ಕೆಜಿಎಫ್: ಬೆಮಲ್ ಕಾರ್ಖಾನೆ ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರದ ವಿರುದ್ಧ ಬೆಮಲ್ ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ ಆರೋಪಿಸಿದರು.
ನಗರದಲ್ಲಿ ನಡೆದ ಗೇಟ್ ಮೀಟಿಂಗ್ ಮತ್ತು ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು ದೇಶದ ಆರ್ಥಿಕ ಬಲವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ. ರಕ್ಷಣಾ ಇಲಾಖೆಗೆ ಪ್ರಮುಖವಾದ ಉಪಕರಣಗಳನ್ನು ತಯಾರು ಮಾಡುವ ಶಕ್ತಿ ಇರುವ ಬೆಮಲ್ ಕಾರ್ಖಾನೆ 54 ವರ್ಷಗಳಿಂದ ಲಾಭದಾಯಕವಾಗಿಯೇ ನಡೆದುಕೊಂಡು ಬರುತ್ತಿದೆ. ಆದರೆ, ಕೇಂದ್ರ ಸರ್ಕಾರವು ಖಾಸಗೀಯವರ ಒತ್ತಡಕ್ಕೆ ಮಣಿದು ಖಾಸಗೀಕರಣ ಮಾಡಲು ಹೊರಟಿದೆ ಎಂದು ದೂರಿದರು.
ಈಗಾಗಲೇ ಸಾಕಷ್ಟು ಹೋರಾಟಗಳನ್ನು ಮಾಡಿರುವ ನಾವು, ಇತರ ಸಂಘಟನೆಗಳ ಸಹಕಾರ ಪಡೆದು ಹೋರಾಟ ಮುಂದುವರಿಸುವುದಾಗಿ ಹೇಳಿದರು.
ಬೆಂಗಳೂರು ವಿಭಾಗದ ಅಧ್ಯಕ್ಷ ದೊಮ್ಮಲೂರು ಶ್ರೀನಿವಾಸರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರವು ಬಂಡವಾಳ ಶಾಹಿಗಳಿಗೆ ಮಣೆ ಹಾಕುತ್ತಿದೆ. 47 ದೇಶಗಳಿಗೆ ಬೆಮಲ್ ಉತ್ಪನ್ನ ರಫ್ತಾಗುತ್ತಿದೆ. ಆದರೆ, ಕೇಂದ್ರ ಸರ್ಕಾರದ ನೀತಿಯಿಂದಾಗಿ ಕಾರ್ಮಿಕರು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರವು ತನ್ನ ನಿರ್ಧಾರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಬೆಂಗಳೂರು, ಪಾಲಕ್ಕಾಡ್ ಗಳಲ್ಲಿ ಕೂಡ ಧರಣಿ ಮತ್ತು ಗೇಟ್ ಮೀಟಿಂಗ್ ಮಾಡುವುದಾಗಿ ಹೇಳಿದರು.
ಮೈಸೂರು ವಿಭಾಗದ ಮುನಿನಾಗಪ್ಪ, ಗೋವಿಂದರಾಜು, ಪಾಷ, ಕಿರುಬಾಕರನ್, ಜಯಶೀಲನ್, ರಾಮಚಂದ್ರರೆಡ್ಡಿ, ಮರಡಿ ಮೊದಲಾದವರು ಇದ್ದರು.