ಬಲ್ಲಾಬ್‌ಗಡ/ನೂಹ್: ಹಿಂದೆಲ್ಲ ಕಲ್ಪಿಸಲೂ ಅಸಾಧ್ಯ ಎಂದೇ ಪರಿಗಣಿಸಲಾಗಿದ್ದ ಮಹತ್ವದ ನಿರ್ಧಾರಗಳನ್ನು ಭಾರತವು ಈಗ ಕೈಗೊಳ್ಳುತ್ತಿದೆ. ನಮಗೆ ಸಿಕ್ಕಿದ ಅಭೂತ ಪೂರ್ವಜನ ದೇಶದಿಂದಾಗಿ ಇಂಥ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹರ್ಯಾಣದ ಬಲ್ಲಾಬ್‌ಗಡದಲ್ಲಿ ಸೋಮವಾರ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಅವರು 370ನೇ ವಿಧಿ ರದ್ದು ಪ್ರಸ್ತಾಪಿಸಿ ಈ ಮಾತುಗಳನ್ನಾಡಿದ್ದಾರೆ. ಅಲ್ಲದೆ, ತಾಕತ್ತಿದ್ದರೆ ಪ್ರತಿ ಪಕ್ಷ ಕಾಂಗ್ರೆಸ್ ಈ ವಿಧಿಯನ್ನು ಪುನಸ್ಥಾಪಿಸುವುದಾಗಿ ಸಾರ್ವ ಜನಿಕವಾಗಿ ಘೋಷಿಸಲಿ ಎಂಬ ಸವಾಲನ್ನೂ ಹಾಕಿದ್ದಾರೆ. ರಾಜ್ಯ ದಲ್ಲಿ ಪ್ರತಿಪಕ್ಷಗಳು ಚೂರು ಚೂರಾಗುತ್ತಿದ್ದು, ಒಗ್ಗಟ್ಟಾಗುವ ಪ್ರಯತ್ನಗಳೂ ವಿಫಲವಾಗುತ್ತಿವೆ. ಆದರೆ ಬಿಜೆಪಿ ಬಲಿಷ್ಠ ತಂಡ ಹಾಗೂ ಸಿಎಂ ಖಟ್ಟರ್‌ರಂಥ ಬಲಿಷ್ಠ ಕ್ಯಾಪ್ಟನ್ ಅನ್ನೂ ಹೊಂದಿದೆ ಎಂದಿದ್ದಾರೆ.
ಮೋದಿ ಲೌಡ್‌ಸ್ಪೀಕರ್ ಎಂದ ರಾಹುಲ್: ಹರ್ಯಾಣದ ನೂಹ್‌ನಲ್ಲಿ ಪ್ರಚಾರ ರ್ಯಾಲಿ ನಡೆಸಿ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಪ್ರಧಾನಿ ಮೋದಿ ಅವರು ದೊಡ್ಡ ದೊಡ್ಡ ಉದ್ಯಮಿಗಳ ಲೌಡ್ ಸ್ಪೀಕರ್ ಆಗಿದ್ದಾರೆ. ಬಡವರ ಜೇಬಿನಿಂದ ಹಣ ಕಿತ್ತುಕೊಂಡು ಶ್ರೀಮಂತರ ಗೆಳೆಯರಿಗೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಮೋದಿ ಹಾಗೂ ಖಟ್ಟರ್ ನೈಜ ರಾಷ್ಟ್ರೀಯವಾದಿಗಳಾದರೆ, ಅವರೇಕೆ ಸಾರ್ವ ಜನಿಕ ವಲಯದ ಸಂಸ್ಥೆಗಳನ್ನು ಖಾಸಗಿಗೆ ಮಾರುತ್ತಿದ್ದಾರೆ ಎಂದೂ ರಾಹುಲ್ ಪ್ರಶ್ನಿಸಿದ್ದಾರೆ.
ಸೋನಿಯಾ ಬಗ್ಗೆ ಅವಹೇಳನ: ಚುನಾವಣಾ ಪ್ರಚಾರದ ವೇಳೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಅವಹೇಳನ ಮಾಡಿ ವಿವಾದಕ್ಕೆ ಸಿಲುಕಿ ದ್ದಾರೆ. ಸೋನಿಯಾ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಮರಳಿದ್ದರ ಕುರಿತು ಪ್ರಸ್ತಾಪಿಸಿದ್ದ ಖಟ್ಟರ್, ಸೋನಿಯಾ ಸತ್ತ ಇಲಿಯಿದ್ದಂತೆ ಎಂದು ಹೇಳಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, “ಮಹಿಳೆಯೊಬ್ಬರ ಕುರಿತ ಈ ಹೇಳಿಕೆಯು ಖಟ್ಟರ್ ಹಾಗೂ ಬಿಜೆಪಿಯ ಮನಸ್ಥಿತಿಯನ್ನು ತೋರಿಸಿಕೊಟ್ಟಿದೆ. ಇಂಥ ಹೇಳಿಕೆಗಾಗಿ ಖಟ್ಟರ್ ಕೂಡಲೇ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದೆ.
ನೀವು ವಿದ್ಯುನ್ಮಾನ ಮತಯಂತ್ರದಲ್ಲಿ ಕಮಲ ಚಿಹ್ನೆಯ ಗುಂಡಿ ಒತ್ತಿದರೆ, ಪಾಕಿಸ್ತಾನದ ಮೇಲೆ ಅಣು ಬಾಂಬ್ ಹಾಕಿದಂತೆಯೇ ಸರಿ.
ಕೇಶವ್ ಪ್ರಸಾದ್ ಮೌರ್ಯ, ಉ.ಪ್ರದೇಶ ಡಿಸಿಎಂ