ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಿಂದ 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದು ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರುದ್ಧವಾಗಿದ್ದು, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಇದು ಭಾರೀ ಅಸಮಾನತೆ ಸೃಷ್ಟಿಸಲಿದೆ ಎಂದು ಕರ್ನಾಟಕ ಪ್ರದೇಶ ಸಾಮಾನ್ಯ ನಾಗರಿಕರ ಧ್ವನಿ ವೇದಿಕೆ ಕಳವಳ ವ್ಯಕ್ತಪಡಿಸಿತು.
ಇದನ್ನೂ ಓದಿ:ಜಾಂಬೂರಿ: ನೀಲ ಕಡಲಿನಲಿ ಕಣ್ಣು ಹಾಯಿಸಿದುದ್ದಕ್ಕೂ ಕೌತುಕದ ಹಾಯಿ ದೋಣಿ
ಶೈಕ್ಷಣಿಕ ವರ್ಷದ ಕೊನೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿಮೋಚನೆಯಿಲ್ಲದೇ, ಏಕಾಏಕಿ ಕೈಗೊಂಡಿರುವ ತೀರ್ಮಾನದಿಂದ ಲಕ್ಷಾಂತರ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಅಲ್ಲದೇ, 5ನೇ ತರಗತಿ ವಿದ್ಯಾರ್ಥಿಗಳು ಪಬ್ಲಿಕ್ ಪರೀಕ್ಷೆ ಬರೆಯುವಷ್ಟು ಮಾನಸಿಕವಾಗಿ ಸಿದ್ಧರಿರುವುದಿಲ್ಲ. ಆದ್ದರಿಂದ 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ತೀರ್ಮಾನವನ್ನು ಕೂಡಲೇ ಕೈ ಬಿಡಬೇಕು ಎಂದು ಕರ್ನಾಟಕ ಪ್ರದೇಶ ಸಾಮಾನ್ಯ ನಾಗರಿಕರ ಧ್ವನಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಎಸ್. ಲಕ್ಷ್ಮೀನಾರಾಯಣ ಒತ್ತಾಯಿಸಿದ್ದಾರೆ.
ಪಬ್ಲಿಕ್ ಪರೀಕ್ಷೆಗೆ ಡಿ.12ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಸ್ಟೇಟ್ ಬೋರ್ಡ್ ಪಠ್ಯಕ್ರಮಕ್ಕೆ ಮಾತ್ರ ಅನ್ವಯಿಸಲಾಗುತ್ತಿದೆ ವಿನಾ ಯಾವುದೇ ಕೇಂದ್ರೀಯ ಶಿಕ್ಷಣ ಸಂಸ್ಥೆ ಸಿಬಿಎಸ್‌ಇ ಪಠ್ಯಕ್ರಮಕ್ಕೆ ಈ ಅಧಿಸೂಚನೆ ಅನ್ವಯಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಯಾವುದೋ ಹೊಸ ತೀರ್ಮಾನ ಕೈಗೊಂಡೆ ಎಂದು ಹೇಳಿಕೊಳ್ಳಲು ಸಚಿವರು ಇಂತಹ ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಇದರಿಂದಾಗಿ ಮಕ್ಕಳು, ಶಿಕ್ಷಕರು ಹಾಗೂ ಪೋಷಕರು ತೊಂದರೆಗೆ ಒಳಗಾಗುತ್ತಾರೆ ಎಂಬ ಅರಿವು ಇಲ್ಲದಂತೆ ವರ್ತಿಸುತ್ತಿದ್ದಾರೆ.
ಈ ಕುರಿತು ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನಿಸುತ್ತೇನೆ. ಅಲ್ಲಿಯೂ ಇದಕ್ಕೆ ಬೆಂಬಲ ಸಿಗದಿದ್ದರೆ, ಅಧಿವೇಶನದ ನಂತರ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಶಿವಲಿಂಗ, ಮಹಿಳಾ ಘಟಕದ ರಾಜ್ಯ ಘಟಕ ಅಧ್ಯಕ್ಷೆ ಆಶಾ, ಕಾರ್ಯದರ್ಶಿ ರಾಜೇಶ್ವರಿ, ಪೋಷಕರಾದ ನೇತ್ರಾ, ಅರ್ಚನಾ, ಸಾಧನಾ ರಾಜೇಂದ್ರ ಇದ್ದರು.