Advertisement

ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಘೋಷಣೆಗೆ ವಿರೋಧ

02:59 PM Jul 10, 2019 | Suhan S |

ಗದಗ: ಜಿಲ್ಲೆಯ ಕಪ್ಪತ್ತಗುಡ್ಡವನ್ನು ವನ್ಯಜೀವಿ ಅಭಯಾರಣ್ಯವನ್ನಾಗಿ ಘೋಷಿಸಿರುವ ಸರಕಾರದ ನಿರ್ಧಾರವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಪ್ಪತ್ತಗುಡ್ಡದ ಸರಕಾರಿ ಜಮೀನಿನಲ್ಲಿ ಸಾಗುವಳಿದಾರರು ಮಂಗಳವಾರ ನಗರದಲ್ಲಿ ಪತ್ರ ಚಳವಳಿ ನಡೆಸಿದರು.

Advertisement

ಇಲ್ಲಿನ ನಗರಸಭೆ ಆವರಣದಲ್ಲಿರುವ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಕೆಲಕಾಲ ಧರಣಿ ನಡೆಸಿದರು. ಈ ವೇಳೆ ಕಪ್ಪತ್ತಗುಡ್ಡವನ್ನು ಏಕಪಕ್ಷೀಯವಾಗಿ ವನ್ಯಜೀವಿ ಧಾಮವನ್ನಾಗಿ ಘೋಷಿಸಲಾಗಿದೆ. ಈ ಬಗ್ಗೆ ಸ್ಥಳೀಯರ ಅಭಿಪ್ರಾಯವನ್ನೂ ಸಂಗ್ರಹಿಸಿಲ್ಲ. ವನ್ಯಜೀವಿ ಧಾಮವನ್ನಾಗಿಸುವ ಮೂಲಕ ಅರಣ್ಯ ಪ್ರದೇಶದ ನಿವಾಸಿಗಳನ್ನು ಒಕ್ಕಲೆಬ್ಬಿಸುತ್ತಾರೆ ಎಂದು ಆರೋಪಿಸಿ, ಸರಕಾರದ ವಿರುದ್ಧ ಘೊಷಣೆ ಕೂಗಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸುಮತಿಶ್ರೀ ಎಸ್‌.ಎನ್‌.ಎಚ್ ಮಾತನಾಡಿ, ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮವನ್ನಾಗಿಸುವ ಮೂಲಕ ರಾಜ್ಯ ಸರಕಾರ ರೈತರ ಪಾಲಿಗೆ ಮರಣ ಶಾಸನ ಬರೆದಿದೆ. ವನ್ಯಜೀವಿ ಧಾಮವನ್ನಾಗಿಸಿ ಘೋಷಿಸಿದ್ದರಿಂದ ಆ ಭಾಗದ ಜನರು ಭೂಮಿ ಕಳೆದುಕೊಳ್ಳುವಂತಾಗಿದೆ. ಕಪ್ಪತ್ತಗುಡ್ಡದ ಅಡಿಯಲ್ಲಿ ತಲೆತಲಾಂತರದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಇದೀಗ ಭೂಮಿ ಕಳೆದುಕೊಳ್ಳುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಚಳವಳಿಯ ಸಾನ್ನಿಧ್ಯ ವಹಿಸಿದ್ದ ಹಿರೇವಡ್ಡಟ್ಟಿಯ ಶ್ರೀಗಳು ಮಾತನಾಡಿ, ಕಪ್ಪತ್ತಗುಡ್ಡದ ಪ್ರದೇಶದಲ್ಲಿ ವಾಸಿಸುವ ಹಾಗೂ ಬಗರಹುಕುಂ ಸಾಗುವಳಿದಾರರಿಗೆ, ರೈತರಿಗೆ ಅವರ ಭೂಮಿಯ ಹಕ್ಕಪತ್ರ ನೀಡಬೇಕು. ಕಪ್ಪತ್ತಗುಡ್ಡವನ್ನು ವನ್ಯಜೀವಿ ಅಭಯಾರಣ್ಯ ಎಂದು ಘೋಷಣೆ ಮಾಡಿರುವ ಸರ್ಕಾರವು ತನ್ನ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಸಂಘಟನಾ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪಗೌಡ ದೇಸಾಯಿ ಮಾತನಾಡಿ, ಕಪ್ಪತ್ತಗುಡ್ಡ ವ್ಯಾಪ್ತಿಯ ಗ್ರಾಮಗಳನ್ನು ಸ್ಥಳಾಂತರ ಮಾಡದೇ, ಅವರ ಜಮೀನಿಗೆ ಪರ್ಯಾಯ ವ್ಯವಸ್ಥೆ ಮಾಡದೇ, ಏಕಾಏಕಿ ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಿರುವ ಖಂಡನೀಯ ಎಂದರು.

ಸಾಮಾಜಿಕ ಕಾರ್ಯಕರ್ತ ಬಸವಣ್ಣೆಯ್ಯ ಹಿರೇಮಠ ಮಾತನಾಡಿ, ಈಗಾಗಲೇ ಸಾಮಾಜಿಕ ಅರಣ್ಯ ಸಮಿತಿಯಿಂದ ಕೆಲವರಿಗೆ ಹಕ್ಕುಪತ್ರ ನೀಡಲಾಗಿದ್ದು , ಆ ಹಕ್ಕು ಪತ್ರಗಳಿಗೆ ಸರ್ಕಾರದ ಯಾವುದೇ ಸಹಾಯಧನವಾಗಲಿ, ಮೋದಿಯವರ ಕಿಸಾನ್‌ ಸಮ್ಮಾನ ಸೇರಿದಂತೆ ಮಹತ್ವ ಪೂರ್ಣ ಯೋಜನೆಗಳ ಲಾಭ ಅವರಿಗೆ ದೊರೆಯುವುದಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಕಂದಾಯ ಇಲಾಖೆಯ ಪಟ್ಟಾ ವಿತರಿಸಬೇಕು ಎಂದು ಆಗ್ರಹಿಸಿದರು. ಬಗರಹುಕುಂ ಸಾಗುವಳಿದಾರರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಕ್ರಮ ಭೂಮಿಯನ್ನು ಸಕ್ರಮಗೊಳಿಸಬೇಕೆಂದು ಸಾವಿರಾರು ಬಗರಹುಕುಂ ಸಾಗುವಳಿದಾರರು ಅರ್ಜಿ ಸಲ್ಲಿಸಿದ್ದರೂ, ಅವರಿಗೆ ಪೂರ್ಣ ಪ್ರಮಾಣದಲ್ಲಿ ಸಾಗುವಳಿ ಪತ್ರ ನೀಡಿಲ್ಲ. ರೈತರ ಅನುಕೂಲಕ್ಕಾಗಿ ಕಂದಾಯ ಇಲಾಖೆಯಿಂದ ಪಟ್ಟಾ ವಿತರಿಸಬೇಕು ಎಂದು ಒತ್ತಾಯಿಸಿದರು.

Advertisement

ನಂತರ ನಗರಸಭೆಯಿಂದ ಪ್ರಧಾನ ಅಂಚೆ ಕಚೇರಿವರೆಗೆ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಬರೆದ ಪತ್ರಗಳನ್ನು ಅಂಚೆ ಪೆಟ್ಟಿಗೆಯಲ್ಲಿ ಹಾಕುವ ಮೂಲಕ ಪ್ರತಿಭಟನೆ ಕೊನೆಗೊಳಿಸಿದರು. ಪ್ರತಿಭಟನೆಯಲ್ಲಿ ಭಾರತೀಯ ಕೃಷಿಕ ಸಮಾಜದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗಂಗಮ್ಮ ಅಂಗಡಿ, ವೈ.ಬಿ.ಇನಾಮತಿ, ಮಹೇಶ ದಾಸರ, ವೀರನಗೌಡ ಪಾಟೀಲ, ಮಾಬುಸಾಬ ಶಿರಹಟ್ಟಿ, ಪ್ರಭುರಾಜ ಮಾರನಬಸರಿ, ದೇವೇಂದ್ರನಾಥ ಕರಿಗೌಡರ, ಮಹಿಳಾ ಮುಖಂಡರಾದ ಲಲಿತಾ ಮರಿಗೌಡರ, ಜಯಶ್ರೀ ಅಂಗಡಿ, ಸುಮಿತ್ರಾ ವಿರಕ್ತಮಠ, ಸುಮಿತ್ರಾ ಶಿವಶಿಂಪಿ, ಸವಿತಾ ಶಿವಶಿಂಪಿ, ಶರಣ ಕಗಲಗುಂಬಾ, ಶರಣವ್ವ ಹದ್ಲಿ, ಲಲಿತಾ ಗಡಾದ, ಚನ್ನಮ್ಮ ಶಿವಶಿಂಪಿ, ಈರಮ್ಮ, ಜನಪದ ಕಲಾವಿದ ಇಮಾಮಸಾಬ್‌ ವಲ್ಲೆಪ್ಪನವರ ನಾಗನೂರ, ದಾವಲಸಾಬ್‌ ವಲ್ಲೆಪ್ಪನವರ, ದ್ಯಾಮಪ್ಪ ಪೂಜಾರ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next