ಕಡೂರು: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂದೆ ಖಾಸಗಿ ಬಸ್‌ಗಳು ನಿಲುಗಡೆ ಮಾಡಿ ಪ್ರಯಾಣಿಕರನ್ನು ಸೆಳೆಯುತ್ತಿದ್ದು ಇದರಿಂದ ಸಾರಿಗೆ ಸಂಸ್ಥೆಗೆ ಲಕ್ಷಾಂತರ ರೂ. ನಷ್ಟ ಅನುಭವಿಸಬೇಕಾಗಿದೆ ಎಂದು ಕಡೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಂಚಾರ ನಿರೀಕ್ಷಕ ಲಿಂಗರಾಜು ಪೊಲೀಸರಿಗೆ ದೂರು ನೀಡಿದ್ದಾರೆ.
ಕಡೂರು ಬಸ್ ನಿಲ್ದಾಣದಿಂದ ಬಲಭಾಗದ ಗೇಟ್‌ನಲ್ಲಿ ಖಾಸಗಿ ವಾಹನಗಳ ಏಜೆಂಟರ್ ಮತ್ತು ಚಾಲಕರು ತಮ್ಮ ಖಾಸಗಿ ಬಸ್‌ಗಳನ್ನು ಗೇಟಿನ ಮುಂದೆ ಅಡ್ಡಲಾಗಿ ಪ್ರತಿದಿನವೂ ನಿಲ್ಲಿಸಿ ಹೊಸದುರ್ಗ, ಚಿತ್ರದುರ್ಗ, ಚನ್ನಗಿರಿ, ದಾವಣಗೆರೆ, ಅಜ್ಜಂಪುರ ಮತ್ತಿತರ ಗ್ರಾಮೀಣ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರನ್ನು ಕೂಗಿ ಕರೆದು ಬಸ್ ನಿಲ್ದಾಣದೊಳಗೆ ಬಂದು ಕರೆದುಕೊಂಡು ಹೋಗಿ ಹತ್ತಿಸಿಕೊಳ್ಳುತ್ತಿದ್ದು ಇದರ ಬಗ್ಗೆ ಸಾಕಷ್ಟು ಬಾರಿ ಖಾಸಗಿ ಬಸ್ ಏಜೆಂಟ್‌ಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜ ನವಾಗದಿದ್ದ ಕಾರಣ ಪೊಲೀಸರ ಮೊರೆ ಹೋಗಲಾಗಿದೆ ಎಂದರು. ಈ ರೀತಿ ನಿಲ್ದಾಣದ ಮುಂದೆ 45ಕ್ಕೂ ಹೆಚ್ಚಿನ ಬಸ್‌ಗಳು ಬಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವುದರಿಂದ ಸಾರಿಗೆ ಸಂಸ್ಥೆಗೆ ಅಪಾರ ನಷ್ಟವಾಗುತ್ತಿದೆ.
ಅಲ್ಲದೆ ಬಲಭಾಗದ ಗೇಟ್ ಮುಂದೆ ನಿಲ್ಲಿಸಿಕೊಳ್ಳುವುದರಿಂದ ಚಿಕ್ಕಮಗಳೂರು ಭಾಗದಿಂದ ಒಳ ಬರುವ ನಮ್ಮ ಸಂಸ್ಥೆಯ ಬಸ್‌ಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಬಸ್‌ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿಕೊಂಡು ಸಣ್ಣ ಪುಟ್ಟ ಅಪಘಾತಕ್ಕೂ ಕಾರಣರಾಗಿದ್ದಾರೆ. ಈ ಬಗ್ಗೆ ನಾವು ಮತ್ತು ನಮ್ಮ ಮೇಲಧಿ ಕಾರಿಗಳು ಅನೇಕ ಬಾರಿ ತಿಳುವಳಿಕೆ ಹೇಳಿದರೂ ಸಹ ಖಾಸಗಿ ಬಸ್ ಏಜೆಂಟರ್ ಮತ್ತು ಮಾಲೀಕರು ನಿರ್ಲಕ್ಷಿಸಿದ್ದಾರೆ ಎಂದು ದೂರಿದರು.
ಸರಕಾರಿ ಆದೇಶದ ಪ್ರಕಾರ ಖಾಸಗಿ ವಾಹನಗಳೂ ನಿಗಮದ ಕೇಂದ್ರ ಬಸ್ ನಿಲ್ದಾಣದಿಂದ 500 ಮೀಟರ್ ಅಂತರದಲ್ಲಿ ಖಾಸಗಿ ಬಸ್ ಮತ್ತು ಇತರೆ ವಾಹನಗಳನ್ನು ನಿಲ್ಲಿಸುವ ಆದೇಶವಿದ್ದರೂ ಅನಾವಶ್ಯಕವಾಗಿ ನಿಲ್ಲಿಸಿ ತೊಂದರೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಿಲ್ದಾಣದ ಮೇಲಧಿಕಾರಿಗಳು ನೀಡಿದ ದೂರಿನನ್ವಯ ಈಗಾಗಲೇ ಎರಡು ಬಸ್‌ಗಳಿಗೆ ದಂಡ ವಿಧಿಸಿದ್ದು ಸಭೆ ಮಾಡಿ ಎಚ್ಚರಿಕೆ ನೀಡಿದ್ದೇವೆ. ಇದು ಪುನರಾವರ್ತನೆಯಾದರೆ ಬಸ್ ಗಳನ್ನು ವಶಪಡಿಸಿಕೊಳ್ಳಲಾಗುವುದು.
-ರಮ್ಯಾ, ಕಡೂರು ಪಿಎಸ್‌ಐ