Advertisement

ಸುಪ್ರೀಂ ನ್ಯಾಯಾಧೀಶರಿಂದ ತನಿಖೆ ಮಾಡಿಸಿ: ಸಿದ್ದರಾಮಯ್ಯ ಆಗ್ರಹ

12:23 AM Feb 15, 2023 | Shreeram Nayak |

ವಿಧಾನಸಭೆ ಬಿಜೆಪಿ ಸರಕಾರದ ವಿರುದ್ಧ ವ್ಯಕ್ತವಾಗಿರುವ 40% ಕಮಿಷನ್‌ ಆರೋಪವೂ ಸೇರಿ 2008ರಿಂದ ಇಲ್ಲಿಯವರೆಗಿನ ಎಲ್ಲ ಪ್ರಕರಣಗಳನ್ನೂ ಸುಪ್ರೀಂಕೋರ್ಟ್‌ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರಕಾರವನ್ನು ಒತ್ತಾಯಿಸಿದರು.

Advertisement

ವಂದನ ನಿರ್ಣಯದ ಭಾಷಣ ಸಂದರ್ಭ ಸರಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಅವರು, 40% ಕಮಿಷನ್‌ ಆರೋಪದ ಬಗ್ಗೆ ಚರ್ಚೆ ನಡೆಸಲು ಅವಕಾಶ ಕೋರಿದರು. ಇದಕ್ಕೆ ಸಚಿವರಾದ ಆರ್‌. ಅಶೋಕ, ಮಾಧುಸ್ವಾಮಿ, ಅಶ್ವತ್ಥ ನಾರಾಯಣ ಸೇರಿ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದರೂ ಲೆಕ್ಕಿಸದ ಸಿದ್ದರಾಮಯ್ಯ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣ ಪ್ರಸ್ತಾಪಿಸಿದಾಗ “ಪ್ರಕರಣ ಇತ್ಯರ್ಥವಾಯ್ತಲ್ಲ’ ಎಂದು ಮಾಧುಸ್ವಾಮಿ ವಿವಾದವನ್ನು ತೇಲಿಸಲು ಯತ್ನಿಸಿದರು.

ಸಿದ್ದರಾಮಯ್ಯ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣ­ದಲ್ಲಿ ನೀವು ಹೀಗೆ ನಡೆದುಕೊಂಡಿದ್ದೀರಾ? ನಾನು ಆ ಪ್ರಕರಣವನ್ನು ಸಿಬಿಐಗೆ ಕೊಟ್ಟಿರಲಿಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಕೆ.ಜೆ.ಜಾರ್ಜ್‌, ಗಣಪತಿ ಪ್ರಕರಣದಲ್ಲಿ ನನ್ನನ್ನು ವಿನಾ ಕಾರಣ ತೇಜೋವಧೆ ಮಾಡಿದ್ದೀರಿ. ಈಗ ಈ ರೀತಿ ಮಾತನಾಡುವುದಕ್ಕೆ ಆತ್ಮಸಾಕ್ಷಿ ಕಾಡುವುದಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಕೆರಳಿದ ಮಾಧುಸ್ವಾಮಿ ಇತ್ಯರ್ಥ­ವಾದ ಪ್ರಕರಣ ವನ್ನು ಮುಂದಿಟ್ಟುಕೊಂಡು ಚರ್ಚಿಸುವು ದಾದರೆ ನಾವು ಗಣಪತಿ ಆತ್ಮಹತ್ಯೆ ಪ್ರಕರಣ ಪ್ರಸ್ತಾಪಿಸಬಹುದು. ಹಾಗೆ ಮಾಡಿದರೆ ನ್ಯಾಯಾಲಯ, ತನಿಖೆ ಸಂಸ್ಥೆಗಳನ್ನು ಪ್ರಶ್ನಿಸದಂತೆ ಆಗುತ್ತದೆ. ಈ ರೀತಿ ಪಾಳೆಗಾರಿಕೆ, ಮದಕರಿ ನಾಯಕ ಇತ್ಯಾದಿ ಹೇಳಿಕೆಗಳ ಚರ್ಚೆ ಬೇಡ. ಆತ್ಮಸಾಕ್ಷಿಯ ಬಗ್ಗೆ ನೀವು ಮಾತನಾಡುವುದು ಎಂದರೆ “ಪರಪ್ಪನ ಅಗ್ರಹಾರದಲ್ಲಿ ಹರಿಶ್ಚಂದ್ರ ನಾಟಕ ಮಾಡಿದಂತಾಗುತ್ತದೆ’ ಎಂದು ವ್ಯಂಗ್ಯವಾಡಿದರು.

ಸದನದಲ್ಲಿ ಸಿದ್ದು ಹಿಂದುತ್ವದ ಜಪ
ನಾನು ಹಿಂದು, ನಾನು ಕೂಡಾ ಒಬ್ಬ ಹಿಂದು. ನಾನು ದೇವರ ವಿರೋಧಿಯೂ ಅಲ್ಲ. ಡಿಸೆಂಬರ್‌ ತಿಂಗಳಿನಿಂದ ನಾನು ಮಾಂಸಾಹಾರ ಸೇವನೆಯನ್ನೂ ಬಿಟ್ಟಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳಿದ್ದಾರೆ. ವಿನಾ ಕಾರಣ ಸಿದ್ದರಾಮಯ್ಯ ಹಿಂದು ವಿರೋಧಿ ಎಂದು ಬಿಂಬಿಸಲು ಹೋಗುತ್ತಾರೆ. ನಾನು ದೇವರ ವಿರೋಧಿಯಲ್ಲ. ನಾನು ಕೂಡಾ ಹಿಂದು. ನಾನು ಹಿಂದು ಅಲ್ಲವಾದರೆ ನನ್ನ ತಂದೆ-ತಾಯಿ ಸಿದ್ದರಾಮಯ್ಯ ಎಂದು ಏಕೆ ಹೆಸರಿಡುತ್ತಿದ್ದರು? ಮನುವಾದ, ಪುರೋಹಿತ ಶಾಹಿತ್ವ ಈ ದೇಶಕ್ಕೆ ಶಾಪ ಎಂದು ವಿವೇಕಾನಂದರು ಹೇಳಿದ್ದರು. ನಾನು ಗಾಂಧಿ, ವಿವೇಕಾನಂದರು ಪ್ರತಿಪಾದಿಸಿದ ಹಿಂದುತ್ವದಲ್ಲಿ ನಂಬಿಕೆ ಇಟ್ಟಿದ್ದೇನೆ ಎಂದರು. ನೀವು ಮನುವಾದ, ಪುರೋಹಿತಶಾಹಿತ್ವ ಎನ್ನುವಾಗ ದೇಶಪಾಂಡೆ ಹಾಗೂ ದಿನೇಶ್‌ ಗುಂಡೂರಾವ್‌ ಮುಖ ಏಕೆ ನೋಡುತ್ತೀರಿ? ಎಂದು ಕಂದಾಯ ಸಚಿವ ಆರ್‌.ಅಶೋಕ ವ್ಯಂಗ್ಯವಾಡಿದರು.

Advertisement

ಅದೇ ರೀತಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲು ವಿಚಾರವನ್ನೂ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಮೈತ್ರಿ ಸರ್ಕಾರದ ಕಾಲದಲ್ಲಿ ನಾಗಮೋಹನ್‌ ದಾಸ್‌ ಸಮಿತಿ ರಚನೆ ಮಾಡಲಾಗಿತ್ತು. ನಿಮ್ಮ ಸರ್ಕಾರ ಬಂದ ಬಳಿಕ ಎರಡು ವರ್ಷ ಏನು ಮಾಡಲಿಲ್ಲ. ಈಗ ಚುನಾವಣಾ ಹೊಸ್ತಿಲಲ್ಲಿ ಕೇಂದ್ರಕ್ಕೆ ಪ್ರಸ್ತಾಪ ಕಳಹಿಸಿದ್ದೀರಿ. ಅದು ಅಂಗೀಕಾರವಾಗಿಲ್ಲ. ಹೀಗಾಗಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯೋಣ ಎಂದು ಒತ್ತಾಯಿಸಿದರು.

ನನ್ನ ವಿರುದ್ಧ ಪಿಎಫ್ಐ ಪೋಷಕ ಎಂದು ವಿನಾ ಕಾರಣ ಆರೋಪ ಮಾಡಲಾಗುತ್ತಿದೆ. ಆದರೆ ನಿಮ್ಮ ಸರ್ಕಾರ ಏಕೆ ಎಸ್‌ಡಿಪಿಐ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ? ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next