Advertisement

ಕುಡಿವ ನೀರಿನ ಕಾಮಗಾರಿ ವಿಳಂಬಕ್ಕೆ ವಿಪಕ್ಷ

03:37 PM May 07, 2022 | Niyatha Bhat |

ಶಿವಮೊಗ್ಗ: ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿಗಳು ನಿರ್ದಿಷ್ಟ ಸಮಯದಲ್ಲಿ ಆಗದೆ ಸಾರ್ವಜನಿಕರು ಪರದಾಡುತ್ತಿದ್ದು, ಕಾಮಗಾರಿ ವಿಳಂಬದ ಬಗ್ಗೆ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಶುಕ್ರವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಮೇಯರ್‌ ಸುನಿತಾ ಅಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಪ್ರಾರಂಭದಲ್ಲೇ ವಿಪಕ್ಷ ಸದಸ್ಯರಾದ ರಮೇಶ್‌ ಹೆಗ್ಡೆ ಮತ್ತು ನಾಗರಾಜ್‌ ಕಂಕಾರಿ, ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭವಾದ ಮೇಲೆ ಹಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಟೆಂಡರ್‌ ಆದ ಕಾಮಗಾರಿಗಳು ಕೂಡ ಸರಿಯಾಗಿ ನಡೆಯುತ್ತಿಲ್ಲ. ಪಾಲಿಕೆ ಸದಸ್ಯರನ್ನು ಜನ ಬಾಯಿಗೆ ಬಂದಂತೆ ಟೀಕಿಸುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಾರ್ಡ್‌ ಜನರಿಗೆ ಉತ್ತರ ಕೊಡುವುದೇ ಅಸಾಧ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನುಮೋದನೆಗೊಂಡಿರುವ ಕಾಮಗಾರಿ ವಿವರ ಸಂಬಂಧಪಟ್ಟ ಅಧಿಕಾರಿ ಸಭೆಗೆ ನೀಡುವಂತೆ ನಾಗರಾಜ್‌ ಕಂಕಾರಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಕೋಲಾಹಲ ಉಂಟಾಗಿ ಮೇಯರ್‌ ಹಾಗೂ ಪಾಲಿಕೆ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮಹಾತ್ಮ ಗಾಂಧಿ ಪಾರ್ಕ್‌ ಅಭಿವೃದ್ಧಿ ಕಾಮಗಾರಿ ಪ್ಯಾಕೇಜ್‌ 1ರಲ್ಲಿ 300 ಲಕ್ಷ ರೂ., ಪ್ಯಾಕೇಜ್‌ 2ರಲ್ಲಿ ವಾರ್ಡ್‌ ನಂ. 30 ರ ಸೀಗೆಹಟ್ಟಿಯಲ್ಲಿ ವ್ಯಾಯಾಮಶಾಲೆ ಮತ್ತು ಲೈಬ್ರರಿ ಕಾಮಗಾರಿಗೆ 55 ಲಕ್ಷ ರೂ., ಕೃಷಿ ಕಚೇರಿಯಲ್ಲಿರುವ ಪಾರ್ಕ್‌ ಅಭಿವದ್ಧಿ ಕಾಮಗಾರಿಗೆ 78 ಲಕ್ಷ ರೂ., ಮೆಸ್ಕಾಂ ಸಿ.ಎಸ್.ಡಿ. -01 ವ್ಯಾಪ್ತಿಗೆ ಬರುವ ಯೂನಿಟ್‌ 1 ಮತ್ತು 3 ರಲ್ಲಿ ಬೀದಿ ದೀಪಗಳಿಗೆ ಸಂಬಂಧಿಸಿದಂತೆ ಮೂಲ ಸೌಕರ್ಯ ಸರಿಪಡಿಸುವ ಕುರಿತು 40 ಲಕ್ಷ ರೂ., ಮೆಸ್ಕಾಂ ಸಿ.ಎಸ್.ಡಿ. 2 ವ್ಯಾಪ್ತಿಗೆ ಬರುವ ವಾರ್ಡ್‌ಗಳಲ್ಲಿ ಮೂಲ ಸೌಕರ್ಯಕ್ಕೆ 20 ಲಕ್ಷ ರೂ., ಮೆಸ್ಕಾಂ ಸಿ.ಎಸ್.ಡಿ.-03 ವ್ಯಾಪ್ತಿಯ ವಾರ್ಡ್ ಗಳಲ್ಲಿ ಮೂಲ ಸೌಕರ್ಯ ಸರಿಪಡಿಸಲು 22 ಲಕ್ಷ ರೂ. ಹೀಗೆ ಒಟ್ಟು 515 ಲಕ್ಷ ರೂ.ಗಳ ಕಾಮಗಾರಿ ಅನುಮೋದನೆಗೊಂಡಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿವೆ. ಇನ್ನು ಉಳಿದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿ ರಮೇಶ್‌ ಸಭೆಗೆ ಮಾಹಿತಿ ನೀಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್‌ ಹೊನ್ನವಿಲೆ, ಕಂದಾಯ ಇಲಾಖೆಯ ಅಕ್ರಮಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಬೆಲೆ ಬಾಳುವ 12 ನಿವೇಶನಗಳನ್ನು ಅಕ್ರಮ ಖಾತೆ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ ಪಾಲಿಕೆ ಸದಸ್ಯರು ಬೆಳಕಿಗೆ ತಂದ ಮೇಲೆ ಖಾತೆ ಬ್ಲ್ಯಾಕ್‌ ಮಾಡಲಾಗಿದೆ. ಕಂದಾಯ ಅಧಿಕಾರಿಗಳು ಯಾವುದೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪಾಲಿಕೆಗೆ ಅಲೆದು ಅಲೆದು ಹೈರಾಣಾಗಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅನೇಕ ಸದಸ್ಯರು ಇದನ್ನು ಬೆಂಬಲಿಸಿ ಆಡಳಿತ ವೈಖರಿ ಟೀಕಿಸಿದರು.

ಈ ಸಂದರ್ಭದಲ್ಲಿ ವಿಪಕ್ಷ ಸದಸ್ಯರು ಮೂರು ಜನ ಸ್ಥಾಯಿ ಸಮಿತಿ ಸದಸ್ಯರೇ ಆಡಳಿತ ವೈಖರಿ ಬಗ್ಗೆ ದಾಖಲೆ ಸಮೇತ ಟೀಕೆ ಮಾಡುತ್ತಿದ್ದಾರೆ ಎಂದರೆ ಪಾಲಿಕೆಯ ಆಡಳಿತ ವೈಫಲ್ಯವಲ್ಲವೇ ಎಂದು ಲೇವಡಿ ಮಾಡಿದರು. ಸದಸ್ಯ ಆರ್‌.ಸಿ. ನಾಯ್ಕ ಮಾತನಾಡಿ, ಪಾಲಿಕೆ ನಿಜವಾದ ಸುಪ್ರೀಂ ಯಾರು ಎಂಬುದೇ ಗೊತ್ತಾಗುತ್ತಿಲ್ಲ. ಆಯುಕ್ತರು ಆದೇಶ ನೀಡಿದ್ದರೂ ಸಹ ಪಾಲಿಕೆ ಆಡ್ಮಿನ್‌ ಅಡ್ಡಗಾಲು ಹಾಕುತ್ತಿದ್ದಾರೆ. ಪಾಲಿಕೆ ವಕೀಲರು ಪಾಲಿಕೆ ಆಸ್ತಿ ಉಳಿಸಲು ಆಸಕ್ತಿ ವಹಿಸುತ್ತಿಲ್ಲ ಎಂದು ದೂರಿದರು.

Advertisement

ಪಾಲಿಕೆಯ ಮುಖ್ಯ ಇಂಜಿನಿಯರ್‌ ಡಂಕಪ್ಪ ಮಾತನಾಡಿ, ಒಟ್ಟು 13 ಪ್ಯಾಕೇಜ್‌ಗೆ ಹೂಳು ತೆಗೆಯುವ ಟೆಂಡರ್‌ ಆಗಿದ್ದು, 8 ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಈ ತಿಂಗಳ ಅಂತ್ಯದೊಳಗೆ ಮುಗಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು.

ಎಂದಿನಂತೆ ಪ್ರಮುಖವಾಗಿ ಕುಡಿಯುವ ನೀರು, ಯುಜಿ ಕೇಬಲ್‌ ಅಳವಡಿಕೆ, ಸ್ಮಾರ್ಟ್‌ ಸಿಟಿ ಅವಾಂತರ, ಒಳಚರಂಡಿ ಅವ್ಯವಸ್ಥೆ, ಬೀದಿ ದೀಪಗಳ ಅವ್ಯವಸ್ಥೆ ಕುರಿತು ಸದಸ್ಯರು ಪಕ್ಷಬೇಧ ಮರೆತು ಅಧಿಕಾರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಉಪಮೇಯರ್‌ ಶಂಕರ್‌ ಗನ್ನಿ, ಆಯುಕ್ತ ಮಾಯಣ್ಣ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

ರಾಜಕಾಲುವೆ ಹೂಳು ತೆಗೆಯುವಂತೆ ಹಲವು ಬಾರಿ ಮನವಿ ಮಾಡಿದ್ದೇನೆ. ಈ ಕಾಮಗಾರಿಗೆ ಟೆಂಡರ್‌ ಕೂಡ ಆಗಿದೆ. ಜನವರಿಯಿಂದಲೇ ಈ ಬಗ್ಗೆ ಒತ್ತಾಯಿಸಿದ್ದೇನೆ. ಏಪ್ರಿಲ್‌ ಕಳೆದು ಇನ್ನೊಂದು ಮಳೆಗಾಲ ಆರಂಭವಾದರೂ ಶರಾವತಿ ನಗರ ಮತ್ತು ಹೊಸಮನೆಯ ರಾಜಕಾಲುವೆಯ ಹೂಳು ತೆಗೆಸಿಲ್ಲ. ಸಣ್ಣ ಮಳೆ ಬಂದರೂ ಮನೆಗಳಿಗೆ ನೀರು ನುಗ್ಗುತ್ತಿದೆ. – ರೇಖಾ ರಂಗನಾಥ್‌

Advertisement

Udayavani is now on Telegram. Click here to join our channel and stay updated with the latest news.

Next