Advertisement

ಪ್ರಧಾನಿ ಪ್ರಚಾರದಿಂದ ಪ್ರತಿಪಕ್ಷಗಳಿಗೆ ನಡುಕ

12:45 AM Apr 11, 2019 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ನಿನ್ನೆ ಎರಡು ಕಡೆ ಬಹಿರಂಗ ಪ್ರಚಾರ ನಡೆಸಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿರುವುದು ಪ್ರತಿಪಕ್ಷಗಳಲ್ಲಿ ನಡುಕ ಹುಟ್ಟಿಸಿದೆ ಎಂದು ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಹೇಳಿದರು.

Advertisement

ಬುಧವಾರ ಬೆಳಗ್ಗೆ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ನಂದೀಶ್‌ ರೆಡ್ಡಿ, ಚಿತ್ರನಟಿ ಶ್ರುತಿ, ಸ್ಥಳೀಯ ಬಿಬಿಎಂಪಿ ಸದಸ್ಯರು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಅನೇಕ ಕಡೆ ಪ್ರಚಾರ ನಡೆಸಿದರು.

ನಾಗರೇಶ್ವರ ನಾಗೇನಹಳ್ಳಿ, ಕೆ.ನಾರಾಯಣಪುರ, ಕೊತ್ತನೂರು, ಕೈಲಾಸನಹಳ್ಳಿ, ಗೆಡಲಹಳ್ಳಿ, ವಡರಪಾಳ್ಯ, ಚಳ್ಳಕೆರೆ, ಮೇಗನಪಾಳ್ಯ, ಬಾಬುಸಾಬ್‌ ಪಾಳ್ಯ, ಜ್ಯೋತಿನಗರ, ಜಯಂತಿನಗರ, ಹೊರಮಾವು, ಹೊಯ್ಸಳನಗರ, ಮುನೇಶ್ವರನಗರ ಸೇರಿದಂತೆ ಅನೇಕ ಕಡೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ ಈ ಬಾರಿಯೂ ಬಿಜೆಪಿಯನ್ನು ಬೆಂಬಲಿಸುವಂತೆ ಮತದಾರರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡರು, ನರೇಂದ್ರ ಮೋದಿ ಅವರು ಮಂಗಳವಾರ ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿರುವುದು ಕಾರ್ಯಕರ್ತರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. 28 ಕ್ಷೇತ್ರಗಳಲ್ಲೂ ಮೋದಿ ಅವರ ಸಂದೇಶ ಸಂಚಲನ ಸೃಷ್ಟಿಸಿದೆ ಎಂದರು.

ಐದು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೆ ಆಡಳಿತ ನೀಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಸಲ್ಲುತ್ತದೆ. ಹಿಂದಿನ ಯುಪಿಎ ಅವಧಿಯಲ್ಲಿ ಆಕಾಶದಿಂದ ನೆಲದವರೆಗೂ ಹಗರಣಗಳ ಸರಮಾಲೆಯೇ ಸೃಷ್ಟಿಯಾಗಿತ್ತು. ಇದರಿಂದ ವಿಶ್ವದಲ್ಲಿ ಭಾರತದ ಮುಕುಟಕ್ಕೆ ಕಳಂಕ ಬಂದಿತ್ತು ಎಂದು ವಿಷಾದಿಸಿದರು.

Advertisement

ಮೋದಿ ಅವರು ಪ್ರಧಾನಿಯಾದ ಮೇಲೆ ಭಾರತವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದರು. ಇಂದು ಅಮೆರಿಕ, ಚೀನಾ, ಜಪಾನ್‌ ಸೇರಿದಂತೆ ಮುಂದುವರಿದ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೋದಿ ಅವರ ಜನಪ್ರಿಯತೆಯನ್ನು ಸಹಿಸದೆ ವಿರೋಧ ಪಕ್ಷಗಳು ವಿನಾಕಾರಣ ಸುಳ್ಳು ಆರೋಪ ಮಾಡುತ್ತಿವೆ. “ದೇಶವೇ ನನ್ನ ಕುಟುಂಬ’ ಎಂದ ಮೊದಲ ಪ್ರಧಾನಿ ಎಂದರೆ ನರೇಂದ್ರ ಮೋದಿ ಅವರೊಬ್ಬರೇ ಎಂದು ಪ್ರಶಂಸಿಸಿದರು.

“ನಾನು ಸಂಸದನಾಗುವ ಮೊದಲು ಕ್ಷೆೇತ್ರದಲ್ಲಿ ಸಾಕಷ್ಟು ಮೂಲ ಸೌಕರ್ಯಗಳ ಸಮಸ್ಯೆಗಳಿದ್ದವು. ಕುಡಿಯುವ ನೀರು, ಸಮುದಾಯ ಭವನಗಳ ನಿರ್ಮಾಣ, ಶೌಚಾಲಯ, ಅಗತ್ಯವಿರುವ ಕಡೆ ರಸ್ತೆಗಳ ವಿಸ್ತರಣೆ, ಮಹಿಳೆಯರ ಸಬಲೀಕರಣ, ಬಡವರಿಗೆ ನಿವೇಶನ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿಸಿದ್ದೇನೆ.

ಯಾರು ಏನೇ ಅಪಪ್ರಚಾರ, ಟೀಕೆ ಮಾಡಲಿ, ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಜನ ಪ್ರಬುದ್ಧರಾಗಿದ್ದು, 2ನೇ ಬಾರಿಗೆ ನನ್ನನ್ನು ಅತ್ಯಧಿಕ ಮತಗಳ ಅಂತರದಿಂದ ಆಯ್ಕೆ ಮಾಡಲಿದ್ದಾರೆ,’ ಎಂದು ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಸದಾನಂದಗೌಡ ಅವರು ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು. ಉದ್ಯಾನವನಗಳಲ್ಲಿ ಹಿರಿಯ ನಾಗರಿಕರು, ಮಹಿಳೆಯರು, ಯುವಕರನ್ನು ಭೇಟಿ ಮಾಡಿಮತ ಯಾಚಿಸಿದರು. ಮನೆಮನೆಗೆ ತೆರಳಿ ನರೇಂದ್ರ ಮೋದಿಯವರ ಮತ್ತು ಪಕ್ಷದ ಅಭಿವೃದ್ಧಿ ಕೆಲಸಗಳನ್ನು ಮನವರಿಕೆ ಮಾಡಿಕೊಟ್ಟು, ಬಿಜೆಪಿಗೆ ಮತ ಹಾಕುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next