಹುದು. ಕಸದಿಂದ ಏನಾದರೂ ಸಾಂಕ್ರಾಮಿಕ ರೋಗಗಳು ಹರಡಿದರೆ ಅದಕ್ಕೆ ಯಾರೂ ಹೊಣೆ ಎನ್ನುವುದು ಇಲ್ಲಿನ ಗ್ರಾಮಸ್ಥರ ಪ್ರಶ್ನೆಯಾಗಿದೆ.

ಎಷ್ಟು ಮನೆಗಳಿವೆ?
ಸೇನಾಪುರ ರೈಲು ನಿಲ್ದಾಣ ಪಕ್ಕದಲ್ಲೇ ಇರುವ ಅಂಬೇಡ್ಕರ್‌ ನಗರದಲ್ಲಿ ಈ ಕಸ ವಿಲೇವಾರಿ ಘಟಕ (ಡಂಪಿಂಗ್‌ ಯಾರ್ಡ್‌) ತೆರೆಯಲು ಜಾಗ ಗುರುತಿಸಲಾಗಿದೆ. ಈ ಜಾಗದ ಆಸುಪಾಸಿನಲ್ಲಿ ದಲಿತ ಕುಟುಂಬಗಳೇ ಹೆಚ್ಚಾಗಿದ್ದು, ಸುಮಾರು 50-60 ಮನೆಗಳಿವೆ. ಇನ್ನು ಈ ಜಾಗದ ಸಮೀಪವೇ ಹಕೂರಿಗೂ ತೆರಳುವ ಮಾರ್ಗವಿದೆ. ಅದು ಈ ಜಾಗ ಗೋಮಾಳ ವ್ಯಾಪ್ತಿಯಲ್ಲಿ ಬರುವುದರಿಂದ ಡಂಪಿಂಗ್‌
ಯಾರ್ಡ್‌ಗೆ ಹೇಗೆ ಕೊಡಲಾಗಿದೆ ಎನ್ನುವುದಾಗಿ ಅಂಬೇಡ್ಕರ್‌ ನಗರದ ನಿವಾಸಿ ಶಂಭು ಪ್ರಶ್ನಿಸುತ್ತಾರೆ.

ಹೋರಾಟ ಮಾಡುತ್ತೇವೆ
ಸೇನಾಪುರ ಗ್ರಾಮ ಮಾತ್ರವಲ್ಲದೆ ಇತರೆ ಗ್ರಾಮಗಳ ಕಸ ವಿಲೇವಾರಿ ಮಾಡಲು ಡಂಪಿಂಗ್‌ ಯಾರ್ಡ್‌ ಮಾಡುವುದು ಎಷ್ಟು ಸರಿ. ಅವರವರ ಪಂಚಾಯತ್‌ ವ್ಯಾಪ್ತಿಯಲ್ಲಿ ಬೇಕಾದರೆ ಮಾಡಲಿ. ಗ್ರಾಮದ ನಿವೇಶನ ರಹಿತರಿಗೆ ಭೂಮಿ ಕೊಡಲು ಜಾಗ ಇಲ್ಲಂತ ಹೇಳುತ್ತಾರೆ. ಆದರೆ ಬೇರೆ ಬೇರೆ ಗ್ರಾಮಗಳ ಕಸ ವಿಲೇವಾರಿಗೆ ಡಂಪಿಂಗ್‌ ಯಾರ್ಡ್‌ ತೆರೆಯಲು ಮಾತ್ರ ನಮ್ಮ ಗ್ರಾಮದಲ್ಲಿ ಜಾಗವಿದೆ. ನಾವು ಇಲ್ಲಿ ಬೇರೆ ಗ್ರಾಮಗಳ ಡಂಪಿಂಗ್‌ ಯಾರ್ಡ್‌ ತೆರೆಯಲು ಬಿಡುವುದಿಲ್ಲ. ಇಲ್ಲಿನವರು ಮಾತ್ರವಲ್ಲದೆ ಗ್ರಾಮಸ್ಥರೆಲ್ಲ ಸೇರಿ ಹೋರಾಟ ಮಾಡುತ್ತೇವೆ.
– ಅಣ್ಣಪ್ಪ ಪೂಜಾರಿ ಗುಡ್ಡಮ್ಮಾಡಿ, ಗ್ರಾ.ಪಂ. ಮಾಜಿ ಸದಸ್ಯರು

Advertisement

ಪ್ರಸ್ತಾವನೆ ಸಲ್ಲಿಕೆ
3 ಗ್ರಾ.ಪಂ.ಗಳನ್ನು ಒಳಗೊಂಡು ಸೇನಾಪುರದಲ್ಲಿ ಕಸದ ಡಂಪಿಂಗ್‌ ಯಾರ್ಡ್‌ ತೆರೆಯುವ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿನ ಸ್ಥಳೀಯರ ಆಕ್ಷೇಪಣೆಗಳಿದ್ದಲ್ಲಿ ಪರಿಶೀಲಿಸಲಾಗುವುದು.
– ಆನಂದಪ್ಪ ನಾಯ್ಕ, ಕುಂದಾಪುರ ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next