Advertisement

CM, ಸಚಿವ ನಾಗೇಂದ್ರ ತಲೆದಂಡಕ್ಕೆ ವಿಪಕ್ಷ ಪಟ್ಟು !

12:21 AM May 29, 2024 | Team Udayavani |

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 87 ಕೋಟಿ ರೂ.ಗಳ ಹಗರಣ ಹಾಗೂ ನಿಗಮದ ಅಧೀಕ್ಷಕ ಚಂದ್ರಶೇಖರ್‌ ಆತ್ಮಹತ್ಯೆ ಪ್ರಕರಣವೀಗ ಸಚಿವ ಬಿ. ನಾಗೇಂದ್ರ ಕೊರಳಿಗೆ ಉರುಳಾಗಿ ಪರಿಣಮಿಸಿದ್ದು, ಸಿಎಂ ಹಾಗೂ ಸಚಿವರ ತಲೆದಂಡಕ್ಕೆ ವಿಪಕ್ಷಗಳು ಪಟ್ಟು ಹಿಡಿದಿವೆ.

Advertisement

ಜತೆಗೆ ಯಾವುದೇ ಅಧಿಕಾರಿಗಳು ಆತ್ಮಹತ್ಯೆಯಂತಹ ದಾರಿ ಹಿಡಿಯಬಾರದು. ಅಧಿಕಾರಿಗಳ ಜತೆಗೆ ಜವಾಬ್ದಾರಿಯುತ ವಿಪಕ್ಷವಾಗಿ ನಾವು ನಿಲ್ಲುತ್ತೇವೆ ಎಂದು ಧೈರ್ಯ ಹೇಳಿವೆ. ಪ್ರಕರಣದಲ್ಲಿ ಅನ್ಯಾಯವಾಗಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್‌ನಲ್ಲಿ ಸಚಿವರಾದ ನಾಗೇಂದ್ರ ಹಾಗೂ ಡಾ| ಎಚ್‌. ಸಿ. ಮಹದೇವಪ್ಪ ಹೆಸರು ಪ್ರಸ್ತಾವಿಸಿದ್ದಾರೆ. ಹೀಗಾಗಿ ಇಡೀ ಸರಕಾರ ಈ ಪ್ರಕರಣದ ಹೊಣೆ ಹೊರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಜೀನಾಮೆ ಸಲ್ಲಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ರಾಜ್ಯಾದ್ಯಂತ ಹೋರಾಟ; ಬಿಜೆಪಿ ಎಚ್ಚರಿಕೆ
ಸಚಿವ ನಾಗೇಂದ್ರ ಅವರ ಮೌಖಿಕ ಆದೇಶದ ಮೇರೆಗೆ ಕೋಟ್ಯಂತರ ರೂ. ವರ್ಗಾವಣೆ ಆಗಿದ್ದು, ತತ್‌ಕ್ಷಣವೇ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ಮೂಲಕ ಪ್ರಕ ರಣದ ತನಿಖೆ ನಡೆಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.

ಜೆಡಿಎಸ್‌ ಕೂಡ ಸಚಿವರ ವಜಾಕ್ಕೆ ಒತ್ತಾಯಿಸಿದ್ದು, ಅಧಿಕಾರಿಗಳ ಆತ್ಮಹತ್ಯೆಯಂತಹ ಘಟನೆಗಳು ರಾಜ್ಯ ಸರಕಾರದ ಕಾರ್ಯವೈಖರಿ ಬಗ್ಗೆ ಭಯ ಹುಟ್ಟಿಸುತ್ತಿದೆ. ರಾಜ್ಯದಲ್ಲಿ ಇಂತಹ ಘಟನೆ ನಡೆದರೂ ಏನೂ ನಡೆದೇ ಇಲ್ಲ ಎನ್ನುವಂತೆ ಸರಕಾರ ವರ್ತಿಸುತ್ತಿದೆ ಎಂದು ಜೆಡಿಎಸ್‌ ಆಕ್ರೋಶ ವ್ಯಕ್ತಪಡಿಸಿದೆ.

ಸಚಿವರ ಮೌಖಿಕ ಆದೇಶದಂತೆ ಕೋಟ್ಯಂತರ ರೂ. ವರ್ಗಾವಣೆ ಆಗಿದೆ. ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಬೇಕು. ಹೈಕೋರ್ಟ್‌ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡ ಬೇಕಾಗುತ್ತದೆ.
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Advertisement

ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಡೆತ್‌ ನೋಟ್‌ನಲ್ಲಿ ಸಚಿವರು, ನಿಗಮದ ಅಧಿಕಾರಿ ಗಳ ಹೆಸರಿದೆ. ಇದಕ್ಕಿಂತ ಸಾಕ್ಷಿ ಬೇಕೇ ಸಿಎಂ ಅವರೇ? ನಿಮಗೆ ಮಾನ ಮರ್ಯಾದೆ ಇದ್ದರೆ, ಸಿಎಂ ಸ್ಥಾನಕ್ಕೆ ಬೆಲೆ ಇದ್ದರೆ ಇಂದೇ ರಾಜೀನಾಮೆ ಕೊಡಿ.
ಆರ್‌. ಅಶೋಕ್‌,
ವಿಧಾನಸಭೆ ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next