ಬೆಳಗಾವಿ: ಸತತವಾಗಿ 10 ವರ್ಷಗಳಿಂದ ಎ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡುತ್ತಿರುವುದನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಗರ ಘಟಕದವರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕಡ್ಡಾಯವಾಗಿ ವರ್ಗಾವಣೆ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ. ಉಳಿದೆ ಎಲ್ಲ ಶಿಕ್ಷಕರಿಗೂ ವಿನಾಯಿತಿ ನೀಡಲಾಗಿದೆ. ಆದರೆ ಸಿಂಗಲ್ ವೇತನ ಇರುವ ಶಿಕ್ಷಕರನ್ನು ಕಡ್ಡಾಯ ಮಾಡಲಾಗುತ್ತಿದೆ. ಸರ್ಕಾರಿ ನೌಕರಿ ಇಲ್ಲದವರೊಂದಿಗೆ ವಿವಾಹ ಆಗಿದ್ದು ತಪ್ಪಾಯಿತಾ. ಈ ನಿಯಮ ಶಿಕ್ಷಕರನ್ನು ಹಿಂಡಿ ಸಿಪ್ಪೆ ಮಾಡುತ್ತಿದೆ ಎಂದು ಆರೋಪಿಸಿದರು. ಪತಿ-ಪತ್ನಿ ಪ್ರಕರಣವಲ್ಲದ ಶಿಕ್ಷಕರನ್ನು ಒಮ್ಮೆ ನಗರದಿಂದ ವರ್ಗಾವಣೆ ಮಾಡಿ ಕಳುಹಿಸಿದರೆ ಮತ್ತೆ ನಗರಕ್ಕೆ ಬರಲು ಅವರ ಸೇವೆಯಲ್ಲಿ ಅವಕಾಶ ತುಂಬಾ ಕಡಿಮೆ. ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ಹೊಂದಬೇಕಾದರೆ ತೀವ್ರ ಅಂಗವೈಕಲ್ಯ ಅಥವಾ ತೀವ್ರ ತರಹದ ಕಾಯಿಲೆ ಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
ಶೇ. 5ರಷ್ಟು ಶಿಕ್ಷಕರನ್ನು ನಗರದಿಂದ ಹೊರ ಹಾಕಲಾಗುತ್ತಿದ್ದು, ಶೇ. 5ರಷ್ಟು ಗ್ರಾಮೀಣದಿಂದ ನಗರದೊಳಗೆ ಬರಲು ಅವಕಾಶ ನೀಡಲಾಗುತ್ತಿದೆ. ಶಿಕ್ಷಕರು ಒಂದೇ ಕಡೆ ಕರ್ತವ್ಯ ನಿರ್ವಹಿಸಿದರೆ ಮಕ್ಕಳೊಂದಿಗೆ ಹಾಗೂ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಅವಕಾಶ ಹೆಚ್ಚು. ಭ್ರಷ್ಟಾಚಾರ ರಹಿತ ಈ ಶಿಕ್ಷಕ ವೃತ್ತಿಯನ್ನು ಏಕೆ ಕಡ್ಡಾಯ ವರ್ಗಾವಣೆ ಮಾಡಲಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ದೂರಿದರು.
ಕೂಡಲೇ ಈ ನಿಯಮವನ್ನು ರದ್ದುಗೊಳಿಸಿ ಶಿಕ್ಷಕರಿಗೆ ನೆಮ್ಮದಿಯಾಗಿ ಕೆಲಸ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎಂ.ಜಿ. ಪಾಟೀಲ, ಕಾರ್ಯದರ್ಶಿ ಕೆ.ಎಸ್. ರಾಚಣ್ಣವರ, ಆರ್.ಎಚ್. ದಂಡಗಲ, ಜಯಶ್ರೀ ಪಾಟೀಲ, ಎಸ್.ಬಿ. ನಾವಲಗಿ, ಎನ್.ಕೆ. ಕಾಕತಿಕರ, ಜಿ.ಎಸ್. ಮಣ್ಣಿಕೇರಿ, ಬಿ.ಬಿ. ಸೊಗಲಣ್ಣವರ, ಆರ್.ಡಿ. ಬೋಗಾರ, ಅನಂತ ಮರೆಣ್ಣವರ ಸೇರಿದಂತೆ ಇತರರು ಇದ್ದರು.