Advertisement

ವಿರೋಧ ಪಕ್ಷಗಳ ವಾಚ್‌ಡಾಗ್‌ಗಳಾಗಿರುವ ಮಾಧ್ಯಮಗಳು

12:38 PM Apr 28, 2017 | Team Udayavani |

ಮೈಸೂರು: ಆಳುವವರ ವೈಫ‌ಲ್ಯಗಳನ್ನು ಹುಡುಕಿ ಜನತೆಯ ಮುಂದಿಡುವ ಕಾವಲು ನಾಯಿ (ವಾಚ್‌ಡಾಗ್ಸ್‌) ಗಳಾಗಬೇಕಿದ್ದ ಮಾಧ್ಯಮಗಳಿಂದು ವಿರೋಧ ಪಕ್ಷದ ತಪ್ಪುಗಳನ್ನೇ ಎತ್ತಿತೋರಿಸುತ್ತಿವೆ. ಈ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತರು ಜಾಗೃತ ರಾಗಬೇಕು ಎಂದು ಎಐಸಿಸಿ ವಕ್ತಾರ ಬ್ರಿಜೇಶ್‌ ಕಾಳಪ್ಪ ಹೇಳಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಕಾನೂನು ಮತ್ತು ಮಾನವ ಹಕ್ಕುಗಳ ಸಮಿತಿಯ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಪಾಳ್ಯ ಸುರೇಶ್‌ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ, 2010ರ ಅಣ್ಣಾ ಹಜಾರೆಯ ಚಳವಳಿ ನಂತರ ಎಲ್ಲಾ ಮಾಧ್ಯಮಗಳೂ ಕಾಂಗ್ರೆಸ್‌ ವಿರುದ್ಧವೇ ಮಾತನಾಡುತ್ತಿವೆ. ಕಾಂಗ್ರೆಸ್‌ ಪಕ್ಷ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿಯನ್ನು ಟೀಕೆ ಮಾಡುವುದೇ ಕೆಲಸವಾಗಿದೆ ಎಂದರು.

ಕೇಂದ್ರದಲ್ಲಿ ನರೇಂದ್ರಮೋದಿ ಅವರ ಸರ್ಕಾರ ಬಂದು ಮೂರು ವರ್ಷವಾಯಿತು. ಆ ಸರ್ಕಾರದ ವೈಫ‌ಲ್ಯಗಳನ್ನು ಹುಡುಕುವ ಬದಲಿಗೆ, ರಾಹುಲ್‌ ಗಾಂಧಿ ಎಲ್ಲಿ ಹೋದರು, ಸಂಸತ್‌ನಲ್ಲಿ ರಾಹುಲ್‌ ಏನು ಮಾಡುತ್ತಾರೆ ಎಂಬುದನ್ನಷ್ಟೇ ಮಾಡುತ್ತಿವೆ. ಈ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತರು ಜಾಗೃತರಾಗಿ ನಮ್ಮ ಪಕ್ಷದ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಬೇಕಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿದ್ದ ಪ್ರಣಾಳಿಕೆಯ ಭರವಸೆಗಳ ಪೈಕಿ ಕಳೆದ ನಾಲ್ಕು ವರ್ಷಗಳಲ್ಲಿ ಶೇ.85ರಷ್ಟು ಭರವಸೆಗಳನ್ನು ಈಡೇರಿಸಿದೆ. ಆದರೆ, ಮೋದಿ ಸರ್ಕಾರ ಬಂದು ಮೂರು ವರ್ಷ ವಾದರೂ ಪ್ರಣಾಳಿಕೆಯ ಶೇ.5ರಷ್ಟೂ ಭರವಸೆ ಈಡೇರಿಲ್ಲ. ಬದಲಿಗೆ ವಾಲ್‌ ಪೋಸ್ಟರ್‌ ಬದಲಾಯಿಸಿದಂತೆ ದಿನಕ್ಕೊಂದು ಹೊಸ ವಿಚಾರ ಹೇಳುತ್ತಾ ಹೊರಟಿದ್ದಾರೆ ಎಂದು ಟೀಕಿಸಿದರು.

ಯಡಿಯೂರಪ್ಪ ಅವರ ಮಿಷನ್‌ 150 ಹೇಗೆ ಸಾಧ್ಯ ಎಂದು ಬಿಜೆಪಿ ಹೈಕಮಾಂಡ್‌ ವರದಿ ಕೇಳಿದ್ದು, ಅದೀಗ ಮಿಷನ್‌ 50 ಆಗಿದೆ. ಹೀಗಾಗಿ ಮುಂದೆ ಯಡಿಯೂರಪ್ಪ ಅವರು ವಿರೋಧಪಕ್ಷದ ನಾಯಕರಾಗಬೇಕಾಗುತ್ತದೆ ಎಂದು ಲೇವಡಿ ಮಾಡಿದರು.

Advertisement

ಸಂಸದ ಆರ್‌. ಧ್ರುವನಾರಾಯಣ್‌ ಮಾತನಾಡಿ, ಪಕ್ಷದ ಮುಖಂಡರು, ಕಾರ್ಯ ಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ನಮ್ಮ ಪರವಾದ ಫ‌ಲಿತಾಂಶ ಬಂದೇ ಬರುತ್ತದೆ ಎಂಬುದಕ್ಕೆ ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಗಳ ಫ‌ಲಿತಾಂಶವೇ ಸಾಕ್ಷಿ. ಸಂಘಟಿತ ಪ್ರಯತ್ನದ ಫ‌ಲವಾಗಿ ಈ ಉಪ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತು. ಜತೆಗೆ ಅಭ್ಯರ್ಥಿ ಆಯ್ಕೆ ಕೂಡ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು ಎಂದರು.

ಕಾಂಗ್ರೆಸ್‌ನಲ್ಲಿ ಸಾಕಷ್ಟು ವಿಭಾಗಗಳಿವೆ. ಕಷ್ಟಪಟ್ಟು ಕೆಲಸ ಮಾಡಿದರೆ ಪಕ್ಷದ ಸಂಘಟನೆ ಸಾಧ್ಯ. ಪಕ್ಷಕ್ಕಿಂತ ನಾವ್ಯಾರೂ ದೊಡ್ಡವರಲ್ಲ. ಪಕ್ಷ ಕಟ್ಟಿದರೆ ಅವಕಾಶಗಳು ಸಿಕ್ಕೇ ಸಿಗುತ್ತವೆ ಎಂದು ಹೇಳಿದರು. ವಿಧಾನಪರಿಷತ್‌ ಸದಸ್ಯ ಆರ್‌. ಧರ್ಮಸೇನ, ರಾಜ್ಯ ಕಾಂಗ್ರೆಸ್‌ ಕಾನೂನು ಮತ್ತು ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಧನಂಜಯ, ಕರ್ನಾಟಕ ಬಾರ್‌ ಕೌನ್ಸಿಲ್‌ ಅಧ್ಯಕ್ಷ ಸಿ.ಎಂ. ಜಗದೀಶ್‌, ಮುಖಂಡರಾದ ಮಂಜುಳಾ ಮಾನಸ, ಕವೀಶ್‌ ಗೌಡ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ. ಬಿ.ಜೆ.ವಿಜಯಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next