Advertisement

ಬಿಜೆಪಿಯಿಂದ ಪ್ರತಿಪಕ್ಷ ಮುಕ್ತ ಭಾರತ: ಈಶ್ವರ್‌ ಖಂಡ್ರೆ

12:08 AM Jul 23, 2019 | Lakshmi GovindaRaj |

ವಿಧಾನಸಭೆ: ಶಾಸಕರು ಸ್ವಾರ್ಥ, ಹಣ, ಸಾಲ ಮರುಪಾವತಿ, ಅಧಿಕಾರದ ಆಸೆಗೆ ರಾಜೀನಾಮೆ ನೀಡಿದ್ದಾರೆಯೇ ಅಥವಾ ಜಾರಿ ನಿರ್ದೇಶನ, ಐಟಿ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್‌ಗೆ ಹೆದರಿ ರಾಜೀನಾಮೆ ನೀಡಿದ್ದಾರೆಯೇ ಎಂಬುದು ಗೊತ್ತಾಗಬೇಕಿದೆ. ಇಂತಹ ಬೆಳವಣಿಗೆಯಿಂದ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ ಎಂದು ಕಾಂಗ್ರೆಸ್‌ ಶಾಸಕ ಈಶ್ವರ್‌ ಖಂಡ್ರೆ ಹೇಳಿದರು.

Advertisement

ಸೋಮವಾರ ಮಧ್ಯಾಹ್ನ ಭೋಜನಾನಂತರದ ಕಲಾಪದಲ್ಲಿ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಬಿಜೆಪಿ ಆರಂಭಿಸಿರುವ “ಆಪರೇಷನ್‌ ಕಮಲ’ ಶಾಪವಾಗಿ ಪರಿಣಮಿಸಿದೆ. ಇದರಿಂದ ದೇಶಾದ್ಯಂತ ರಾಜ್ಯದ ಮರ್ಯಾದೆ ಹರಾಜಾಗುತ್ತಿದೆ. ರಾಜೀನಾಮೆ ನೀಡಿರುವ ಶಾಸಕರಿಗೆ ಮುಂಬೈನಲ್ಲಿ ರಾಜಾತಿಥ್ಯ ನೀಡಲಾಗುತ್ತಿದ್ದು, ಅವರು ಹೆಂಡತಿ, ಮಕ್ಕಳು, ಜನರ ಸಂಪರ್ಕಕ್ಕೆ ಸಿಗದೆ ದೂರ ಉಳಿದಿದ್ದಾರೆ. ಅವರ ರಾಜೀನಾಮೆಗೆ ಕಾರಣ ಆಸೆಯೋ ಅಥವಾ ಬ್ಲಾಕ್‌ಮೇಲ್‌ ಮಾಡಲಾಗುತ್ತಿದೆಯೋ ಎಂಬುದು ಗೊತ್ತಾಗಬೇಕು ಎಂದು ಹೇಳಿದರು.

ಪ್ರತಿಪಕ್ಷ ಮುಕ್ತ ಭಾರತ: ಆಪರೇಷನ್‌ ಕಮಲಕ್ಕೆ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತತಿದ್ದು, ಎಲ್ಲ ಅಧಿಕಾರವಿರುವ ಬಿಜೆಪಿ ದಿಗ್ಗಜರು ಇದನ್ನೆಲ್ಲಾ ಏಕೆ ಬಗ್ಗು ಬಡಿಯಬಾರದು. ಕಾಂಗ್ರೆಸ್‌ ಮುಕ್ತ ಭಾರತ ಎನ್ನುತ್ತಿದ್ದ ಬಿಜೆಪಿಯು ಪ್ರತಿಪಕ್ಷ ಮುಕ್ತ ಭಾರತ ಮಾಡುತ್ತಿದೆ. ಈ ಬಗ್ಗೆ ಸದನ ಸಮಿತಿ ರಚನೆಯಾಗಲಿ ಇಲ್ಲವೇ ಇತರೆ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿಯು “ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಎಂದು ಹೇಳುತ್ತದೆ. ಆದರೆ ವಾಸ್ತವದಲ್ಲಿ “ಬಿಜೆಪಿ ಕಾ ಸಾಥ್‌, ಬಿಜೆಪಿ ಕಾ ವಿಕಾಸ್‌’ ಎಂಬಂತಾಗಿದೆ. ಶಾಸಕರು, ಹಣ, ಅಧಿಕಾರದ ಆಸೆಗೆ ಪಕ್ಷಾಂತರ ಮಾಡದಂತೆ ತಡೆಯಲು ಕಠಿಣ ಕಾನೂನು ರೂಪಿಸಬೇಕಿದೆ. ಜತೆಗೆ ಈ ಪ್ರಕರಣದಲ್ಲಿ ಐತಿಹಾಸಿಕ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿದರು.

ನಾನು ಬಲಿಪಶು: ಕಾಂಗ್ರೆಸ್‌ ಶಾಸಕ ಡಾ.ರಂಗನಾಥ್‌, ಬಿಜೆಪಿಯು ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ಶಾಸಕರ ಮೇಲೆ ಒತ್ತಡ ಹೇರುತ್ತಿದೆ. ಇದಕ್ಕೆ ನಾನು ಸಹ ಬಲಿಪಶು. ನನ್ನ ಮೇಲೆ ಮೇಲೆ ಐಟಿ ದಾಳಿ ನಡೆದಾಗ ಅಧಿಕಾರಿಗಳು ಆಸ್ತಿ ಲೆಕ್ಕ ವಿವರ ಕೇಳುವ ಬದಲಿಗೆ ರಾಜಕೀಯ ಪ್ರಶ್ನೆಗಳನ್ನು ಕೇಳಿದ್ದರು. ಮೂರು ತಿಂಗಳ ಕಾಲ ನೆಮ್ಮದಿಯಾಗಿ ನಿದ್ರೆ ಮಾಡಿಲ್ಲ ಎಂದು ತಿಳಿಸಿದರು.

Advertisement

ಕುಡಿಯುವ ನೀರು, ನೀರಾವರಿ ಯೋಜನೆಗಳಿಗೆ ಹೋರಾಟಕ್ಕಾಗಿ ರಾಜೀನಾಮೆ ನೀಡದವರು ಈಗ ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಐದು ವರ್ಷದ ಅವಧಿಗೆ ಆಯ್ಕೆ ಮಾಡಿದ ಜನರಿಗೆ ಏನು ಉತ್ತರ ನೀಡುತ್ತೀರಿ. ನಿಮ್ಮ ಆತ್ಮಸಾಕ್ಷಿಗೆ ಏನು ಉತ್ತರ ಕೊಡುತ್ತೀರಿ ಎಂದು ಹೇಳಿದರು.

ಕಾಂಗ್ರೆಸ್‌ ಶಾಸಕ ಜೆ.ಎನ್‌.ಗಣೇಶ್‌, ಬಿಜೆಪಿಯು ದೇಶಾದ್ಯಂತ ಅಧಿಕಾರ ವಿಸ್ತರಣೆ ಮಾಡಿಕೊಳ್ಳುತ್ತಿದೆ. ಮಹಮ್ಮದ್‌ ಬಿನ್‌ ತುಘಲಕ್‌ ದಂಡೆತ್ತಿ ಬಂದಂತೆ ಎನ್ನುತ್ತಿದ್ದಂತೆ ಸ್ಪೀಕರ್‌ ರಮೇಶ್‌ ಕುಮಾರ್‌, ಪದೇ ಪದೇ ಭಾರತದ ಮೇಲೆ ದಂಡೆತ್ತಿ ಬಂದವನು ಘಜ್ನಿ ಮಹಮ್ಮದ್‌. ರಾಜಧಾನಿಯನ್ನು ಬದಲಾಯಿಸಿದವನು ಮಹಮ್ಮದ್‌ ಬಿನ್‌ ತುಘಲಕ್‌ ಎಂದು ಸರಿಪಡಿಸಿದರು.

ಬಳಿಕ ಮಾತು ಮುಂದುವರಿಸಿದ ಗಣೇಶ್‌, ಬಿಜೆಪಿಯು ಇತರೆ ಪಕ್ಷಗಳ ಶಾಸಕರನ್ನು ಹಣದ ಆಮಿಷವೊಡ್ಡುವ ಮೂಲಕ ನಿರ್ನಾಮ ಮಾಡಲು ಮುಂದಾಗಿದೆ. ರೈತರು, ಬಡವರಿಗಾಗಿ ಯಾರೂ ಧರಣಿ ಮಾಡಿಲ್ಲ. ಹಾಲು ಕುಡಿದ ಮಕ್ಕಳ ಉಳಿಯುವುದು ಕಷ್ಟ. ಇನ್ನು ವಿಷ ಕುಡಿದ ಮಕ್ಕಳು ಉಳಿಯುತ್ತಾರಾ. ಈಗ 15 ಶಾಸಕರು ರಾಜೀನಾಮೆ ನೀಡಿದ್ದು, ಇನ್ನೂ 30 ಮಂದಿ ರಾಜೀನಾಮೆ ನೀಡಿದರೂ ಕಾಂಗ್ರೆಸ್‌ಗೆ ಏನೂ ಆಗದು ಎಂದು ಹೇಳಿದರು.

“ಹೆಣ್ಮಕಳು ಇದೀವಿ ಬಿಟ್ಟುಬಿಡಿ..’
ವಿಧಾನಸಭೆ: ವಿಶ್ವಾಸ ಮತಯಾಚನೆಯ ಗದ್ದಲ ರಾತ್ರಿ 10.50 ಗಂಟೆಯಾದರೂ ಕಲಾಪ ಮುಂದೂಡದಿದ್ದಾಗ ಕಾಗ್ರೆಸ್‌ ನ ಮಹಿಳಾ ಸದಸ್ಯರು ರಾತ್ರಿ ತಡವಾಗಿರುವುದರಿಂದ ಮಂಗಳವಾರಕ್ಕೆ ಮುಂದೂಡುವಂತೆ ಆಗ್ರಹಿಸಿದರು.  ರೂಪಾ ಶಶಿಧರ್‌, ಲಕ್ಷ್ಮಿ ಹೆಬ್ಟಾಳ್ಕರ್‌ ಅವರು ಮಾತನಾಡಿ, ರಾತ್ರಿ 11 ಗಂಟೆಯಾಗುತ್ತಿದೆ. ದಯವಿಟ್ಟು ಸದನ ಮುಂದೂಡಿ ಎಂದು ಮನವಿ ಮಾಡಿದರು.

ಅವರಿಗೆ ಪ್ರತಿಯಾಗಿ ಮಹಿಳಾ ಬಿಜೆಪಿ ಸದಸ್ಯರು ನಾವು ಎಷ್ಟೇ ಹೊತ್ತಾದರೂ ನಾವು ಕೇಳಲು ಸಿದ್ದರಿದ್ದೇವೆ. ಯಾವುದೇ ಕಾರಣಕ್ಕೂ ಮುಂದೂಡದೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಸ್ಪೀಕರ್‌ ಪೀಠದಲ್ಲಿದ್ದ ಉಪಾಧ್ಯಕ್ಷ ಕೃಷ್ಣಾ ರೆಡ್ಡಿ, ಸದಸ್ಯರು ಗಲಾಟೆ ನಡೆಸುತ್ತಿರುವುದರಿಂದ ಯಾವುದೇ ವಿಷಯ ಕಡತಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆ ವೇಳೆ, ರಮೇಶ್‌ ಕುಮಾರ್‌ ಮತ್ತೆ ವಾಪಸ್‌ ಪೀಠಕ್ಕೆ ಆಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next