ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ-ಜಗಳೂರು ಕಾಲುವೆ ಮಾರ್ಗ ಬದಲಾವಣೆ ವಿರೋಧಿಸಿ ಕಾತ್ರಾಳ್ ಕೆರೆ ಅಚ್ಚುಕಟ್ಟುದಾರ ರೈತರು ಕಾತ್ರಾಳ್ ಕೆರೆ ಸಮೀಪದ ಬಳ್ಳೆಕಟ್ಟೆ ಬಳಿ ಸೋಮವಾರ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು.
ಕಾತ್ರಾಳ್ ಕೆರೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರುವ ಸುಮಾರು ಇಪ್ಪತ್ತಕ್ಕೂ ಹೆಚ್ಚು ಹಳ್ಳಿಗಳ ಮೂರು ಸಾವಿರಕ್ಕೂ ಹೆಚ್ಚಿನ ರೈತರು ಒಮ್ಮೆಲೆ ಹೆದ್ದಾರಿಯಲ್ಲಿ ಜಮಾವಣೆಯಾಗಿದ್ದರಿಂದ ಒಂದು ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಹೆದ್ದಾರಿಯಲ್ಲಿ ಐದು ಕಿಮೀಗೂ ಹೆಚ್ಚು ಉದ್ದ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಪದೇ ಪದೇ ಮಾರ್ಗಗಳ ಬದಲಾವಣೆ ಮಾಡುವುದು, ಒತ್ತಡಗಳಿಗೆ ಮಣಿಯುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಾಧಿಕಾರಿಗಳು ಮತ್ತು ಜಲಸಂಪನ್ಮೂಲ ಇಲಾಖೆ ಎಚ್ಚರಿಕೆಯ ಹೆಜ್ಜೆ ಇಡಬೇಕು. ಈ ಹಿಂದೆ ಮಂಜೂರಾಗಿದ್ದ ಮಾರ್ಗದಲ್ಲೇ ಜಗಳೂರಿಗೆ ನೀರು ತೆಗೆದುಕೊಂಡು ಹೋಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ನುಲೇನೂರು ಎಂ. ಶಂಕರಪ್ಪ ಮಾತನಾಡಿ, ಜಲಸಂಪನ್ಮೂಲ ಇಲಾಖೆ ಭದ್ರಾ ಮೇಲ್ದಂಡೆ ಯೋಜನೆ ಅಡಿ ಜಗಳೂರು ತಾಲೂಕಿಗೆ ನೀರು ಪೂರೈಕೆ ಮಾಡುವ ಸಂಬಂಧ ಈ ಮೊದಲು ಸಮೀಕ್ಷೆ ನಡೆಸಿ ಸೂಕ್ತ ಮಾರ್ಗ ರಚಿಸಿತ್ತು. ಬೆಳಗಟ್ಟ ಮತ್ತು ಹಾಯ್ಕಲ್ ನಡುವೆ ಬರುವ ಚಿತ್ರದುರ್ಗ ಶಾಖಾ ಕಾಲುವೆಯಿಂದ ಜಗಳೂರು ಕಾಲುವೆಯನ್ನು ಸೃಷ್ಟಿಸಿ ಅಲ್ಲಿಂದ ಕಾತ್ರಾಳ್ ಕೆರೆ ಮೂಲಕ ಜಗಳೂರಿಗೆ ನೀರು ಒಯ್ಯಬೇಕೆಂಬ ಉದ್ದೇಶ ಹೊಂದಲಾಗಿತ್ತು. ಈ ಮಾರ್ಗದಲ್ಲಿ ನೀರು ಪೂರೈಕೆ ಮಾಡುವುದರಿಂದ ಚಿತ್ರದುರ್ಗದ ನಾಲ್ಕು ಹಾಗೂ ಜಗಳೂರು ತಾಲೂಕಿನ ಆರು ಸೇರಿದಂತೆ ಒಟ್ಟು ಹತ್ತು ಕೆರೆಗಳಿಗೆ ನೀರು ತುಂಬಿಸುವ ಪ್ರಸ್ತಾಪ ಇತ್ತು. ಆದರೆ ಜಗಳೂರು ತಾಲೂಕಿನ ರೈತರು ಮಾರ್ಗ ಬದಲಾವಣೆ ಮಾಡುವಂತೆ ಒತ್ತಾಯಿಸುತ್ತಿದ್ದು, ಕಾತ್ರಾಳ್ ಕೆರೆ ಮೂಲಕ ನೀರು ತಂದರೆ ಜಗಳೂರಿಗೆ ತಲುಪುವುದಿಲ್ಲ ಎಂದು ಹೇಳುತ್ತಿದ್ದಾರೆ. ಬೆಳಗಟ್ಟದಿಂದ ಪ್ರತ್ಯೇಕ ಮಾರ್ಗದ ಮೂಲಕ ಸಂಗೇನಹಳ್ಳಿಗೆ ನೀರು ಕೊಡಬೇಕೆಂಬ ಬೇಡಿಕೆ ಮಂಡಿಸಿದ್ದಾರೆ. ಅವರ ಬೇಡಿಕೆಗೆ ಒಪ್ಪಿಗೆ ದೊರೆತಲ್ಲಿ ಇಡೀ ಮಾರ್ಗದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು ಮಾತನಾಡಿ, ಜಗಳೂರು ತಾಲೂಕಿಗೆ ಬೆಳಗಟ್ಟ ಮೂಲಕ ಸೇರಿದಂತೆ ಯಾವುದೇ ಮಾರ್ಗದಲ್ಲಿ ನೀರು ಕೊಡುವ ಉದ್ದೇಶ ಹೊಂದಿದ್ದರೆ ಅಭ್ಯಂತರವಿಲ್ಲ, ಆದರೆ ಕಾತ್ರಾಳ್ ಕೆರೆಗೂ ಭದ್ರಾ ನೀರು ನೀಡಬೇಕು. ಹಳೇ ಮಾರ್ಗವನ್ನು ಚಿತ್ರದುರ್ಗ ಗಡಿಯಂಚಿನ ಬಸ್ತಿಹಳ್ಳಿವರೆಗೂ ವಿಸ್ತರಿಸಬೇಕು. ನೀರಿನ ವಿಚಾರದಲ್ಲಿ ಜಗಳೂರು ತಾಲೂಕಿನವರೊಂದಿಗೆ ಸಂಘರ್ಷ ಇಳಿಯುವ ಉದ್ದೇಶ ನಮ್ಮದಲ್ಲ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ಜನರಿಗೆ ಕುಡಿಯುವ ನೀರು ನೀಡಿದರೆ ಸಾಕು. ಕಳೆದ ಐದು ವರ್ಷಗಳಿಂದ ಜಿಲ್ಲೆಯ ಜನ ಕುಡಿಯುವ ನೀರಿನ ಅಭಾವದಿಂದ ತತ್ತರಿಸಿದ್ದಾರೆ. ಇಂತಹ ವೇಳೆ ಕಾತ್ರಾಳ್ ಸೇರಿದಂತೆ ಇತರೆ ಕೆರೆಗಳಿಗೆ ಭದ್ರಾ ನೀರು ತುಂಬಿಸಿದರೆ ಅಂತರ್ಜಲ ಹೆಚ್ಚಳವಾಗಿ ಕುಡಿವ ನೀರಿನ ಅಭಾವ ನಿವಾರಣೆಯಾಗುತ್ತದೆ. ಹಾಗಾಗಿ ಕಾತ್ರಾಳ್ ಕೆರೆಗೆ ಭದ್ರೆಯನ್ನು ಹರಿಸಿದರೆ ಈ ಭಾಗದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಚಿತ್ರದುರ್ಗ ತಾಲೂಕಿನ ಕಾತ್ರಾಳ್, ಯಳಗೋಡು, ಮುದ್ದಾಪುರ, ಸುಲ್ತಾನಿಪುರ ಕೆರೆಗಳಿಗೆ ಭದ್ರಾ ಮೇಲ್ದಂಡೆಯಡಿ ನೀರು ಕೊಡಲೇಬೇಕು. ರಾಜ್ಯ ಸರ್ಕಾರ ಕಾತ್ರಾಳ್ ಕೆರೆಗೆ ನೀರು ಕೊಡುವ ವಿಚಾರದಲ್ಲಿ ಹಿಂದೆ ಸರಿಯಬಾರದು. ಹಾಗೊಂದು ವೇಳೆ ಮಾರ್ಗ ಬದಲಾಯಿಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ಜಿಲ್ಲಾ ಉಪಾಧ್ಯಕ್ಷ ಎಂ.ಬಿ. ತಿಪ್ಪೇಸ್ವಾಮಿ, ಜಿಲ್ಲಾ ಖಜಾಂಚಿ ಸಿ.ಆರ್. ತಿಮ್ಮಣ್ಣ, ಹಸಿರು ಸೇನೆ ಜಿಲ್ಲಾ ಸಂಚಾಲಕ ಧನಂಜಯ, ಜಿಲ್ಲಾ ಮುಖಂಡ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕಾರ್ಯಾಧ್ಯಕ್ಷ ಆರ್.ಸಿ. ಮಂಜಪ್ಪ, ಪ್ರವೀಣ್‌ಕುಮಾರ್, ಸಜ್ಜನಕೆರೆ ರೇವಣ್ಣ, ಕ್ಯಾಸಾಪುರ ಲಕ್ಷ್ಮೀನರಸಿಂಹಸ್ವಾಮಿ, ಕ್ಯಾಸಾಪುರ ಮಂಜಣ್ಣ, ಮುದ್ದಾಪುರ ನಾಗರಾಜ್, ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ಸಿದ್ದಮ್ಮ, ಇಸಾಮುದ್ರ ಬಸಮ್ಮ ಭಾಗವಹಿಸಿದ್ದರು.