Advertisement

ಸಿಎಂ ವಿರುದ್ಧ ಹಿಂದೆಂದೂ ಕಾಣದ ಜನ ವಿರೋಧ

08:15 AM Feb 11, 2018 | Team Udayavani |

ಉಡುಪಿ: ಮುಖ್ಯಮಂತ್ರಿಯೋರ್ವರ ವಿರುದ್ಧ ಹಿಂದೆಂದೂ ವ್ಯಕ್ತವಾಗದ ಜನವಿರೋಧ ಇಂದು ಸಿದ್ದರಾಮಯ್ಯ ಅವರ ಬಗ್ಗೆ ಕಂಡುಬರುತ್ತಿದೆ. ಸಿದ್ದರಾಮಯ್ಯನವರು ಪ್ರತಿಕ್ರಿಯಿಸುವ ರೀತಿ, ಭಾಷೆ ಮತ್ತು ಆಡಳಿತದ ಪ್ರತೀ ಹಂತದಲ್ಲಿಯೂ ಹೆಚ್ಚಾಗಿರುವ ಭ್ರಷ್ಟಾಚಾರದ ಬಗ್ಗೆ ಜನತೆ ಅಸಹ್ಯ
ಪಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪ್ರತೀ ಹಂತದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಜಾತಿ, ಧರ್ಮ ಒಡೆಯುವ ಷಡ್ಯಂತ್ರವನ್ನು ಸಿಎಂ ಮಾಡುತ್ತಿದ್ದಾರೆ ಎಂದರು. ರಾಹುಲ್‌ ದೇವಸ್ಥಾನ ಭೇಟಿ  ಚುನಾವಣೆ ಗಿಮಿಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಹೊಸಪೇಟೆಯಿಂದ ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇಷ್ಟು ದಿನಗಳ ಕಾಲ ಸಿದ್ದರಾಮಯ್ಯನವರು ಅವರಿವರು ಜೈಲಿಗೆ ಹೋದರು ಎಂದು ಹೇಳುತ್ತಿದ್ದರು, ಆದರೆ ಜೈಲಿಗೆ ಹೋದ ಆನಂದ್‌ ಸಿಂಗ್‌ ಅವರ ಕ್ಷೇತ್ರದಿಂದಲೇ ರಾಹುಲ್‌ ಪ್ರವಾಸ ಆರಂಭಿಸಿದ್ದಾರೆ. ಅವರು ರಾಜ್ಯಕ್ಕೆ ಈ ಹಿಂದೆ ಬಂದಿದ್ದಾಗ ಯಾವುದೇ ದೇವಸ್ಥಾನಕ್ಕೆ ಹೋಗಿರಲಿಲ್ಲ. ಸಿದ್ದರಾಮಯ್ಯ ಉಡುಪಿಗೆ ಬಂದರೂ ಕೃಷ್ಣ ಮಠಕ್ಕೆ ಹೋಗಿರಲಿಲ್ಲ. ಈಗ ಚುನಾವಣೆ ಬಂದಿರುವುದರಿಂದ ದೇವಸ್ಥಾನ, ಮಠಗಳಿಗೆ ಭೇಟಿ ನೀಡಲು ಮುಂದಾಗಿದ್ದಾರೆ. ಸಿಎಂಗೆ ಬುದ್ಧಿ ಹೇಳುವ ಕೆಲಸವನ್ನು ರಾಹುಲ್‌ ಮಾಡಲಿ ಎಂದು ಶೋಭಾ ಹೇಳಿದರು.

 ಕೆಲಸದಿಂದಲೇ ಉತ್ತರ 
ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನವರು ನನ್ನ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾನು ಬಾಯಿ ಮುಚ್ಚುವುದಿಲ್ಲ, ಕೆಲಸವನ್ನು ಕೂಡ ನಿಲ್ಲಿಸುವುದಿಲ್ಲ. ಉಡುಪಿ -ಚಿಕ್ಕಮಗಳೂರು ಕ್ಷೇತ್ರಕ್ಕೆ ರಸ್ತೆ, ರೈಲ್ವೇ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಬೇರೆ ಕ್ಷೇತ್ರಗಳಿಗಿಂತ ಹೆಚ್ಚಿನ ಅನುದಾನ ಬಿಡುಗಡೆಯಾಗಿ ಕೆಲವು ಕಾಮಗಾರಿಗಳು ಪೂರ್ಣಗೊಂಡಿವೆ, ಕೆಲವು ಪ್ರಗತಿಯಲ್ಲಿವೆ. 2016-17ನೇ ಸಾಲಿನಲ್ಲಿ ಕೇಂದ್ರ ರಸ್ತೆ ನಿಧಿಯಿಂದ ಉಡುಪಿ ಜಿಲ್ಲೆಗೆ 183.50 ಕೋ.ರೂ., 2017-18ನೇ ಸಾಲಿನಲ್ಲಿ 133 ಕೋ.ರೂ. ಬಿಡುಗಡೆಯಾಗಿದೆ. ಮಲ್ಪೆ-ತೀರ್ಥಹಳ್ಳಿ ರಸ್ತೆಯ ಅಭಿವೃದ್ಧಿಗೆ ಡಿಪಿಆರ್‌ ಆಗಿದೆ. ಕಾಮಗಾರಿಗೆ ವೇಗ ನೀಡಲು ಸೂಚಿಸಲಾಗಿದೆ. ಈ ಭಾಗದಲ್ಲಿ ಮಳೆ ಹೆಚ್ಚು ಬೀಳುವುದರಿಂದ ಉತ್ತಮ ಗುಣಮಟ್ಟದ ರಸ್ತೆಗಳಿಗಾಗಿ ಹೆಚ್ಚು ಅನುದಾನ ಒದಗಿಸುವಂತೆ ಕೇಂದ್ರ ಸಚಿವ ನಿತಿನ್‌ ಗಡ್ಕರಿಯವರಿಗೆ ಮನವಿ ಮಾಡಿದ್ದೆ. ಅದರಂತೆ ಅನುದಾನ ನೀಡಿದ್ದಾರೆ. “ಸಖೀ’ ಕೇಂದ್ರ ಉಡುಪಿಯಲ್ಲಿ ಸ್ಥಾಪನೆಯಾಗಿದ್ದು, ಸಚಿವೆ ಮೇನಕಾ ಗಾಂಧಿ ಮಾ. 5ರಂದು ಉದ್ಘಾಟಿಸಲಿದ್ದಾರೆ. ಪಡುಬಿದ್ರಿಯಲ್ಲಿ ಬಾಕಿ ಉಳಿದಿರುವ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಪೂರ್ಣ ಗೊಳಿಸಲು ಗುತ್ತಿಗೆದಾರರಿಗೆ ಮತ್ತೂಮ್ಮೆ ಸೂಚನೆ ನೀಡಲಾಗಿದೆ ಎಂದು ಶೋಭಾ ತಿಳಿಸಿದರು. 

ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಟ್ಟಾರು ರತ್ನಾಕರ ಹೆಗ್ಡೆ, ಶೀಲಾ ಕೆ. ಶೆಟ್ಟಿ, ಉದಯ ಕುಮಾರ್‌ ಶೆಟ್ಟಿ, ಸುಪ್ರಸಾದ್‌ ಶೆಟ್ಟಿ, ಶ್ಯಾಮಲಾ ಕುಂದರ್‌, ಕಿರಣ್‌ ಕುಮಾರ್‌, ರಂಜಿತ್‌ ಸಾಲ್ಯಾನ್‌, ಸಂಧ್ಯಾ ರಮೇಶ್‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮೀನುಗಾರರ ಸಮಾವೇಶಕ್ಕೆ  ಶಾ 
ಬಿಜೆಪಿ ರಾ. ಅಧ್ಯಕ್ಷ ಅಮಿತ್‌ ಶಾ ಫೆ. 19, 20 ಮತ್ತು 21ರಂದು ದ.ಕ., ಉಡುಪಿ ಮತ್ತು ಉ.ಕ. ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದು, 20ರಂದು ಸಂಜೆ 5 ಗಂಟೆಗೆ ಮಲ್ಪೆಯಲ್ಲಿ ಕರಾ ವಳಿ ಮೀನುಗಾರರ ಸಮಾವೇಶ ನಡೆಯಲಿದೆ. ಇದರಲ್ಲಿ ಶಾ ಭಾಗವಹಿಸು ವರು. ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆಯಿಂದ ಹೆಚ್ಚು ಬಲ ಬಂದಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next