ಬೆಳಗಾವಿ: ಮಂಗಳೂರು ಸೇರಿದಂತೆ ದೇಶದ ಅನೇಕ ಕಡೆ ನಡೆದಿರುವ ಗಲಭೆಗಳ ಹಿಂದೆ ವಿರೋಧ ಪಕ್ಷಗಳ ಕೈವಾಡವಿದೆ. ವಿರೋಧ ಪಕ್ಷಗಳ ನಾಯಕರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಆರೋಪಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಚಿವ ಯು.ಟಿ.ಖಾದರ್, ಜವಾಬ್ದಾರಿಯುತ ನಾಯಕರು. ಒಂದು ವೇಳೆ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದರೆ ಸರ್ಕಾರ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಬೆಳಗಾವಿಯಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಯಾರು ಪ್ರತಿಭಟನೆ ಮಾಡಿದರೋ ಅವರು ನುಸುಳುಕೋರರನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲಿ ಎಂದು ಪರೋಕ್ಷವಾಗಿ ಮಾಜಿ ಶಾಸಕ ಫಿರೋಜ್ ಸೇಠ್‌ಗೆ ತಿರುಗೇಟು ನೀಡಿದರು.
ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕು ಎಂಬ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಪೌರತ್ವ ಕಾಯ್ದೆ ದೇಶದಲ್ಲಿರುವ ಯಾವುದೇ ಮುಸ್ಲಿಮರಿಗೆ ತೊಂದರೆ ಉಂಟು ಮಾಡುವುದಿಲ್ಲ. ಆದರೆ, ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದ ವಿರೋಧಿಗಳು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯದ ನಿರಾಶ್ರಿತರಿಗೆ ಆಶ್ರಯ ನೀಡುವುದು ಪೌರತ್ವ ಕಾಯ್ದೆಯ ಉದ್ದೇಶ. ಇದರಿಂದ ಭಾರತೀಯರಿಗೆ ಯಾವುದೇ ತೊಂದರೆಯಿಲ್ಲ.
-ಸಿ.ಟಿ.ರವಿ, ಸಚಿವ