ನವದೆಹಲಿ: ಮಣಿಪುರದಲ್ಲಿ ಎರಡು ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಬಗ್ಗೆ ಸಮಗ್ರ ಹೇಳಿಕೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಮೈತ್ರಿಕೂಟ ಐಎನ್ ಡಿಎಐ(ಇಂಡಿಯಾ) ಮುಂಗಾರು ಅಧಿವೇಶನದ ಮೂರನೇ ದಿನ ಸಂಸತ್ ಭವನದ ಎದುರು ಇರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಅಹೋರಾತ್ರಿ ಮೌನ ಪ್ರತಿಭಟನೆ ನಡೆಸಿದರು.
ಮಣಿಪುರ ಪ್ರಕರಣದ ವಿಚಾರವಾಗಿ ಪ್ರಧಾನಮಂತ್ರಿ ಅವರು ಸಂಸತ್ ನಲ್ಲಿ ಹೇಳಿಕೆ ನೀಡಬೇಕೆಂದು ಆಗ್ರಹಿಸಿ ಸೋಮವಾರವೂ ಸಂಸತ್ ನಲ್ಲಿ ಗದ್ದಲ ಎಬ್ಬಿತ್ತು ಈ ವೇಳೆ ಅಶಿಸ್ತಿನ ವರ್ತನೆ ತೋರಿದ ಆಪ್ ಸಂಸದ ಸಂಜಯ್ ಸಿಂಗ್ ಅವರನ್ನು ಸಭಾಧ್ಯಕ್ಷರು ಅಮಾನತುಗೊಳಿಸಿದ್ದರು.
ಸೋಮವಾರ ರಾತ್ರಿ ಸಂಸತ್ ಭವನದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಪಕ್ಷಗಳ ಒಕ್ಕೂಟದ ಸಂಸದರು ಜಮಾಯಿಸಿ ಪ್ರತಿಭಟನೆ ಆರಂಭಿಸಿದರು. ‘ಇಂಡಿಯಾ ಫಾರ್ ಮಣಿಪುರ’ ಎಂಬ ಫಲಕಗಳನ್ನು ಹಿಡಿದು ಸಂಸದರು ಮೌನ ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂದಿತು.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಚರ್ಚಿಸಲು ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಸಂಸತ್ತಿನ ಹೊರಗೆ ಮತ್ತು ಒಳಗೆ ಚರ್ಚೆ ನಡೆಯುತ್ತಿದೆ. ಇದರಿಂದಾಗಿ ಸತತ ಮೂರನೇ ದಿನವೂ ಸಭಾಧ್ಯಕ್ಷರು ಸಂಸತ್ ಕಲಾಪವನ್ನು ಮುಂದೂಡಿದ್ದಾರೆ. ಇದರ ವಿರುದ್ಧ ಸೋಮವಾರ ರಾತ್ರಿಯಿಡೀ ಸಂಸತ್ತಿನ ಎದುರಿನ ಆವರಣದಲ್ಲಿ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆಯನ್ನು ನಡೆಸಿದರು.
ಮಣಿಪುರ ಹಿಂಸಾಚಾರದ ಕುರಿತು ಸದನದಲ್ಲಿ ಹೇಳಿಕೆ ನೀಡುವಂತೆ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಬೇಕೆಂದು ಆಗ್ರಹಿಸಿವೆ.
ಇದನ್ನೂ ಓದಿ: Heavy rain Hosapete: 4 ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಿಸಿದ ಡಿಸಿ ದಿವಾಕರ ಎಂ.ಎಸ್.