ಹೊಸದಿಲ್ಲಿ: ನಾವು ಉಗ್ರರನ್ನು ಅವರ ನೆಲಕ್ಕೆ ಹೋಗಿ ಕೊಂದು ಬಂದಾಗ ವಿರೋಧ ಪಕ್ಷಗಳ ನಿಲುವು ಏನಿತ್ತು ಎಂದು ನೀವು ನೋಡಿದ್ದೀರಲ್ಲಾ. ಈಗ ವಿಜ್ಞಾನಿಗಳ ಸಾಧನೆಯ ಮೇಲೂ ವಿರೋಧ ಪಕ್ಷದವರು ಅದೇ ಅಲಕ್ಷ್ಯ ತೋರುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ಮೇಲೆ ಟೀಕಾ ಪ್ರಹಾರ ನಡೆಸಿದರು. .
ಈಶಾನ್ಯ ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಪ್ರಧಾನಿ ಮೋದಿಯವರು ಶನಿವಾರ ಅರುಣಾಚಲ ಪ್ರದೇಶದಲ್ಲಿ ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು.
ತನ್ನ ಭಾಷಣದಲ್ಲಿ ವಿಪಕ್ಷಗಳನ್ನು ಟೀಕಿಸಿದ ಪ್ರಧಾನಿ ಮೋದಿಯವರು, ದೇಶವು ಯಾವುದೇ ಸಾಧನೆ ಮಾಡಿದಾಗ ನಿಮಗೆ ಸಂತೋಷವಾಗುತ್ತದಲ್ಲವೇ ? ಆದರೆ ಕೆಲವರು ದೇಶದ ಸಾಧನೆಯನ್ನು ಕೇಳಿ ನಿರಾಶೆಗೊಳ್ಳುತ್ತಾರೆ . ಇಂತವರಿಗೆ ನೀವು ಚುನಾವಣೆಯಲ್ಲಿ ಬುದ್ದಿ ಕಲಿಸಿ ಎಂದು ಜನರಿಗೆ ಕರೆ ಕೊಟ್ಟರು.
ನಿಮ್ಮ ಸರಕಾರ ನಿಮ್ಮ ನಂಬಿಕೆಗಳಿಗೆ ಗೌರವಿಸಿದೆ. ಸ್ವಾತಂತ್ರ್ಯ ಬಂದ ಏಳು ದಶಕದ ನಂತರ ಅರುಣಾಚಲ ಪ್ರದೇಶದಲ್ಲಿ ರೈಲು ಮಾರ್ಗಗಳ ಸುಧಾರಣೆಗೆ ಈ ಕಾವಲುಗಾರ ನೆರವಾಗಿದ್ದಾನೆ. ಇಷ್ಟು ವರ್ಷಗಳಲ್ಲಿ ಅರುಣಾಚಲ ಪ್ರದೇಶದ ಕೇವಲ 40 ಶೇಕಡಾದಷ್ಟು ಜನರಿಗೆ ವಿದ್ಯುತ್ ಸೌಲಭ್ಯವಿತ್ತು. ಆದರೆ ಈಗ ಪ್ರತಿಯೊಂದು ಮನೆಗೂ ವಿದ್ಯುತ್ ಸೌಲಭ್ಯ ಒದಗಿಸಲಾಗಿದೆ. ನಿಮ್ಮೆಲ್ಲರ ಆಶೀರ್ವಾದಿಂದ ಇದೆಲ್ಲಾ ಸಾಧ್ಯವಾಯಿತು ಎಂದರು.
2014ರ ಚುನಾವಣೆಯಲ್ಲಿ ಬಿಜೆಪಿ ಈಶಾನ್ಯ ರಾಜ್ಯಗಳಲ್ಲಿ ಒಟ್ಟು 14 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.