ಹೊಸದಿಲ್ಲಿ : ತ್ರಿವಳಿ ತಲಾಕ್ ಮಸೂದೆಯನ್ನು ಸಂಸತ್ತಿನ ಜಂಟಿ ಆಯ್ಕೆ ಸಮಿತಿಗೆ ಉಲ್ಲೇಖೀಸಬೇಕೆಂದು ವಿರೋಧ ಪಕ್ಷಗಳು ಇಂದು ಲೋಕಸಭೆಯಲ್ಲಿ ಆಗ್ರಹಿಸಿವೆ.
ಮಸೂದೆಯಲ್ಲಿನ ಕೆಲವು ಅಂಶಗಳು ಅಸಾಂವಿಧಾನಿಕವಾಗಿದ್ದು ಕರಡು ಕಾನೂನನ್ನು ಇನ್ನಷ್ಟು ಆಳವಾಗಿ ಅವಲೋಕಿಸಬೇಕಾದ ಅಗತ್ಯವಿದೆ ಎಂದು ವಿರೋಧ ಪಕ್ಷಗಳು ಒಕ್ಕೊರಲಿನಿಂದ ಹೇಳಿವೆ.
ಇಂದು ಗುರುವಾರ ಮಧ್ಯಾಹ್ನ ಸದನ ಮತ್ತೆ ಸಮಾವೇಶಗೊಂಡಾಗ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆ (ತ್ರಿವಳಿ ತಲಾಕ್ ಮಸೂದೆ) ಯನ್ನು ಎರಡೂ ಸದನಗಳ ಜಂಟಿ ಆಯ್ಕೆ ಸಮಿತಿಗೆ ಹೆಚ್ಚಿನ ಅವಲೋಕನಕ್ಕಾಗಿ ಉಲ್ಲೇಖೀಸಬೇಕು ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.
ಎಐಎಡಿಎಂಕೆ ನಾಯಕ ಪಿ ವೇಣುಗೋಪಾಲ್, ಟಿಎಂಸಿ ಸದಸ್ಯ ಸುದೀಪ್ ಬಂದೋಪಾಧ್ಯಾಯ, ಎಐಎಂಐಎಂ ನ ಅಸಾದುದ್ದೀನ್ ಓವೈಸಿ ಮತ್ತು ಎನ್‌ಸಿಪಿಯ ಸುಪ್ರಿಯಾ ಸುಳೆ ಅವರು ಕೂಡ ಇದೇ ಆಗ್ರಹವನ್ನು ಮುಂದಿಟ್ಟರು.
ಇದೇ ರೀತಿಯ ಮಸೂದೆಯನ್ನು ಲೋಕಸಭೆಯಲ್ಲಿ ಈ ಹಿಂದೆ ಚರ್ಚಿಸಲಾಗಿದ್ದು ಸದಸ್ಯರು ಚರ್ಚೆಯ ವೇಳೆ ತಮ್ಮ ಪ್ರಶ್ನೆಗಳನ್ನು ಗುರುತಿಸಿಟ್ಟುಕೊಳ್ಳಬಹುದು ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದರು.
ಮಸೂದೆಯನ್ನು ಚರ್ಚಿಸದೆ ಇದ್ದಕ್ಕಿದ್ದಂತೆ ಅದನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂಬ ಆಗ್ರಹವನ್ನು ಮಾಡಲಾಗದು ಎಂದು ಮಹಾಜನ್ ಸದಸ್ಯರಿಗೆ ಹೇಳಿದರು.
ತ್ರಿವಳಿ ತಲಾಕ್ ನೀಡುವ ಅಪರಾಧ ಎಸಗುವ ಮುಸ್ಲಿಮ್ ಪುರುಷನನ್ನು ದಂಡಿಸುವುದಕ್ಕೆ ಅವಕಾಶ ಕಲ್ಪಿಸುವ ಈ ಕಾನೂನು ಮುಸ್ಲಿಂ ಮಹಿಳೆಯರ ಸಶಕ್ತೀಕರಣ ಮತ್ತು ನ್ಯಾಯಕ್ಕೆ ಸಂಬಂಧಿಸಿದೆಯೇ ಹೊರತು ರಾಜಕಾರಣದ ಉದ್ದೇಶವನ್ನು ಹೊಂದಿರುವುದಿಲ್ಲ ಎಂದು ಸದನದಲ್ಲಿ ಠರಾವು ಮಂಡಿಸಿ ಮಾತನಾಡಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.