ಪಾಟ್ನಾ: ಇಲ್ಲಿ ಶುಕ್ರವಾರ ನಡೆಯಲಿರುವ ಮಹತ್ವದ ಪ್ರತಿಪಕ್ಷ ನಾಯಕರ ಸಭೆಗೆ ಒಂದು ದಿನ ಮೊದಲು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಸಂಜೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದರು.
ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಬ್ಯಾನರ್ಜಿ ಅವರೊಂದಿಗೆ ಸೋದರಳಿಯ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಇದ್ದರು.
ತೃಣಮೂಲ ಕಾಂಗ್ರೆಸ್ ಸಭೆಯ ಚಿತ್ರಗಳನ್ನು ಹಂಚಿಕೊಂಡಿದ್ದು, ನಾಯಕರು “ಜನರ ಪ್ರಗತಿ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ” ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ಹೇಳಿದೆ.
ಇದಕ್ಕೂ ಮುನ್ನ ಮಮತಾ ಬ್ಯಾನರ್ಜಿ ಅವರು ಆರ್ ಜೆಡಿ ಲಾಲು ಪ್ರಸಾದ್ ಯಾದವ್, ಬಿಹಾರ ಮಾಜಿ ಸಿಎಂ ರಾಬ್ರಿ ದೇವಿ ಮತ್ತು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಭೇಟಿ ಮಾಡಿದ್ದರು.
ಮಮತಾ ಬ್ಯಾನರ್ಜಿ, “ನಾವು ಒಟ್ಟಿಗೆ ಹೋರಾಡುತ್ತೇವೆ ಎಂದು ಇಲ್ಲಿಗೆ ಬಂದಿದ್ದೇವೆ, ನಾವು ಕುಟುಂಬದಂತೆ ಹೋರಾಡುತ್ತೇವೆ” ಎಂದು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಪ್ರತಿಪಕ್ಷಗಳ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.