Advertisement

ರಂಗೋಲಿ ಸ್ಪರ್ಧೆ ಮೂಲಕ ಸಿಎಎಗೆ ವಿರೋಧ

12:39 PM Jan 03, 2020 | Suhan S |

ಮೈಸೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ ಮತ್ತು ಮೈಸೂರು ನಗರ ಮತ್ತು ಗ್ರಾಮಾಂತರ ಮಹಿಳಾ ಕಾಂಗ್ರೆಸ್‌ ವತಿಯಿಂದ ಪ್ರತಿಭಟನಾ ರೂಪದಲ್ಲಿ ರಂಗೋಲಿ ಸ್ಪರ್ಧೆ ನಡೆಯಿತು.

Advertisement

ಗುರುವಾರ ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಸಮಾವೇಶಗೊಂಡ ಮೈಸೂರು ನಗರ ಮತ್ತು ಗ್ರಾಮಾಂತರ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರದ ನೂತನ ಕಾನೂನನ್ನು ರಂಗೋಲಿ ಬಿಡಿಸುವ ಮೂಲಕ ವಿರೋಧಿಸಿ, ಕೂಡಲೇ ಈ ಕಾನೂನನ್ನು ವಾಪಸ್‌ ಪಡೆಯುವಂತೆ ಒತ್ತಾಯಿಸಿದರು. ನಮ್ಮ ಪೌರತ್ವ ಸಾಬೀತುಪಡಿಸಬೇಕೆ: ಈ ಸಂದರ್ಭ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್‌, ದೇಶದಲ್ಲಿ ಈ ಕಾನೂನನ್ನು ಜಾರಿ ಮಾಡಬೇಕೋ, ಬೇಡವೋ ಎಂಬುದು ಮುಖ್ಯ ವಲ್ಲ. ನಾವೆಲ್ಲ ಈ ದೇಶದಲ್ಲೇ ಹುಟ್ಟಿ ಬೆಳೆದಿದ್ದೇವೆ. ಮತ ಚಲಾಯಿಸುವ ಹಕ್ಕು ಪಡೆದಿರುವ ನಾವು ನಮ್ಮ ಪೌರತ್ವ ಸಾಬೀತು ಪಡಿಸಬೇಕೆ ಎಂಬುದೇ ನಮ್ಮ ಪ್ರಶ್ನೆ. ಎಷ್ಟೋ ಜನ ಬೇರೆ ದೇಶಗಳಿಂದ ನಮ್ಮ ದೇಶಕ್ಕೆ ಬಂದಿದ್ದಾರೆ. ಅಂತಹವರಿಗೆಂದೇ ಡಿಟೇಷನ್‌ ಸೆಂಟರ್‌ ತೆರೆಯಲಾಗಿದೆ. ಅಸ್ಸಾಂನಲ್ಲಿ ಇದು ಅಪಾಯಕಾರಿಯಾಗಿ ಪರಿಣಮಿಸಿದ್ದು, ಅಲ್ಲಿನ ಜನ ದಂಗೆ ಎದ್ದಿದ್ದಾರೆ ಎಂದು ಕಿಡಿ ಕಾರಿದರು.

ಇಂಥ ಕಾನೂನುಗಳ ಅಗತ್ಯ ಇಲ್ಲ: ನಮಗೆ ಇಂತಹ ಕಾನೂನುಗಳ ಅಗತ್ಯ ಇಲ್ಲ. ನಮಗೆ ಬೇಕಿರುವುದು ತಿನ್ನಲು ಅನ್ನ, ಕುಡಿಯಲು ನೀರು, ಇರಲು ಮನೆ. ಆದರೆ ಕೇಂದ್ರ ಸರ್ಕಾರ ಇದ್ಯಾವುದನ್ನೂ ಕೊಡದೆ ಸಾರ್ವಜನಿಕರಿಗೆ ಅಪಾಯಕಾರಿಯಾಗಿರುವ ಕಾನೂನು ಜಾರಿಗೊಳಿಸುತ್ತಿದೆ. ಅಲ್ಲದೆ ಇಂದು ದೇಶ ದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಪ್ರತಿ ನಿಮಿಷ ಕ್ಕೊಂದು ಅತ್ಯಾಚಾರ, ಅನಾಚಾರ ನಡೆಯುತ್ತಿದೆ. ಆದರೆ ಕೇಂದ್ರ ಸರ್ಕಾರ ದೌರ್ಜನ್ಯವನ್ನೇ ಬೆಂಬಲಿಸುವ ಕೆಲಸ ಮಾಡುತ್ತಿದೆ.ಅಲ್ಲದೆ ಯುವಕರಿಗೆ ಉದ್ಯೋಗ ವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ದೇಶ ನಾನಾ ಸಮಸ್ಯೆಗಳಿಂದ ತತ್ತರಿಸುತ್ತಿದೆ. ಮೊದಲು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿ ಎಂದು  ಆಗ್ರಹಿಸಿದರು.

ಕಾನೂನನ್ನು ಹಿಂಡೆಯಿರಿ: ಆದಿವಾಸಿಗಳು, ಬುಡ ಕಟ್ಟು ಜನಾಂಗದವರು ಪೌರತ್ವ ಸಾಬೀತುಪಡಿಸಲು ತಮ್ಮ ದಾಖಲೆಗಳನ್ನು ಎಲ್ಲಿಂದ ನೀಡುತ್ತಾರೆ. ಉತ್ತರ ಕರ್ನಾಟಕದಲ್ಲಿ ನೆರೆ ಬಂದು ದಾಖಲೆಗಳೆಲ್ಲಾ ಕೊಚ್ಚಿ ಕೊಂಡು ಹೋಗಿವೆ. ಅವರು ಹೇಗೆ ಭಾರತೀಯ ರೆಂದು ಸಾಬೀತುಪಡಿಸಬೇಕು. ಕೇಂದ್ರ ಸರ್ಕಾರ ಹಿಡನ್‌ ಅಜೆಂಡಾ ಇಟ್ಟುಕೊಂಡು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ಕೂಡಲೇ ಇದನ್ನು ನಿಲ್ಲಿಸಬೇಕು ಎಂದರು.

ರಂಗೋಲಿ ಬಿಡಿಸುವ ಮೂಲಕ ಪ್ರತಿಭಟನೆ: ಇಂದು ಯುವತಿಯರ ಮನಸ್ಸಿನಲ್ಲಿ ಇರುವ ಪ್ರತಿಭಟನೆಯನ್ನು ರಂಗೋಲಿ ಮೂಲಕ ವ್ಯಕ್ತಪಡಿಸಲಾಗುತ್ತಿದೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳನ್ನೂ ಈ ರೀತಿಯ ಪ್ರತಿಭಟನೆ ಮಾಡಲಾಗುವುದು. ಕೇರಳದಲ್ಲಿ ರಂಗೋಲಿ ಬಿಡಿಸಿದರು ಎಂಬ ಕಾರಣಕ್ಕೆ ಐವರು ಮಹಿಳೆಯನ್ನು ಬಂಧಿಸಲಾಗಿದೆ. ಇಂದು ನೂರಾರು ಮಂದಿ ರಂಗೋಲಿ ಬಿಡಿಸಿದ್ದೇವೆ. ನಿಮಗೆ ತಾಕತಿದ್ದರೆ ನಮ್ಮನ್ನು ಜೈಲಿಗೆ ಹಾಕಿ ಎಂದು ಸವಾಲು ಹಾಕಿದರು. ಮೇಯರ್‌ ಪುಷ್ಪಾ ಜಗನ್ನಾಥ್‌, ಮಾಜಿ ಮೇಯರ್‌ ಪುಷ್ಪಲತಾ ಚಿಕ್ಕಣ್ಣ, ಸೇರಿದಂತೆ ಕಾಂಗ್ರೆಸ್‌ನ ಪಾಲಿಕೆ ಸದಸ್ಯೆಯರು, ಕಾರ್ಯ ಕರ್ತೆಯರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next