Advertisement

“ಕೈ’ಗೆ ಪ್ರತಿಪಕ್ಷ ನಾಯಕನ ಆಯ್ಕೆ ಕಗ್ಗಂಟು

11:32 PM Sep 13, 2019 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರತಿಪಕ್ಷ ನಾಯಕನ ಸ್ಥಾನವೀಗ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದ್ದು, ಹೈಕಮಾಂಡ್‌ ಇಕ್ಕಟ್ಟಿನಲ್ಲಿ ಸಿಲುಕಿದೆ. ಕಾಂಗ್ರೆಸ್‌ ಶಾಸ ಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅನಿವಾರ್ಯ ಕಾರಣಗಳಿಗಾಗಿ ಪ್ರಬಲರಾಗುತ್ತಾ ಹೋಗುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಅಸ್ತಿತ್ವಕ್ಕಾಗಿ ಪರದಾಡುತ್ತಿದ್ದು, ರಾಜ್ಯದಲ್ಲಿ ಬಿಜೆಪಿಯನ್ನು ನೇರವಾಗಿ ಎದುರಿಸುವ ಪ್ರಬಲ ಪ್ರತಿಪಕ್ಷವಾಗಬೇಕೆಂದರೆ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಅನಿವಾರ್ಯ ಎಂಬ ವಾತಾವರಣ ಸೃಷ್ಠಿಯಾಗುತ್ತಿದೆ.

Advertisement

ರಾಜ್ಯದಲ್ಲಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪೂರ್ಣ ಅವಧಿ ಪೂರೈಸುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿರುವುದರಿಂದ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದರೆ, ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ಅನಿವಾರ್ಯ ಎಂಬ ಮಾತುಗಳು ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ, ಹೈಕಮಾಂಡ್‌ ಕೂಡ ಸಿದ್ದರಾಮಯ್ಯ ಅವರನ್ನು ಸುಲಭವಾಗಿ ಬಿಟ್ಟು ಕೊಡಲಾರದ ಸ್ಥಿತಿಗೆ ತಲುಪಿದೆ ಎನ್ನಲಾಗುತ್ತಿದೆ.

ಪ್ರತಿ ಪಕ್ಷ ನಾಯಕನ ಸ್ಥಾನಕ್ಕೆ ಕಸರತ್ತು: ಹೇಗಾದರೂ ಮಾಡಿ ಪ್ರತಿಪಕ್ಷ ಸ್ಥಾನ ಪಡೆಯಬೇಕೆಂದು ಸಿದ್ದರಾಮಯ್ಯ ಕಸರತ್ತು ಮುಂದುವರಿಸಿದ್ದು, ಅವರಿಗೆ ಸ್ಥಾನ ತಪ್ಪಿಸಲು ಮೂಲ ಕಾಂಗ್ರೆಸ್ಸಿಗರೂ ಅಷ್ಟೇ ಪ್ರಬಲವಾಗಿ ಹೈಕಮಾಂಡ್‌ ಮುಂದೆ ವಾದ ಮಂಡಿಸಿದ್ದಾರೆ. ಸಿದ್ದರಾಮಯ್ಯನವರು ಕಾಂಗ್ರೆಸ್‌ಗೆ ಬಂದಾಗಿನಿಂದಲೂ ಪ್ರತಿಪಕ್ಷ ನಾಯಕನ ಸ್ಥಾನ, ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಈಗಲೂ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸರ್ಕಾರವನ್ನೂ ಸಂಪೂರ್ಣ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ನಡೆಸಿದ್ದರು.

ಹೀಗಾಗಿ, ಅವರಿಗೆ ಈಗ ಈ ಹುದ್ದೆ ಬೇಡ ಎನ್ನುತ್ತಿದ್ದಾರೆ ಎನ್ನಲಾಗಿದೆ. ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌, ಮಾಜಿ ಸಚಿವರಾದ ಕೃಷ್ಣ ಬೈರೇಗೌಡ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೇರಿದಂತೆ ಕೆಲವು ನಾಯಕರು ಸಿದ್ದರಾಮಯ್ಯ ಪರ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಮಧ್ಯೆ, ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಕೂಡ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಅವರೀಗ ಜಾರಿ ನಿರ್ದೇಶನಾಲಯದ ವಶದಲ್ಲಿರುವುದರಿಂದ ಸಿದ್ದುಗೆ ಪ್ರಬಲ ಸ್ಪರ್ಧಿ ಇಲ್ಲದಂತಾಗಿದೆ ಎನ್ನಲಾಗಿದೆ.

ಎಚ್‌ಕೆಪಿ ಕಣ್ಣು: ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಕೂಡ ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು, ಮೂಲ ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌.ಮುನಿಯಪ್ಪ, ಎಂ.ವೀರಪ್ಪ ಮೊಯ್ಲಿ, ಬಿ.ಕೆ. ಹರಿಪ್ರಸಾದ್‌ ಮೂಲಕ ಹೈ ಕಮಾಂಡ್‌ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ, ಪ್ರತಿಪಕ್ಷ ನಾಯಕನ ಸ್ಥಾನ ಈಗ ಎರಡೂ ಬಣದವರಿಗೂ ಪ್ರತಿಷ್ಠೆಯಾಗಿದ್ದು, ಕಾಂಗ್ರೆಸ್‌ ಹೈ ಕಮಾಂಡ್‌ ಇಕ್ಕಟ್ಟಿನಲ್ಲಿ ಸಿಲುಕಿದಂತಾಗಿದೆ.

Advertisement

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ?: ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕೂಡ ಸಿದ್ದರಾಮಯ್ಯ ಅವರ ಸೂಚನೆ ಯಂತೆ ನಡೆಯುತ್ತಿದ್ದಾರೆಂಬ ಆರೋಪ ಇರುವುದರಿಂದ ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ಮಾಡಲು ಹೈಕಮಾಂಡ್‌ ಮುಂದಾದರೆ, ಕೆಪಿಸಿಸಿ ಅಧ್ಯಕ್ಷರನ್ನಾದರೂ ಬದಲಾಯಿಸಬೇಕೆಂಬ ಆಗ್ರಹವೂ ಕೇಳಿ ಬರುವ ಸಾಧ್ಯತೆ ಇದೆ.

ಸೋನಿಯಾ ನಿರ್ಧಾರ ಕಷ್ಟ: ರಾಹುಲ್‌ ಗಾಂಧಿ ಎಐಸಿಸಿ ಅಧ್ಯಕ್ಷರಾಗಿದ್ದರೆ, ಪ್ರತಿಪಕ್ಷ ನಾಯಕನ ಸ್ಥಾನವನ್ನು ಸಿದ್ದರಾಮಯ್ಯಗೆ ನೀಡುವ ವಿಚಾರ ಇಷ್ಟೊತ್ತಿಗೆ ಇತ್ಯರ್ಥವಾ ಗುತ್ತಿತ್ತು. ಆದರೆ, ಸೋನಿಯಾ ಗಾಂಧಿ ಯಾವುದೇ ವಿಷಯ ವಾಗಿ ಏಕಮುಖ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂಬ ಮಾತುಗಳು ಕಾಂಗ್ರೆಸ್‌ನಲ್ಲಿ ಕೇಳಿ ಬರುತ್ತಿವೆ. ಅದೇ ಕಾರಣಕ್ಕೆ ಸಿದ್ದರಾಮಯ್ಯನವರು ದೆಹಲಿಯಲ್ಲಿ ಸೋನಿಯಾ ಗಾಂಧಿ ಆಪ್ತ ನಾಯಕರನ್ನು ಭೇಟಿ ಮಾಡಿ, ಅವರಿಗೂ ತಮ್ಮ ಪರ ಲಾಬಿ ನಡೆಸಲು ಮನವಿ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.

ಪದಾಧಿಕಾರಿಗಳ ಪಟ್ಟಿ ಒಪ್ಪಿಗೆಗೆ ಕಸರತ್ತು: ಲೋಕಸಭಾ ಚುನಾವಣೆ ಫ‌ಲಿತಾಂಶದ ನಂತರ ತರಾತುರಿ ಯಲ್ಲಿ ಅಧ್ಯಕ್ಷ, ಕಾರ್ಯಾಧ್ಯಕ್ಷರನ್ನು ಹೊರತು ಪಡೆಸಿ ಕೆಪಿಸಿಸಿ ವಿಸರ್ಜಿಸುವಲ್ಲಿ ಯಶಸ್ವಿಯಾಗಿರುವ ಸಿದ್ದರಾಮಯ್ಯ, ಈಗ ಹೊಸ ಪದಾಧಿಕಾರಿಗಳ ಪಟ್ಟಿಗೆ ಒಪ್ಪಿಗೆ ಪಡೆಯಲು ದಿನೇಶ್‌ ಗುಂಡೂರಾವ್‌ ಮೂಲಕ ಪ್ರಯತ್ನ ನಡೆಸಿದ್ದಾರೆ ಎನ್ನಲಾಗು ತ್ತಿದೆ. ಇವರು ಸಿದ್ದಪಡಿಸಿದ್ದ ಪಟ್ಟಿಗೂ ರಾಜ್ಯದ ಅನೇಕ ಹಿರಿಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಒಂದು ಬಾರಿ ಪಟ್ಟಿ ಪರಿಷ್ಕರಿಸುವಂತೆ ಹೈ ಕಮಾಂಡ್‌ ವಾಪಸ್‌ ಕಳುಹಿಸಿತ್ತು. ಈಗ ಮತ್ತೆ ಪಟ್ಟಿಯನ್ನು ಪರಿಷ್ಕರಿಸಿ ಹೈಕಮಾಂಡ್‌ ಒಪ್ಪಿಗೆಗೆ ತೆಗೆದುಕೊಂಡು ಹೋಗಿದ್ದರು. ಆದರೆ ಈ ಬಾರಿಯೂ ಮನ್ನಣೆ ಸಿಕ್ಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next